Advertisement

ಹೆಚ್ಚುವರಿ ಕೂಲಿ ಕೊಟ್ಟರೂ ಸಿಗದ ಕೃಷಿ ಕಾರ್ಮಿಕರು

04:00 PM Oct 12, 2019 | Suhan S |

ಚನ್ನರಾಯಪಟ್ಟಣ: ಈ ಬಾರಿ ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಕೃಷಿ ಚಟುವಟಿಕೆ ಬರದಿಂದ ಸಾಗಿದೆ. ಆದರೆ, ಕೂಲಿ ಕಾರ್ಮಿಕರ ಕೊರತೆ ಉಂಟಾಗಿದ್ದು ಬೆಳೆಗಳಲ್ಲಿ ಕಳೆ ಕೀಳಿಸಲು ರೈತರು ಪರದಾಡುವಂತಾಗಿದೆ.

Advertisement

ತಾಲೂಕಿನಲ್ಲಿ ಸತತವಾಗಿ ಮಳೆಯಾಗುತ್ತಿರುವ ಪರಿಣಾಮ ಮೆಕ್ಕೆಜೋಳ, ರಾಗಿ, ಭತ್ತ, ಶುಂಠಿ ಸೋರೆಕಾಯಿ ಸೇರಿದಂತೆ ವಿವಿಧ ಬೆಳೆಗಳು ಉತ್ತಮವಾಗಿ ಫ‌ಸಲು ನೀಡಿವೆ. ಅಷ್ಟೇ ಪ್ರಮಾಣದಲ್ಲಿ ಕಳೆ ಜಮೀನಿ ನಲ್ಲಿ ಬೆಳೆಯುತ್ತಿದೆ. ಇದನ್ನು ಕೀಳಿಸಲು ಕೃಷಿ ಕಾರ್ಮಿಕರು ಸಕಾಲಕ್ಕೆ ಲಭಿಸುತ್ತಿಲ್ಲ. ಇದರಿಂದಾಗಿ ರೈತರು ಚಿಂತೆಗೀಡಾಗುತ್ತಿದ್ದಾರೆ. ಕೆಲ ರೈತರು ಬೆಳಗ್ಗೆ 6ಕ್ಕೆ ಕೃಷಿ ಭೂಮಿಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿ ಕಳೆ ನಾಶ ಮಾಡಲು ಮುಂದಾಗುತ್ತಿದ್ದಾರೆ.

ಕಳೆ ಪ್ರಮಾಣ ಹೆಚ್ಚಳ: ಕೃಷಿ ಭೂಮಿಯಲ್ಲಿ ಫ‌ಸಲಿನ ಜೊತೆಯಲ್ಲಿ ಕಳೆ ಹೆಚ್ಚು ಬೆಳೆಯುತ್ತಿರುವುದರಿಂದ ಬೆಳೆ ಸರಿಯಾಗಿ ಬರುತ್ತಿಲ್ಲ. ರಾಗಿ ಪೈರಿಗಿಂತ ಕಳೆಯೇ ಹೆಚ್ಚಾಗಿದೆ. ಇನ್ನು ಜೋಳದ ಹೊಲದಲ್ಲಿ ಮಾರುದ್ದ ಹುಲ್ಲು ಬೆಳೆದಿರುವ ಪರಿಣಾಮ ಜೋಳಕ್ಕೆ ಹಾಕುವ ಗೊಬ್ಬರ ಕಳೆಯ ಪಾಲಾಗುತ್ತಿದೆ. ಇದರಿಂದಾಗಿ ಫ‌ಸಲು ಕಡಿಮೆ ಪ್ರಮಾಣದಲ್ಲಿ ಬರುವ ಸಾಧ್ಯತೆಯಿದೆ. ಮಳೆ ನಿತ್ಯವೂ ಬರುತ್ತಿರುವುದರಿಂದ ಕಳೆ ಪ್ರಮಾಣವೂ ಹೆಚ್ಚಾಗುವ ಆತಂಕವಿದೆ.

ಗ್ರಾಮೀಣ ಭಾಗದಲ್ಲೂ ಸಮಸ್ಯೆ: ಕೆಲಸಕ್ಕೆ ಕಾರ್ಮಿ ಕರು ಬೇಕಾಗಿದ್ದರೆ ಎಂಬ ನಾಮಫ‌ಲಕಗಳು ಪಟ್ಟಣ ಹಾಗೂ ಮಹಾನಗರಗಳಲ್ಲಿ ಹಲವು ಕಾರ್ಖಾನೆ ಮುಂಭಾಗದ ಬಾಗಿಲಿಗೆ ಹಾಕಿರುತ್ತಾರೆ. ಇದೇ ಪರಿಸ್ಥಿತಿ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ರೈತರು ತಮ್ಮ ಹೊಲದಲ್ಲಿ ಕೂಲಿ ಕಾರ್ಮಿಕರು ಬೇಕಾಗಿದ್ದಾರೆ ಎಂಬ ನಾಮಫ‌ಲಕ ಹಾಕುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.

ಕೂಲಿ ದುಬಾರಿ ಆದರೂ ಕಾರ್ಮಿಕರ ಕೊರತೆ: ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ದಿನಗೂಲಿ ಮಹಿಳಾ ಕಾರ್ಮಿಕರಿಗೆ 150 ರಿಂದ 200 ರೂ. ನೀಡಿದರೆ ಪುರುಷರಿಗೆ 250 ರಿಂದ 300 ರೂ. ಕೂಲಿ ನೀಡಿ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಭೋಜನ ನೀಡ ಬೇಕಿದೆ. ಇದಲ್ಲದೆ ಪುರುಷರಿಗೆ ರಾತ್ರಿ ಮದ್ಯ ಸೇವಿಸಲು ಹಣ ನೀಡಬೇಕು. ಇಷ್ಟಾದರೂ ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆ ಎದ್ದು ಕಾಡುತ್ತಿದೆ.

Advertisement

ಗಾರೆ ಕೆಲಸಕ್ಕೆ ಹೋಗುತ್ತಾರೆ: ಕೃಷಿ ಕೆಲಸ ಬಿಟ್ಟು ಗ್ರಾಮೀಣ ಭಾಗದ ಅನೇಕ ಮಂದಿ ನಗರ ಪ್ರದೇಶ ದಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಾರೆ. ಅಲ್ಲಿ ನಿರಂತರವಾಗಿ ವರ್ಷಪೂರ್ತಿ ಕೆಲಸ ದೊರಯುತ್ತದೆ. ಆದರೆ ಕೃಷಿ ಕೆಲಸ ಮಳೆ ಬಿದ್ದಾಗ ಮಾತ್ರ. ಒಂದು ವೇಳೆ ಮಳೆ 2-3 ವರ್ಷ ಕೈ ಕೊಟ್ಟರೆ ಜೀವನ ನಿರ್ವ ಹಣೆಗೆ ತೊಂದರೆ ಪಡಬೇಕಾಗುತ್ತದೆ. ಹೀಗಾಗಿ ಗಾರೆ ಕೆಲಸಕ್ಕೆ ಹೆಚ್ಚು ಮಂದಿ ಗ್ರಾಮೀಣ ಭಾಗದಿಂದ ತೆರಳುತ್ತಿದ್ದಾರೆ.

ಗಾರೆ ಕೆಲಸಕ್ಕೆ ಹೋಲಿಸಿದರೆ ಕೃಷಿ ಕೂಲಿ ಕಡಿಮೆಯಿದೆ :  ಗಾರೆ ಕೆಲಸ ಮಾಡುವ ಮಹಿಳಾ ಕೂಲಿ ಕಾರ್ಮಿಕರಿಗೆ 250 ರಿಂದ 300 ರೂ. ನೀಡಿದರೆ ಪುರಷರಿಗೆ 450 ರಿಂದ 500 ರೂ. ದಿನವಹಿ ನೀಡಲಾಗುತ್ತದೆ. ಇದರೊಂದಿಗೆ ಮಧ್ಯಾಹ್ನದ ಭೋಜನ ಇರುತ್ತದೆ. ಭಾನುವಾರ ರಜೆ ಮಾಡುತ್ತಾರೆ. ಗಾರೆ ಕೆಲಸ ಮಾಡಿಸುವ ಗುತ್ತಿಗೆ ದಾರರು 15 ಸಾವಿರದಿಂದ 50 ಸಾವಿರದವರೆಗೆ ಕಾರ್ಮಿಕರಿಗೆ ಮುಂಗಡ ಹಣ ನೀಡಿ ಪ್ರತಿ ತಿಂಗಳು ಇಂತಿಷ್ಟು ಹಣ ಮುರಿದುಕೊಳ್ಳುತ್ತಾರೆ. ಇಷ್ಟೆಲ್ಲಾ ಇರುವಾಗ ಒಂದೆರಡು ದಿನ ಕೃಷಿ ಕೆಲಸಕ್ಕೆ ಯಾಕೆ ಹೋಗಬೇಕು ಎನ್ನುವುದು ಕಾರ್ಮಿಕರ ಪ್ರಶ್ನೆಯಾಗಿದೆ.

 

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next