ವಿಟ್ಲ: ಬಂಟ್ವಾಳ ತಾಲೂಕಿನ ಕುರ್ನಾಡು ಬೃಹದಾದ ಗದ್ದೆಯಲ್ಲಿ ಮಕ್ಕಳ ಕಲರವ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆಸರಿನಲ್ಲಿ ಓಡಾಡಿದರು. ಬಿದ್ದರು, ಗೆದ್ದರು. ಸೋತರು. ಎಲ್ಲವನ್ನೂ ಮರೆತು ಸಂಭ್ರಮಪಟ್ಟರು. ಹಾಳೆ ಬಂಡಿ ಊಟ ಹಳೆಯ ಸಂಪ್ರದಾಯದ ಮಕ್ಕಳಾಟವನ್ನು ನೆನಪಿಸಿತು. ಮಕ್ಕಳ ಮೂರು ಕಾಲಿನ ಓಟ ಮತ್ತು ಕೂಸುಮರಿ ಆಟವು ನೋಡುಗರನ್ನು ನಗೆಗಡಲಿನಲ್ಲಿ ತೇಲಿಸಿತು. ಮಂಗಳೂರು ನಗರದ ವಿದ್ಯಾರ್ಥಿಗಳ ಸಂಭ್ರಮವನ್ನು ಹಳ್ಳಿಯ ನಾಗರಿಕರು, ಕೃಷಿಕರು, ಜನಪ್ರತಿನಿಧಿಗಳು ವೀಕ್ಷಿಸಿ, ಸಂತಸವನ್ನು ವ್ಯಕ್ತಪಡಿಸಿದರು.
ಇದು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕ್ರೀಡಾ ಸಂಘಗಳ ಆಶ್ರಯದಲ್ಲಿ ಕುರ್ನಾಡು ಅಂಗಣೆಮಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ ಇರುವ ಗದ್ದೆಯಲ್ಲಿ ಪದವಿ, ಪದವಿಪೂರ್ವ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕಂಡಡೊಂಜಿ ದಿನದ ಅರ್ಥಪೂರ್ಣ ಕಾರ್ಯಕ್ರಮ.
ಜಿ.ಪಂ.ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಹಿಂಗಾರ ಅರಳಿಸಿ, ಉದ್ಘಾಟಿಸಿ, ಮಾತನಾಡಿ, ಗ್ರಾಮೀಣ ಪ್ರದೇಶದ ಗದ್ದೆಗೆ ನಗರದ ಮಕ್ಕಳನ್ನು ಇಳಿಸಿ, ಬೇಸಾಯದ ಮಾಹಿತಿ ನೀಡುವ ಶಿಕ್ಷಣ ಅರ್ಥಪೂರ್ಣವಾಗಿದೆ. ಪಠ್ಯದ ಜತೆಗೆ ಭಾರತೀಯ ಸಂಸ್ಕೃತಿ, ಶಿಷ್ಟಾಚಾರ, ಆಚಾರ, ವಿಚಾರಗಳನ್ನು ತಿಳಿಸುವ ಈ ಸಂಪ್ರದಾಯ ಶಿಕ್ಷಣ ಮಾರ್ಗದಲ್ಲಿ ಅತೀ ಅಗತ್ಯ. ಗದ್ದೆಯಲ್ಲಿ ಆಟೋಟಗಳನ್ನು ಏರ್ಪಡಿಸುವುದು ಕೂಡಾ ಸೂಕ್ತವಾಗಿದೆ. ಆ ಅವಕಾಶವನ್ನು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಒದಗಿಸುತ್ತಿರುವುದು ಅತ್ಯಂತ ಶ್ರೇಷ್ಠವಾಗಿದೆ ಎಂದು ಹೇಳಿದರು.
ಕುರ್ನಾಡು ಗ್ರಾ.ಪಂ.ಅಧ್ಯಕ್ಷೆ ಶೈಲಜಾ ಹೇಮನಾಥ ಮಿತ್ತಕೋಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಕುರ್ನಾಡು ಗ್ರಾ.ಪಂ.ಸದಸ್ಯ ಗೋಪಾಲ ಬಂಗೇರ, ಮಾಜಿ ಅಧ್ಯಕ್ಷ ಕೆ.ದೇವದಾಸ್ ಭಂಡಾರಿ, ಕುರ್ನಾಡು ಹನ್ನೆರಡು ಮುಡಿ ಶ್ರೀ ನಾಗಬ್ರಹ್ಮ ಆದಿಮಾಯೆ ದೇವಸ್ಥಾನದ ಮೊಕ್ತೇಸರ ರಮೇಶ್ ಕುಮಾರ್, ಪ್ರಗತಿಪರ ಕೃಷಿಕ ಕೊಣಾಜೆ ಶಂಕರ ಭಟ್, ಪ್ರಗತಿಪರ ಕೃಷಿಕ ಭೋಜ, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್, ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ಶುಭಹಾರೈಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೀವನ್‌ದಾಸ್ ಅವರು ಪ್ರಸ್ತಾವಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್. ಸ್ವಾಗತಿಸಿ, ಉಪನ್ಯಾಸಕ ಸೂರ್ಯನಾರಾಯಣ ಭಟ್ ವಂದಿಸಿದರು. ಅಂಕಿತಾ ನೀರ್ಪಾಜೆ, ದಿವ್ಯಶ್ರೀ, ಪ್ರಶಾಂತ್ ಗಾಂವ್ಕರ್ ಆಶಯಗೀತೆ ಹಾಡಿದರು. ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ನಿರ್ವಹಿಸಿದರು. ಉಪನ್ಯಾಸಕ ಪ್ರವೀಣ್ ಪಿ. ಸಹಕರಿಸಿದರು.
ಬಳಿಕ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ 100 ಮೀ ಓಟ, ಹಾಳೆ ಬಂಡಿಯನ್ನು ಎಳೆದುಕೊಂಡು ಓಟ, ಮೂರು ಕಾಲು ಓಟ, ಕೂಸುಮರಿ, ಹಗ್ಗಜಗ್ಗಾಟ, ನಿಧಿಶೋಧ ಇತ್ಯಾದಿ ಆಟೋಟಗಳನ್ನು ಏರ್ಪಡಿಸಲಾಯಿತು.