Advertisement
ರಾಜ್ಯದ ಎಲ್ಲ 165 ಎಪಿಎಂಸಿಗಳಿಗೆ ಮುದ್ರಣ ಸಾಮಗ್ರಿ ಪೂರೈಸುವ ಮುದ್ರಣಾಲಯವನ್ನು ಖಾಸಗಿ ನಿರ್ವಹಣೆಗೆ ನೀಡುವ ಹಾಗೂ ಇಡೀ ರಾಜ್ಯದ ರೈತರಿಗೆ, ಎಪಿಎಂಸಿಗೆ ಕೃಷಿ ಮಾರುಕಟ್ಟೆ ಮಾಹಿತಿ ನೀಡುವ ಮಾಸಪತ್ರಿಕೆಯ ಕಚೇರಿಯನ್ನು ಬೆಂಗಳೂರಿಗೆ ಹೊತ್ತೂಯ್ಯುವ ಯತ್ನ ನಡೆಯುತ್ತಿದೆ.
Related Articles
Advertisement
ಉತ್ತರಕ್ಕಿಲ್ಲವೇ ಸಾಮರ್ಥ್ಯ?: 45 ವರ್ಷಗಳಿಂದ ನಿರಂ ತರವಾಗಿ ಪತ್ರಿಕೆ ಹುಬ್ಬಳ್ಳಿಯಿಂದ ಹೊರ ಬರುತ್ತಿದ್ದು, ಸುಮಾರು 25,000 ಪ್ರತಿಗಳು ಮುದ್ರಣವಾಗುತ್ತಿವೆ. ವಾರ್ಷಿಕ ಚಂದಾದಾರರನ್ನು ಹೊಂದಿದೆ. ಕೃಷಿಪೇಟೆ ಮಾಸಪತ್ರಿಕೆ ಮುದ್ರಣಕ್ಕೆ ಪೂರಕವಾಗಿಯೇ 1982ರಲ್ಲಿ ಹುಬ್ಬಳ್ಳಿಯಲ್ಲಿ ಮುದ್ರಣಾಲಯವೊಂದನ್ನು ಆರಂಭಿಸಲಾಗಿತ್ತು.
ಇದೇ ಮುದ್ರಣಾಲಯದಲ್ಲಿ ರಾಜ್ಯದ ಎಲ್ಲ 165 ಎಪಿಎಂಸಿಗಳಿಗೆ ಅಗತ್ಯವಿರುವ ಏಕರೂಪ ರಿಜಿಸ್ಟರ್, ಫಾರಂಗಳು, ಸಾಮಾನ್ಯ ರಸೀದಿ ಪುಸ್ತಕ, ತೂಕದ ಪಟ್ಟಿ, ಖರೀದಿದಾರರ ಬಿಲ್ ಬುಕ್, ಮಾರಾಟ ಪಟ್ಟಿ ಪುಸ್ತಕ, ಪ್ರವೇಶ ಪತ್ರ, ವಿಕ್ರಿ ಪಟ್ಟಿ ಪುಸ್ತಕ, ಟೆಂಡರ್ ಸ್ಲಿಪ್, ಸಾಗಣೆ ರಹದಾರಿ ಪತ್ರ ಇನ್ನಿತರ ಮುದ್ರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೃಷಿಪೇಟೆ ಮಾಸಪತ್ರಿಕೆ ಹಾಗೂ ಮುದ್ರಣಾಲಯ ಲಾಭ- ನಷ್ಟವಿಲ್ಲದ ಆಧಾರದಲ್ಲಿ ನಡೆಯುತ್ತಿವೆ.
ಹಿರಿಯ ಅಧಿಕಾರಿಗಳು ಮಾತ್ರ ಇದೊಂದು ನಷ್ಟದ ಬಾಬತ್ತು, ಹುಬ್ಬಳ್ಳಿಯ ಬದಲು ಅದನ್ನು ಬೆಂಗಳೂರಿಗೆ ಸ್ಥಳಾಂತರಿಸ ಬೇಕು. ಮುದ್ರಣಾಲಯದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಿ, ಮಾಸಪತ್ರಿಕೆ ಮುದ್ರಣವನ್ನು ಹೊರಗುತ್ತಿಗೆ ನೀಡಬೇಕೆಂಬ ಹಠಕ್ಕೆ ಬಿದ್ದವರಂತೆ ವರ್ತಿಸತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅ.11ರಂದು ಬೆಂಗಳೂರಿನಲ್ಲಿ ನಡೆದ ಮಂಡಳಿ ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕೃಷಿಪೇಟೆ ಮಾಸ ಪತ್ರಿಕೆ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಗುಣಮಟ್ಟದ ಪತ್ರಿಕೆಯನ್ನು ಹುಬ್ಬಳ್ಳಿಯಿಂದ ಹೊರತರಲು ಸಾಧ್ಯವಿಲ್ಲವೇ ಅಥವಾ ಉತ್ತರ ಕರ್ನಾಟಕಕ್ಕೆ ಅಂತಹ ಸಾಮರ್ಥ್ಯ ಇಲ್ಲವೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು.
ಪತ್ರಿಕೆ ಕಚೇರಿಯಲ್ಲಿ ಕಳೆದ 20-25 ವರ್ಷಗಳಿಂದ ಅನುಕಂಪಾಧಾರಿತ ಹೊರತುಪಡಿಸಿ ಉಳಿದ ಯಾವುದೇ ಹುದ್ದೆ ಭರ್ತಿ ಮಾಡಿಲ್ಲ. ಪತ್ರಿಕೆ ಸಲಹಾ ಮಂಡಳಿ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕೆಂದು ನಿಯಮ ಇದ್ದರೂ ಹಲವು ವರ್ಷಗಳಿಂದ ಅದು ಸಮರ್ಪಕವಾಗಿ ನಡೆಯುತ್ತಿಲ್ಲ. ಮುದ್ರಣಾಲಯದ ಮೇಲ್ದರ್ಜೆಗೆಂದು ಅಂದಾಜು 1 ಕೋಟಿ ರೂ.ಮೌಲ್ಯದ ಎರಡು ಯಂತ್ರಗಳು ಬಂದು 3 ವರ್ಷವಾದರೂ ಅವುಗಳ ಅಳವಡಿಕೆ-ಬಳಕೆ ಮಾಡದೆ ಹಾಳಾಗುವಂತೆ ಮಾಡಲಾಗಿದೆ.
ಉ.ಕ.ಕ್ಕೆ ಹೊಸತೇನಲ್ಲ: ಉತ್ತರ ಕರ್ನಾಟಕಕ್ಕೆ ಅನ್ಯಾ ಯದ ಬರೆ ಹೊಸತಲ್ಲ. ಈ ಹಿಂದೆ ಹುಬ್ಬಳ್ಳಿಯಲ್ಲಿನ ನೈಋತ್ಯ ರೈಲ್ವೆ ವಲಯ ಕಚೇರಿ, ವಿವಿಧ ಉತ್ಪನ್ನಗಳಿಗೆ ಅಗ್‌ಮಾರ್ಕ್ ನೀಡಿಕೆಯ ಹುಬ್ಬಳ್ಳಿಯಲ್ಲಿನ ಪ್ರಯೋಗಾ ಲಯ, ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿನ ಆಯುಷ್ ಔಷಧಿ ತಯಾರಿಕೆ ಘಟಕಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವ ಯತ್ನ ನಡೆದಿತ್ತು. ಸಕ್ಕರೆ ನಿರ್ದೇಶನಾಲಯ, ಲೋಕಾಯುಕ್ತ ಕಚೇರಿ,
ಕೆಬಿಜೆಎನ್‌ಎಲ್, ಕೆಎನ್‌ಎನ್‌ಎಲ್ ಹೀಗೆ ಸುಮಾರು 9 ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವುದಾಗಿ ನೀಡಿದ್ದ ಭರವಸೆಗಳಿಗೆ ವರ್ಷಗಳೇ ಕಳೆದಿವೆ. ಜನವರಿಯಲ್ಲಿ ಸರ್ಕಾರಿ ಅಧಿಸೂಚನೆ ಹೊರಬಿದ್ದರೂ ಇಂದಿಗೂ ಅದು ಕಡತಕ್ಕೆ ಸೀಮಿತವಾಗಿದೆ. ಹೆಚ್ಚಿನ ಸೌಲಭ್ಯ ನೀಡುವುದು ಒತ್ತಟ್ಟಿಗಿರಲಿ, ಇದ್ದ ಸೌಲಭ್ಯವನ್ನು ಕಿತ್ತುಕೊಳ್ಳುವ ಯತ್ನವನ್ನಾದರೂ ಸರ್ಕಾರಗಳು ಕೈ ಬಿಡಲಿ ಎಂಬುದು ಉ.ಕ. ಜನತೆಯ ಹಕ್ಕೊತ್ತಾಯ.
* ಅಮರೇಗೌಡ ಗೋನವಾರ