ಸುಳ್ಯ: ಸುಳ್ಯ ನಗರ ವ್ಯಾಪ್ತಿಯ ಕೇರ್ಪಳ ಭಾಗದಲ್ಲಿ ಕಾಡಾನೆಗಳ ಹಿಂಡು ಕೃಷಿ ಹಾನಿ ಮಾಡಿದ ಪ್ರದೇಶಕ್ಕೆ ಸುಳ್ಯ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್ ನೇತೃತ್ವದ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾತ್ರಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಕೇರ್ಪಳ ಭಾಗದಲ್ಲಿ ವ್ಯಾಪಕ ಕೃಷಿ ಹಾನಿ ಮಾಡಿದೆ. ಪಯಸ್ವಿನಿ ನದಿ ದಾಟಿ ಕಾಡಿನಿಂದ ಕೇರ್ಪಳ ಭಾಗಕ್ಕೆ ನುಗ್ಗಿದ ಆನೆಗಳ ಹಿಂಡು ಕೇರ್ಪಳ ತೀರ್ಥರಾಮ, ಲಿಂಗಪ್ಪ ಮಾಸ್ತರ್ ಕೇರ್ಪಳ, ಕೆ.ಸಿ. ಕರಂಬಯ್ಯ ಅವರ ತೋಟಗಳಲ್ಲಿ ಹಾನಿ ಮಾಡಿದೆ.
ಈ ಮೂರು ತೋಟಗಳಿಗೆ ಭೇಟಿ ನೀಡಿದ ಆರ್‌ಎಫ್‌ಒ ಎನ್. ಮಂಜುನಾಥ್ ಪರಿಶೀಲನೆ ನಡೆಸಿದರು. ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಅರ್ಜಿ ಸಲ್ಲಿಸಿ ಎಂದು ಸೂಚಿಸಿದರು. ಕಾಡಾನೆ ಹಾವಳಿ ತಡೆಯಲು ಸೋಲಾರ್ ಬೇಲಿ ಸ್ಥಾಪಿಸಲು ಅರಣ್ಯ ಇಲಾಖೆಯಿಂದ ನೀಡುವ ಸಹಾಯ ಧನದ ವಿವರಗಳನ್ನು ಅವರು ನೀಡಿದರು.
ಪ್ರೊಬೇಷನರಿ ಎಸಿಎಫ್ ಶಿವಾ ನಂದ್, ಅರಣ್ಯ ಇಲಾಖೆಯ ಸಿಬಂದಿ ಈ ಸಂದರ್ಭ ಇದ್ದರು.
ಆನೆ ಹಾವಳಿಯಿಂದ ಅಪಾರ ಕೃಷಿ ನಷ್ಟವಾಗಿದೆ. ಒಂದು ವಾರದಲ್ಲಿ ಇದು ಎರಡನೇ ಬಾರಿ ತೋಟಕ್ಕೆ ಬಂದಿವೆ. ಅವುಗಳನ್ನು ದಟ್ಟ ಕಾಡಿಗೆ ಅಟ್ಟಲು ಇಲಾಖೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ತೀರ್ಥರಾಮ ಕೇರ್ಪಳ, ಲಿಂಗಪ್ಪ ಮಾಸ್ತರ್ ಕೇರ್ಪಳ, ಕರುಂಬಯ್ಯ, ಸುನಿಲ್ ಕೇರ್ಪಳ ಮೊದಲಾದವರು ಉಪಸ್ಥಿತರಿದ್ದರು.