Advertisement

ಕೃಷಿ ಯಾಂತ್ರೀಕರಣ ಸಹಾಯಧನ ಹೆಚ್ಚಳ: ರೆಡ್ಡಿ

11:19 AM Jun 19, 2019 | Team Udayavani |

ಶಿರಸಿ: ಕೃಷಿಕರಿಗೆ ನೀಡಲಾಗುವ ಯಾಂತ್ರೀಕರಣ ಸಹಾಯಧನದ ಮಿತಿಯನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಎನ್‌.ಎಚ್. ಶಿವಶಂಕರ ರೆಡ್ಡಿ ಹೇಳಿದರು.

Advertisement

ಅವರು ಶಿರಸಿಯಲ್ಲಿ ಕೃಷಿಕರ ಜೊತೆ ಸಂವಾದ ನಡೆಸಿ, ಈಗಾಗಲೇ ಶೇ.50 ರಷ್ಟು ಸಹಾಯಧನವನ್ನು ಸಾಮಾನ್ಯ ವರ್ಗದ ಕೃಷಿಕರಿಗೆ ಹಾಗೂ ವಿಶೇಷ ಘಟಕದ ಅಡಿಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ.90ರಷ್ಟು ಸಹಾಯಧನದಲ್ಲಿ ಟ್ರ್ಯಾಕ್ಟರ್‌, ಟಿಲ್ಲರ್‌, ಭತ್ತದ ನಾಟಿ ಯಂತ್ರಗಳು, ನೀರಾವರಿ ಉಪಕರಣಗಳನ್ನು ಒದಗಿಸಲಾಗುತ್ತಿತ್ತು. ಆದರೆ, ಸಾಮಾನ್ಯ ವರ್ಗದ ರೈತರೂ ಬಡವರಿದ್ದು, ಅವರಿಗೂ ಹೆಚ್ಚಿನ ಸಹಾಯಧನದಲ್ಲಿ ಕೃಷಿ ಉಪಕರಣ ಒದಗಿಸಬೇಕು ಎಂಬ ಬೇಡಿಕೆಗೆ ಸರಕಾರ ಸ್ಪಂದಿಸಿದೆ ಎಂದರು.

ಸಾಮಾನ್ಯ ವರ್ಗದ ರೈತರಿಗೂ ಶೇ.75ರ ಸಹಾಯಧನದಲ್ಲಿ ಯಂತ್ರೋ ಪಕರಣಗಳನ್ನು ಪ್ರಸಕ್ತ ಹಂಗಾಮಿನಲ್ಲೇ ಒದಗಿಸಲಾಗುತ್ತದೆ. ಈಗಾಗಲೇ ಆರ್ಥಿಕ ಇಲಾಖೆ ಅನುಮತಿಗೆ ಪ್ರಸ್ತಾವನೆ ಹೋಗಿದ್ದು, ಶೀಘ್ರ ಅನುಮತಿ ಸಿಗುವ ನಿರೀಕ್ಷೆ ಇದೆ. ಉತ್ತರ ಕನ್ನಡದಂತಹ ದೊಡ್ಡ ಜಿಲ್ಲೆಗಳಲ್ಲಿರುವ ಹೆಚ್ಚುವರಿ ಯಾಂತ್ರೀಕರಣಕ್ಕೆ ಅಗತ್ಯವಾದ ಬೇಡಿಕೆಗೂ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದೂ ಹೇಳಿದರು.

ಸಹಕಾರಿ ಸಂಘಗಳಿಗೂ: ಯಾಂತ್ರೀಕರಣಗಳನ್ನು ಬಾಡಿಗೆ ಆಧಾರಿತವಾಗಿ ಕೃಷಿ ಯಂತ್ರಧಾರಾ ಯೋಜನೆ ಹಾಗೂ ವೈಯಕ್ತಿಕವಾಗಿ ಮಾತ್ರ ಸಹಾಯಧನದ ಮಾದರಿಯಲ್ಲಿ ಒದಗಿಸಲಾಗುತ್ತಿತ್ತು. ಆದರೆ, ಇನ್ನುಮುಂದೆ ಸ್ಥಳೀಯ ಸಹಕಾರಿ ಸಂಘಗಳು, ಸ್ವಸಹಾಯ ಸಂಘಗಳು ಅರ್ಜಿ ಹಾಕಿದರೂ ಅವುಗಳಿಗೂ ಲಭ್ಯವಾಗುವ ಆದೇಶ ಮಾಡಲಾಗುತ್ತದೆ ಎಂದೂ ಸ್ಪಷ್ಟಪಡಿಸಿದರು.

ಸಹಕಾರಿ ಸಂಸ್ಥೆಗಳಿಗೇ ಯಾಂತ್ರೀಕರಣ ಒದಗಿಸಿದರೆ ಅವರು ಬಾಡಿಗೆ ಆಧಾರದಲ್ಲಿ ಸಹಕಾರಿಗಳಿಗೆ ನೀಡುವ ಮೂಲಕ ನಿರ್ವಹಣೆ ಮಾಡಲು ಅನುಕೂಲವಾಗಲಿದೆ. ಆಯಾ ಕ್ಷೇತ್ರದ ರೈತರಿಗೆ ಅಗತ್ಯವಾದ ಯಾಂತ್ರೀಕರಣ ಕೂಡ ಸುಲಭದಲ್ಲಿ ಒದಗಿಸಲು ಸಾಧ್ಯವಾಗಲಿದೆ ಎಂದೂ ಹೇಳಿದರು.

Advertisement

ಒಕ್ಕೂಟಕ್ಕೆ ಚಿಂತನೆ: ಕರ್ನಾಟಕದಲ್ಲಿ ಪ್ರಾಂತೀಯ ಸಾವಯವ ಒಕ್ಕೂಟಗಳನ್ನು ಪ್ರತಿ ಜಿಲ್ಲೆಗಳಲ್ಲೂ ಮಾಡಲಾಗಿದ್ದು, ಅವು ಚೆನ್ನಾಗಿ ಕೆಲಸ ಮಾಡುತ್ತಿವೆ. ಅವು ಅವರದ್ದೇ ಆದ ಬ್ರಾಂಡ್‌ನ‌ಲ್ಲಿ ಮಾರುಕಟ್ಟೆ ಮಾಡುತ್ತಿವೆ. ಕೃಷಿ ಇಲಾಖೆ ಹೆಬ್ಟಾಳದಲ್ಲಿ ಇಡೀ ರಾಜ್ಯಮಟ್ಟದ ಸಾವಯವ ಉತ್ಪನ್ನಗಳ ಒಕ್ಕೂಟ ರಚನೆ ಮಾಡಿ, ಒಂದೇ ಬ್ರಾಂಡಿನಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲಿದ್ದೇವೆ ಎಂದೂ ಹೇಳಿದರು.

ಕಾರಾವಳಿ ಭಾಗದಲ್ಲಿ ಭತ್ತದ ಬೇಸಾಯಗಾರರಿಗೆ ಉತ್ತೇಜನ ನೀಡಲು ಹೆಕ್ಟೇರ್‌ಗೆ 7500 ರೂ. ನೀಡುವ ಕರಾವಳಿ ಪ್ಯಾಕೇಜ್‌ ಘೋಷಿಸಿದ್ದೇವೆ. ಆದರೆ, ಅದರಲ್ಲಿ ಮಲೆನಾಡು ಬಯಲು ಸೀಮೆ ಸೇರಿಲ್ಲ. ಅಂಥ ರೈತರಿಗೂ ನೆರವಾಗಲು ಯೋಜಿಸುತ್ತೇವೆ ಎಂದೂ ಭರವಸೆ ನೀಡಿದರು. ಕೃಷಿ ಇಲಾಖೆ ಆಯುಕ್ತ ಶ್ರೀನಿವಾಸ, ಡಿಡಿ ಹೊನ್ನಪ್ಪ ಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next