ಹಳಿಯಾಳ: ಪ್ರತಿದಿನ ಪಠ್ಯಪುಸ್ತಕ, ಕ್ರೀಡಾ ಚಟುವಟಿಕೆಗಳಲ್ಲಿ ಕಾಲ ಕಳೆಯುವ ವಿದ್ಯಾರ್ಥಿಗಳು ಕೃಷಿ ಭೂಮಿಗೆ ತೆರಳಿ ಭತ್ತ ನಾಟಿ ಮಾಡುವುದರ ಮೂಲಕ ಕೃಷಿ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು.
ವಿವಿಡಿ ಸ್ಕೂಲ್ ಆಫ್ ಎಕ್ಸ್‌ಲೆನ್ಸ್ ಸಿಬಿಎಸ್‌ಸಿ ವಿದ್ಯಾರ್ಥಿಗಳು ತಾಲೂಕಿನ ಜೋಗನಕೊಪ್ಪ ಗ್ರಾಮಕ್ಕೆ ತೆರಳಿ ಅಲ್ಲಿಯ ಗದ್ದೆಯಲ್ಲಿ ರೈತರು ಮತ್ತು ರೈತ ಮಹಿಳೆಯರ ನೇತೃತ್ವದಲ್ಲಿ ಭತ್ತ ನಾಟಿ ಮಾಡುವ ಪದ್ಧತಿ ಸೇರಿದಂತೆ ಬೆಳೆಗಳನ್ನು ಹದವಾದ ಭೂಮಿಯಲ್ಲಿ ಬೆಳೆಸುವ ವಿಚಾರಗಳನ್ನು ತಿಳಿದುಕೊಂಡರು.
30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಸಮವಸ್ತ್ರದಲ್ಲಿಯೇ ಕೆಸರು ನೀರಿನಿಂದ ತುಂಬಿದ ಗದ್ದೆಯಲ್ಲಿ ಇಳಿದು ಭತ್ತದ ನಾಟಿ ಮಾಡಿದರು.
ಸುಮಾರು 2 ಗಂಟೆಗೂ ಅಧಿಕ ಕಾಲ ಕೆಸರು ಗದ್ದೆಯಲ್ಲಿ ಕಾಲ ಕಳೆದ ವಿದ್ಯಾರ್ಥಿಗಳು ಕೃಷಿಯ ಪ್ರಯೋಗಗಳು ಸೇರಿದಂತೆ ರೈತರಿಂದ ಪ್ರಾತ್ಯಕ್ಷಿಕೆ ಮೂಲಕ ನಾಟಿ ಮಾಡುವ ವಿಚಾರಗಳನ್ನು ತಿಳಿದುಕೊಂಡರು.
ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಾದ ನೆಲ್ಸಿ ಫರ್ನಾಂಡಿಸ್, ಪರಶುರಾಮ ಬಡಿಗೇರ ಕೂಡ ಭತ್ತದ ನಾಟಿ ಮಾಡಿದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೃಷಿ-ತೊಟಗಾರಿಕೆ ಇನ್ನಿತರ ಚಟುವಟಿಕೆಗಳ ಕುರಿತು ಸಾಮಾನ್ಯ ಜ್ಞಾನ ನೀಡಲಾಗುವುದು ಎಂದು ಶಿಕ್ಷಕರು ತಿಳಿಸಿದರು.