ಶಿಗ್ಗಾವಿ: ಸ್ವಾತಂತ್ರ್ಯ ನಂತರ ನಮ್ಮನಾಳಿದ ವಿದೇಶಿ ಸಂಸ್ಕೃತಿಯ ರಾಜಕಾರಣಿಗಳಿಗೆ ನಮ್ಮ ನಾಡಿನ ಕೃಷಿ ಕ್ಷೇತ್ರದ ಮಹತ್ವದ ಅರಿವಿಲ್ಲದ ಪರಿಣಾಮ ಇಂದಿನ ಕೃಷಿ ಕ್ಷೇತ್ರ ದುಸ್ಥಿತಿ ತಲುಪಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.ತಾಲೂಕಿನ ಶಾಡಂಬಿ ಗ್ರಾಮದಲ್ಲಿ ಕೃಷಿ ಆಧಾರಿತ ಚಲನಚಿತ್ರದ ಬ್ಯಾನರ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದ ಕೈಗಾರಿಕೆ, ಆಹಾರ ಭದ್ರತೆ, ವಾಣಿಜ್ಯ, ಉದ್ಯೋಗ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಕೃಷಿ ಕ್ಷೇತ್ರದ ಚಟುವಟಿಕೆ ಸಂಪನ್ಮೂಲವೇ ಆಧಾರ. 60 ಲಕ್ಷ ಹಳ್ಳಿಯಿರುವ ಕೃಷಿ ಆಧಾರಿತ ನಮ್ಮ ನಾಡಿನಲ್ಲಿ ಸಂಪನ್ಮೂಲಕ್ಕೆ ಕೊರತೆಯಿರಲಿಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ರೈತರನ್ನು ಕೆಟ್ಟ ಸ್ಥಿತಿಗೆ ತಂದಿಟ್ಟರು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಆರಂಭವಾದ ಮಹದಾಯಿ ನೀರಾವರಿ ಯೋಜನೆಯ ಹೆಸರಿನಲ್ಲಿ 100 ಕೋಟಿ ವೆಚ್ಚದ ಯೋಜನೆ ಜಾರಿಗೆ ತರದೇ ವಿಳಂಬ ಮಾಡಿ ಸಾವಿರಾರು ಕೋಟಿಗೆ ತಂದು ಸಮಸ್ಯೆಯನ್ನು ಇಂದಿಗೂ ಜೀವಂತವಿಟ್ಟಿದ್ದಾರೆ.
ಮಹದಾಯಿ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದರೇ ವಿನಃ ಇಂದಿಗೂ ಯೋಜನೆ ಹಾಗೆಯೇ ಇದೆ ಎಂದು ಟೀಕಿಸಿದರು. ಸುಮಾರು 2ಲಕ್ಷ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬದಲಾಗಿ ರಾಜಕಾರಣಿಗಳು ಬಾರ್‌ಗಳಿಗೆ ಪರವಾನಗಿ ನೀಡಿದ್ದಾರೆ.
ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆದರೂ ನಾವು ದೇಶಕ್ಕಾಗಿ ಮಾಡಿದ್ದೇನು ಎಂದು ಪ್ರಶ್ನಿಸಿದ ಅವರು, ಕುಡಿತದಿಂದ ಯುವಜನಾಂಗ ಹಾಳಾಗುತ್ತಿದೆ. ಅಲ್ಲದೇ, ರೈತರು ಕುಡಿತಕ್ಕೆ ಹೆಚ್ಚು ದಾಸರಾಗುತ್ತಿದ್ದಾರೆ. ನಾವು ದೇಶ ಕಟ್ಟುವ ಬದಲು ಶಿಕ್ಷಣ, ಸಾಮಾಜಿಕ ವ್ಯವಸ್ಥೆ ಹಾಳು ಮಾಡುತ್ತಿದ್ದೇವೆ. ನಮ್ಮನ್ನಾಳುವ ರಾಜಕಾರಣಿಗಳು ದೇಶದ ಕೃಷಿ ಕ್ಷೇತ್ರದ ಕುಂದುಕೊರತೆ ಯೋಜನೆ ರೂಪಿಸುವ ಬದ್ಧತೆ ಕಲಿಯಬೇಕು ಎಂದರು.
ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಬಯಲಾಟ ನಾಟಕಗಳು ಸಾಮಾಜಿಕ ಕ್ಷೇತ್ರದ ಬದಲಾವಣೆ ತರುತ್ತಿದ್ದವು. ಸದ್ಯ ಕೃಷಿ ಆಧಾರಿತ ಗ್ರಾಮೀಣ ಪರಿಸರದ ಪರಿಚಯ ಮಾಡಿಕೊಡುವ ಚಲನಚಿತ್ರ ತಯಾರಿಸುತ್ತಿರುವುದು ಅಭಿನಂದನಾರ್ಹ ಎಂದರು. ಕರ್ನಾಟಕ ರೈತ ಹೋರಾಟ ಸಂಘಟನೆಯ ವೀರೇಶ ಸ್ವರಬದಮಠ ಮಾತನಾಡಿ, ಕೃಷಿ ಕ್ಷೇತ್ರದ ನೂರಾರು ಸಮಸ್ಯೆಗಳ ಕುರಿತು ಸಾಕಷ್ಟು ಹೋರಾಟ ಮಾಡಿದ್ದೇವೆ. ರಾಜ್ಯಕ್ಕೆ ಬಹುದಿನಗಳಿಂದ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು.
ರೈತನ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತಾಗಿ, ದೇಶದ ರೈತ ಸ್ವಾವಲಂಬಿ ಜೀವನ ನಡೆಸಬೇಕೆಂದರು. ರೈತ ಹೋರಾಟಗಾರ ವರುಣಗೌಡ್ರ ಪಾಟೀಲ, ಕಿರಣಗೌಡ ಪಾಟೀಲ ಕುಟುಂಬಸ್ಥರು, ಪೊಲೀಸ್ ಅಧಿಕಾರಿ ಮಹದೇವ ಯಲಿಗಾರ, ನಟಿ ಸಿರಿ, ಚಿತ್ರ ನಿರ್ಮಾಪಕ ಸೋಮಣ್ಣ, ನಿರ್ದೇಶಕ ಬಸವರಾಜ ಕುರಗೋಡಿ, ರೈತಪರ ಸಂಘಟನೆಗಳ ಸದಸ್ಯರು ಇದ್ದರು. ಕಾರ್ಯಕ್ರಮದಲ್ಲಿ ಕಲಾವಿದರು, ರೈತಪರ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಕಲಾವಿದ ಶರೀಫ ಮಾಕನವರ ನಿರೂಪಿಸಿ, ವಂದಿಸಿದರು.