Advertisement

ಕುಳಗೇರಿ ಕ್ರಾಸ್ : ಬಿಡುವು ಕೊಟ್ಟ ಮಳೆರಾಯ; ಜೋರಾಯಿತು ಕೃಷಿ ಚಟುವಟಿಕೆ

06:59 PM Jul 20, 2022 | Team Udayavani |

ಕುಳಗೇರಿ ಕ್ರಾಸ್ (ಬಾಗಲಕೋಟೆ) : ಮಲೆನಾಡಿನಂತೆ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲ ಸುರಿದ ಜಿಟಿ ಜಿಟಿ ಮಳೆಗೆ ರೈತರು ಕಂಗಾಲಾಗಿದ್ದರು. ಪ್ರಕೃತಿ ವಿಕೋಪದಿಂದ ರೈತ ಬೆಳೆಗಾರರ ನಿದ್ದೆಗೆಡಸಿದ್ದ ಮಳೆರಾಯ ಬಿಡುವು ಕೊಟ್ಟಿದ್ದಾನೆ. ರೈತರ ಕೃಷಿ ಚಟುವಟಿಕೆ ಸಹ ಜೋರಾಗಿದ್ದು ಸದ್ಯ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಮುಂದಾಗಿದ್ದಾರೆ.

Advertisement

ಬಿಸಿಲಿನ ದರ್ಶನ ಅಪರೂಪವಾಗಿದ್ದ ರೈತರಿಗೆ ಈಗ ಹಗಲು ಹೊತ್ತು ಬೀಳುತ್ತಿರುವ ಉರಿಬಿಸಿಲಿಗೆ ರೈತರ ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ಬೆಂಬಿಡದ ಮಳೆರಾಯ ಸಂಜೆಯಾಗುತ್ತಿದ್ದಂತೆ ಅಲ್ಪ-ಸ್ವಲ್ಪ ಮಳೆಯನ್ನು ಸುರಿಸುತ್ತಲೇ ಇದ್ದಾನೆ.

ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ರೈತರು ಮಾಹಿತಿ ಪಡೆಯುತ್ತಿದ್ದಾರೆ. ರಸಗೊಬ್ಬರ ಅಂಗಡಿಗಳಿಗೆ ತೆರಳಿ ಔಷಧಿ ಖರೀದಿಗೆ ಮುಂದಾಗಿದ್ದಾರೆ. ಬೆಳೆದ ಬೆಳೆಗಳು ಕೈ ತಪ್ಪಬಾರದು ಎಂಬ ಕಾರಣಕ್ಕೆ ಸಾಲಮಾಡಿ ಔಷಧಿ ಖರೀದಿಸುತ್ತಿದ್ದಾರೆ.

ಇದನ್ನೂ ಓದಿ: ತಿ.ನರಸೀಪುರ :ದೇವಾಲಯ ಲೂಟಿಗೈದಿದ್ದ 6  ಮಂದಿ ದರೋಡೆಕೋರರ ಬಂಧನ

ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡ ಕೆಲವು ರೈತರು ಬೆಳೆನಷ್ಟ ಅನುಭವಿಸುವ ಚಿಂತೆಯಲ್ಲಿದ್ದರೆ, ಇನ್ನು ಕೆಲ ರೈತರು ಔಷಧಿ ಗೊಬ್ಬರ ಕೊಟ್ಟು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಬಿಸಿಲಿಗೆ ಮೈಯೊಡ್ಡಿದ ರೈತ ಕುಟುಂಬ ಎತ್ತುಗಳನ್ನು ಬಳಸಿ ಎಡೆ ಹೊಡೆದು ಕಸ ಕಿತ್ತು ಸ್ವಚ್ಛಗೊಳಿಸುವಲ್ಲಿ ಮಗ್ನರಾಗಿದ್ದಾರೆ.

Advertisement

ಕೃಷಿ ಚಟುವಟಿಕೆಯಲ್ಲಿ ತೊಡಗಿದ ಗ್ರಾಪಂ ಅಧ್ಯಕ್ಷೆ: ಇನ್ನು ಕಾಕನೂರು ಗ್ರಾಪಂ ಅಧ್ಯಕ್ಷೆ ಶೋಭಾ ರವಿ ಹೆರಕಲ್ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ. ತಮ್ಮ ಪತಿ ರವಿ ಹೆರಕಲ್ ಜೊತೆ ಕೃಷಿ ಚಟುವಟಿಕೆ ನಡೆಸುತ್ತಿರುವ ಶೋಭಾ ಸ್ವತಃ ಎತ್ತುಗಳನ್ನು ಬಳಸಿ ಎಡೆ ಹೊಡೆಯುತ್ತಿರುವ ದೃಶ್ಯ ಕಂಡು ಬಂತು. ಸತತ ಮಳೆಗೆ ಚಿಕ್ಕ ಬೆಳೆಗಳು ಹಾಳಾಗಿವೆ. ಸದ್ಯ ವಾತಾವರಣ ಬದಲಾಗಿದ್ದು ಬಿಸಿಲಿಗೆ ಬೆಳೆಗಳು ಚೇತರಿಸಿಕೊಳ್ಳುತ್ತಿವೆ ರೈತರು ಚಿಂತಿಸದೆ ಬೆಳೆಗಳನ್ನ ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.

ಸತತ ಮಳೆಗೆ ರೈತರ ಬೆಳೆಗಳು ಹಾಳಾಗುವ ಸ್ಥಿತಿಗೆ ಬಂದಿದ್ದವು. ಈ ಮಳೆಯಿಂದ ಅಲ್ಪ-ಸ್ವಲ್ಪ ರೈತರ ಬೆಳೆಗಳು ಹಾಳಾಗಿದ್ದು ಸದ್ಯ ಎರೆಡ್ಮೂರು ದಿನಗಳಿಂದ ಬಿಸಿಲಿನ ಕಿರಣಗಳು ಬಿದ್ದಿದ್ದು ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ಸಾಕಷ್ಟು ಖರ್ಚು ಮಾಡಿ ಔಷಧಿಗಳನ್ನು ಬಳಸಿ ಬೆಳೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಮ್ಮ ರೈತರು ಮಾಡುತ್ತಿದ್ದಾರೆ. ಹೀಗೆ ಒಂದು ವಾರ ಬಿಸಿಲು ಬಿದ್ದರೆ ಸಾಕು ರೈತರ ಬೆಳೆಗಳು ಉತ್ತಮ ಸ್ಥತಿಗೆ ಬದಲಾಗುತ್ತವೆ. –ಕಾಕನೂರ ರೈತ ರವಿ ಹೆರಕಲ್

ಸದ್ಯ ಮಳೆ ಕಡಿಮೆಯಾಗಿದ್ದು ರೈತರು ಅವಸರ ಪಡದೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಬೆಳೆಗಳ ರಕ್ಷಣೆಗೆ ರೈತರು ಮುಂದಾಗಬೇಕು. ರೈತರು ಅನಾವಶ್ಯಕ ಔಷಧಿಗಳನ್ನು ಬಳಸದೆ ಬೆಳೆಗಳಿಗೆ ಮಿತವಾಗಿ ಔಷಧಿ ಗೊಬ್ಬರಗಳನ್ನು ಹಾಕಬೇಕು. -ಕೃಷಿ ಅಧಿಕಾರಿ ಬಸವರಾಜ ಬುದ್ನಿ. ರೈತ ಸಂಪರ್ಕ ಕೇಂದ್ರ ಕುಳಗೇರಿ

– ವರದಿ ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next