ವರದಿ: ಬಸವರಾಜ ಹೊಂಗಲ್
ಧಾರವಾಡ: ತಿಂಗಳ ಹಿಂದೆ ಮನೆಗೊಬ್ಬರಿಗೆ ಕೊರೊನಾ ಸೋಂಕು, ಓಣಿಯಲ್ಲಿ ದಿನಕ್ಕೊಂದು ಹೆಣ, ಎಲ್ಲೆಡೆ ಆತಂಕ, ನಿರ್ಲಕ್ಷéಕ್ಕೆ ತಕ್ಕ ಶಾಸ್ತಿ ಅನುಭವಿಸಿ ಕಡೆಗೂ ಜಿಲ್ಲೆಯ ಅನ್ನದಾತರು ಮೈ ಕೊಡವಿ ಎದ್ದು ಇದೀಗ ಖುಷಿಯಿಂದ ಬಿತ್ತನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಕಾಟಕ್ಕೆ ಬೇಜಾರಾದರೂ ಮುಂಗಾರು ಪೂರ್ವ ಮಳೆಗಳು ಕೈ ಹಿಡಿದಿದ್ದರಿಂದ ಬಿತ್ತನೆ ಜೋರು ಮಾಡಿದ್ದಾರೆ.
ಹೌದು. ಮಾನ್ಸೂನ್ ಮಳೆ ಜಿಲ್ಲೆಯಲ್ಲಿ ತನ್ನ ತುಂತುರು ಕಲರವ ಆರಂಭಿಸುವುದಕ್ಕೂ ಮುನ್ನವೇ ಜಿಲ್ಲೆಯ 2 ಲಕ್ಷ ಹೆಕ್ಟೇರ್ ಭೂಮಿ ಮುಂಗಾರು ಪೂರ್ವ ಮಳೆಯ ಕೃಪೆಯಿಂದ ಬಿತ್ತನೆಗೆ ಹದವಾಗಿತ್ತು. ಮೇ ತಿಂಗಳಾಂತ್ಯಕ್ಕೆ ಜಿಲ್ಲೆಯಲ್ಲಿ ಸುರಿದ ಮಳೆಗಳಿಗೆ ಭರಪೂರ ಹದ ಸಿಕ್ಕು ಹಂಗಾಮು ಗರಿಗೆದರಿ ಇದೀಗಲೇ ಅರೆಮಲೆನಾಡು ಸಂಪೂರ್ಣ ಬಿತ್ತನೆ ಕಾರ್ಯ ಮುಗಿಸಿ ಹೊರ ಬರುತ್ತಿದೆ. ಆದರೆ ಬೆಳವಲದ ಬಯಲು ಸೀಮೆಯ ತಾಲೂಕುಗಳಲ್ಲಿ ಮಾತ್ರ ಭೂಮಿ ಹದವಾಗಿ ತಿಂಗಳಾದರೂ ಬಿತ್ತನೆಗೆ ಮಳೆ ಕೊರತೆ ಎದುರಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಭರಪೂರ ಮಳೆ ಮತ್ತು ಪೂರಕ ವಾತಾವರಣವಿದ್ದು ರೈತರು ಬಿತ್ತನೆ ಕಾರ್ಯ ಮುಗಿಸುತ್ತಿದ್ದಾರೆ.
ಕೊರೊನಾ ಕೊಡವಿ ಎದ್ದ ರೈತ: ಸರಿಯಾಗಿ ಒಂದು ತಿಂಗಳ ಹಿಂದೆ ಹಳ್ಳಿಗಳಲ್ಲಿ ಕೊರೊನಾ 2ನೇ ಅಲೆ ಸೃಷ್ಟಿಸಿದ ಆತಂಕ ಮತ್ತು ಕಠಿಣ ಸ್ಥಿತಿ ರೈತ ಸಂಕುಲವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತ್ತು. ಪ್ರತಿದಿನ ಸಣ್ಣ ಹಳ್ಳಿಗಳಲ್ಲಿ ಕೂಡ ಇಬ್ಬರು, ಮೂವರು ಮರಣ ಹೊಂದುವ ದೃಶ್ಯ ಸಾಮಾನ್ಯವಾಗಿ ಹೋಗಿತ್ತು. ಆದರೆ ಇದೀಗ ಹಳ್ಳಿಗಳಲ್ಲಿ ಕೊರೊನಾ ಕೊಂಚ ಕಡಿಮೆಯಾಗಿದ್ದು, ರೈತರು ಗಟ್ಟಿಯಾಗಿ ಮೇಲೆದ್ದು ಹೊಲದ ದಾರಿ ಹಿಡಿದಿದ್ದಾರೆ. ಅದಲ್ಲದೇ ಹಳ್ಳಿಗಳಲ್ಲಿ 58ಕ್ಕೂ ಅಧಿಕ ಕೋವಿಡ್ ಚಿಕಿತ್ಸಾ ಕೇಂದ್ರಗಳು ತಲೆ ಎತ್ತಿದ್ದರಿಂದ ಜನರಿಗೆ ಸ್ಥಳೀಯವಾಗಿ ಉತ್ತಮ ಚಿಕಿತ್ಸೆ ಲಭಿಸುತ್ತಿದ್ದು, ಅನ್ನದಾತರು ಸ್ವಯಂಸ್ಫೂರ್ತಿಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಕ್ವಾರಂಟೈನ್ ಕೇಂದ್ರಗಳಲ್ಲಿ ಉಳಿದು ಗುಣಮುಖರಾಗುತ್ತಿದ್ದಾರೆ.
ಸರಿಯಾಗಿ ಬಿತ್ತುವ ಸಮಯ ಆರಂಭಗೊಂಡಿದ್ದು, ಮುಂಗಾರು ಹಂಗಾಮು ಹದಭರಿತವಾಗಿ ಸಾಗಿದ್ದು, ಇನ್ನೆರಡು ದಿನಗಳಲ್ಲಿ ಹೆಚ್ಚು ಕಡಿಮೆ ಬಿತ್ತನೆ ಕಾರ್ಯ ಮುಗಿಯಲಿದೆ. ಬಿತ್ತನೆ ಸಂದರ್ಭದಲ್ಲಿ ಗೊಬ್ಬರ-ಬೀಜ ಪಡೆಯಲು ಕೋವಿಡ್ ಲಾಕ್‌ಡೌನ್ ನಿಯಮಗಳು ರೈತರನ್ನು ತೀವ್ರ ಸಂಕಷ್ಟಕ್ಕೆ ಗುರಿ ಮಾಡಿದ್ದವು. ಆಧಾರ್ ಕಾರ್ಡ್ ಮತ್ತು ಗ್ರಾಪಂಗಳಿಂದ ಪರವಾನಗಿ ಪತ್ರ ತರುವುದನ್ನು ಕಡ್ಡಾಯ ಮಾಡಿದ್ದಕ್ಕೆ ರೈತರು ಕಿರಿಕಿರಿ ಅನುಭವಿಸಿದರು. ಆದರೆ ಕೋವಿಡ್ ನಿಯಂತ್ರಣಕ್ಕೆ ಇದು ಅನಿವಾರ್ಯ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿತು.
ಯಾವ ಬೆಳೆ ಎಷ್ಟು?: ಮುಂಗಾರು ಹಂಗಾಮಿನಲ್ಲಿ ಅರೆ ಮಲೆನಾಡು ಮತ್ತು ಬಯಲು ಸೀಮೆಯ ಬೆಳವಲದ ಹಳ್ಳಿಗಳಲ್ಲಿ 2021ನೇ ಸಾಲಿನ ಮುಂಗಾರು ಬಿತ್ತನೆ ಕಾರ್ಯ ತೀವ್ರವಾಗಿದ್ದು ಸೋಯಾ ಅವರೆ 50 ಸಾವಿರ ಹೆಕ್ಟೇರ್ ಬಿತ್ತನೆಯಾಗುವ ನಿರೀಕ್ಷೆ ಇದೆ. ಈ ಪೈಕಿ ಅರ್ಧದಷ್ಟು ಬಿತ್ತನೆ ಕಾರ್ಯ ಕೂಡ ಮುಗಿದಿದೆ. ಸೋಯಾ ಅವರೆ ಕಳೆದ ವರ್ಷಕ್ಕಿಂತ ಹೆಚ್ಚು ಬಿತ್ತನೆಯಾಗುತ್ತಿದ್ದು, ಈ ವರ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹತ್ತಿ -50 ಸಾವಿರ್ ಹೆಕ್ಟೇರ್ ಬಿತ್ತನೆಯಾಗುವ ನಿರೀಕ್ಷೆ ಇದೆ. ಮೆಕ್ಕೆಜೋಳಕ್ಕೂ ಪ್ರಾಧಾನ್ಯತೆ ಸಿಕ್ಕಿದ್ದು, ರೈತರು ಬೀಜ ಸಂಗ್ರಹ ಮಾಡಿಕೊಂಡಿದ್ದಾರೆ.
ಈ ಎರಡೂ ಬೆಳೆಗಳ ಬಿತ್ತನೆಗೆ ಇನ್ನು ತಿಂಗಳ ಸಮಯವಿದೆ. ಹೆಸರು, ಶೇಂಗಾ, ಉದ್ದು, ಮೆಕ್ಕೆಜೋಳ ಸೇರಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭಗೊಂಡಿದೆ. ಈ ಪೈಕಿ ಕಳೆದ ನಾಲ್ಕು ದಿನಗಳಲ್ಲಿ ಶೇ.60 ಬಿತ್ತನೆ ಕಾರ್ಯ ಕೂಡ ಮುಗಿದಿದೆ. ಜಿಲ್ಲೆಯಲ್ಲಿ ಎಂದಿನಂತೆ ಕಬ್ಬು ತನ್ನ ಅಸ್ತಿತ್ವವನ್ನು ವರ್ಷದಿಂದ ವರ್ಷಕ್ಕೆ ಅಧಿಕಗೊಳಿಸುತ್ತಲೇ ಸಾಗಿದೆ.
ಭತ್ತ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಈಗಾಗಲೇ ನೆಲ ಬಿಟ್ಟು ಮೇಲೆದ್ದು ನಿಂತಿದೆ. ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕು ಈ ಬಾರಿ ಕಬ್ಬು ಅಧಿಕವಾಗಿದ್ದು, 70 ರಿಂದ 80 ಸಾವಿರ ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿದೆ. ಹತ್ತಿಗೆ ಒತ್ತು ನೀಡುತ್ತಿದ್ದ ಅಣ್ಣಿಗೇರಿಯಲ್ಲಿ ಈ ಬಾರಿ ಮುಂಗಾರು ಬೇಗ ಚುರುಕಾಗಿ ಮಳೆ ಸುರಿದಿದ್ದು, ಹೆಸರು ಬೀಜ ಬಿತ್ತನೆ ಟ್ರೆಂಡ್ ಆರಂಭಗೊಂಡಿದೆ.