ಬೆಂಗಳೂರು: ರಾಜ್ಯದ ಹತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪಿಜಿ ಕೋರ್ಸ್ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಳೆದ ಎರಡು ವರ್ಷಗಳಿಂದ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದೆ. ಇದು ಹೆಚ್ಚು ಪ್ರಯೋಜನಕಾರಿಯಾಗಿರುವುದರಿಂದ ಮತ್ತೆ 10 ಆಸ್ಪತ್ರೆಗಳಿಗೆ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆ ಬಳಿಕ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಡಿಪ್ಲೊಮ್ಯಾಟ್ ಆಫ್ ನ್ಯಾಷನಲ್ ಬೋರ್ಡ್ (ಡಿಎನ್‌ಬಿ) ನಿಯಮದ ಪ್ರಕಾರವೇ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪಿಜಿ ಕೋರ್ಸ್ ಆರಂಭಿಸಲಾಗುವುದು. ಈಗಾಗಲೇ ಆರು ಸರ್ಕಾರಿ ಆಸ್ಪತ್ರೆಗಳಲ್ಲಿ 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದರು.
ಇನ್ನೂ ಹತ್ತು ಆಸ್ಪತ್ರೆಗಳಲ್ಲಿ ಈ ಕೋರ್ಸ್ ಆರಂಭಿಸಲು ನಿರ್ಧರಿಸಲಾಗಿದೆ. ಹಾವೇರಿ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು, ಮಂಗಳೂರು ವೆನ್‌ಲಾಕ್ ಆಸ್ಪತ್ರೆ, ಗಂಗಾವತಿ, ಹೊಳೆನರಸೀಪುರ, ದೊಡ್ಡಬಳ್ಳಾಪುರ, ಶಿರಾ, ಬಸವಕಲ್ಯಾಣ ತಾಲೂಕುಗಳ ಆಸ್ಪತ್ರೆಗಳಲ್ಲಿ ಡಿಎನ್‌ಬಿ ಕೋರ್ಸ್‌ಗೆ ಚಾಲನೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ.
ಇದರಿಂದ ರಾಜ್ಯದಲ್ಲಿ 72 ಸ್ನಾತಕೋತ್ತರ ಸೀಟ್‌ಗಳು ಲಭ್ಯವಾಗಲಿವೆ. ಇದಕ್ಕಾಗಿ 16 ಕೋಟಿ ರೂಪಾಯಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಅಲ್ಲದೇ ಸುಮಾರು 50 ಹುದ್ದೆಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮೂರು ವರ್ಷ ಕೋರ್ಸ್‌ನಲ್ಲಿ ಸ್ಟೈಫಂಡ್ ನೀಡಲಾಗುವುದು.
ಕೋರ್ಸ್ ಮುಗಿದ ನಂತರ ಮೂರು ವರ್ಷ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಉದ್ಯೋಗ ಮಾಡುವ ಒಪ್ಪಂದ ಮಾಡಿಕೊಳ್ಳುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿದಂತಾಗುತ್ತದೆ. ಈಗಾಗಲೇ ಸರ್ಕಾರಿ ವೈದ್ಯಕೀಯ ಸೇವೆಯಲ್ಲಿರುವವರಿಗೆ ಶೇಕಡಾ 50 ಹಾಗೂ ನೀಟ್ ಮೂಲಕ ಶೇಕಡಾ 50ರಷ್ಟು ಸೀಟ್‌ಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇತರ ತೀರ್ಮಾನಗಳು
* ಮೈಸೂರಿನಲ್ಲಿ ನರ್ಮಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆ. ರಾಜ್ಯದ ಪಾಲು ಸೇರಿ 90 ಕೋಟಿ ರೂ. ಭರಿಸಲು ಸಂಪುಟ ಒಪ್ಪಿಗೆ.
* ಹೇಮಾವತಿ ಬಲದಂಡೆ ಕಾಲುವೆ 0-72 ಕಿ.ಮೀ. 422 ಕೋಟಿ ರೂ.ವೆಚ್ಚದಲ್ಲಿ ನವೀಕರಣಕ್ಕೆ ಒಪ್ಪಿಗೆ.
* ಜುಲೈ 2ನೇ ವಾರದಿಂದ ಮೋಡ ಬಿತ್ತನೆಗೆ ತೀರ್ಮಾನ. ಬೆಂಗಳೂರು ಬದಲು ಮೈಸೂರು ಹಾಗೂ ಹುಬ್ಬಳ್ಳಿ ಕೇಂದ್ರಗಳಿಂದ ಮೋಡ ಬಿತ್ತನೆಗೆ ನಿರ್ಧಾರ.