ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ 23,251.66 ಕೋಟಿ ರೂ. ಗಳ ಪರಿಷ್ಕೃತ ಯೋಜನಾ ವರದಿಗೆ ಸಚಿವ ಸಂಪುಟ ಗುರುವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯೋಜನೆ ಆರಂಭವಾದಾಗ ವೆಚ್ಚ 12 ಸಾವಿರ ಕೋಟಿ ರೂ. ಎಂದು ಆಂದಾಜಿಸಲಾಗಿತು. ಈಗ ಯೋಜನಾ ವೆಚ್ಚ ಹೆಚ್ಚಾಗಿದ್ದು, ಪರಿಷ್ಕೃತ ಯೋಜನಾ ವರದಿಗೆ ಒಪ್ಪಿಗೆ ನೀಡಲಾಗಿದೆ.
ಪಶ್ವಿಮಾಭಿಮುಖವಾಗಿ ಹರಿಯುವ ನದಿಗಳಿಂದ ವಾರ್ಷಿಕ 24.01 ಟಿ.ಎಂ.ಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸಿ, ಕುಡಿಯುವ ನೀರಿನ ತೀವ್ರ ಆಭಾವ ಎದುರಿಸುತ್ತಿರುವ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿÇÉೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ.
ಹಾಗೆಯೇ, ಅಂತರ್ಜಲ ಮರುಪೂರಣಕ್ಕಾಗಿ ಈ ಭಾಗಗಳ ಸುಮಾರು 527 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50ರಷ್ಟು ನೀರು ತುಂಬಿಸುವ ಉದ್ದೇಶದ ಎತ್ತಿನಹೊಳೆ ಯೋಜನೆಗೆ 2008ರಲ್ಲಿ 8,323 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿತ್ತು. 2014ರಲ್ಲಿ 12,912 ಕೋಟಿ ರೂ. ಪರಿಷ್ಕೃತ ಯೋಜನಾ ವರದಿಗೆ ಒಪ್ಪಿಗೆ ನೀಡಲಾಗಿತ್ತು.
ಏಳು ಜಿಲ್ಲೆಗಳ 29 ತಾಲೂಕುಗಳ 38 ಪಟ್ಟಣ ಪ್ರದೇಶಗಳು, 6 ಸಾವಿರಕ್ಕೂ ಹೆಚ್ಚು ಗ್ರಾಮಗಳ 76 ಲಕ್ಷ ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. 2023ರ ಮಾರ್ಚ್‌ಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಸರಕಾರದ ಮುಂದಿದೆ.
42 ಕೈದಿಗಳ ಬಿಡುಗಡೆಗೆ ಒಪ್ಪಿಗೆ:
“ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಕೇಂದ್ರ ಸರಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಆನ್ವಯ 42 ಅರ್ಹ ನಿರ್ದಿಷ್ಟ ವರ್ಗದ ಕೈದಿಗಳನ್ನು ಗಣರಾಜ್ಯೋತ್ಸವ ದಿನ ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಂಗಳೂರಿನಲ್ಲೂ ಬಹುಮಹಡಿ ಹಾಸ್ಟೆಲ್:
ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮೈಸೂರು ಹಾಗೂ ಮಂಗಳೂರಿನಲ್ಲಿ ತಲಾ ಸಾವಿರ ವಿದ್ಯಾರ್ಥಿಗಳ ಸಾಮರ್ಥ್ಯದ ಬಹುಮಹಡಿ ಹಾಸ್ಟೆಲ್‌ಗಳನ್ನು 4,280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.