ಆಗ್ರಾ : ದೇಶದ ಯುವ ಜನರು ತಮ್ಮ ಅತ್ಯಮೂಲ್ಯ ಜೀವವನ್ನು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮೂಲಕ ವ್ಯರ್ಥ ಮಾಡಿಕೊಳ್ಳುವುದು ಈಚಿನ ದಿನಗಳಲ್ಲಿ ತೀರ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಎಂಬಂತೆ ಆಗ್ರಾದ 24ರ ಹರೆಯದ ಯುವಕನೋರ್ವ ತಾನು ಐದು ಬಾರಿ ಸೇನಾ ಸೇರ್ಪಡೆಯ ಪರೀಕ್ಷೆಯಲ್ಲಿ ಫೇಲಾದುದಕ್ಕೆ ಜುಗುಪ್ಸೆ ಪಟ್ಟು ಆತ್ಮಹತ್ಯೆ ಮಾಡಿಕೊಂಡದ್ದಲ್ಲದೆ ತನ್ನ ಈ ಕೃತ್ಯವನ್ನು ಫೇಸ್ ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮೂಡಿರುವುದು ಆಘಾತಕಾರಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಮುನ್ನಾ ಕುಮಾರ್ ಒಬ್ಬ ಬಿಎಸ್ಸಿ ಪದವೀಧರ; ನ್ಯೂ ಆಗ್ರಾ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದ ಶಾಂತಿ ನಗರದ ನಿವಾಸಿ. ಸೇನೆ ಸೇರುವ ಪರೀಕ್ಷೆಯನ್ನು ಐದು ಬಾರಿ ಎದುರಿಸಿಯೂ ತಾನು ವಿಫಲನಾದೆ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಮುಂದಾದ ಮುನ್ನಾ ಕುಮಾರ್ ಫೇಸ್ ಬುಕ್ ನಲ್ಲಿ ತನ್ನ ಆತ್ಮಹತ್ಯೆ ಕೃತ್ಯವನ್ನು ಸುಮಾರು 1 ನಿಮಿಷ 9 ಸೆಕೆಂಡುಗಳ ಕಾಲ ಆತ ಲೈವ್ ಸ್ಟ್ರೀಮ್ ಮಾಡಿದ್ದಾನೆ.
ವಿಶೇಷವೆಂದರೆ ಆತನ ಈ ಲೈವ್ ಸ್ಟ್ರೀಮನ್ನು 2,750ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಆದರೆ ಇವರಲ್ಲಿ ಯಾರೊಬ್ಬರೂ ಮುನ್ನಾ ಮನೆಯವರನ್ನು ಜಾಗೃತಗೊಳಿಸಿಲ್ಲ; ಪೊಲೀಸರ ಗಮನಕ್ಕೂ ಈ ವಿಷಯವನ್ನು ತರಲಿಲ್ಲ. ಒಂದು ಅಮೂಲ್ಯ ಜೀವ ತಮ್ಮ ಕಣ್ಣ ಮುಂದೆಯೇ ಸಾಯುವುದನ್ನು ನಿರ್ಲಿಪ್ತರಾಗಿ ನೋಡಿ ತೆಪ್ಪಗಿದ್ದರು. ಇನ್ನೊಬ್ಬರ ಸಾವಿಗೆ ಸ್ಪಂದನೆಯನ್ನೇ ತೋರದ ಅವಗುಣಕ್ಕೆ ಸಾಕ್ಷಿಯಾದರು.
ಮುನ್ನಾ ಕುಮಾರ್ ಸುಮಾರ 6 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದ. ಐದು ಬಾರಿಯೂ ಆರ್ಮಿ ಪರೀಕ್ಷೆಯಲ್ಲಿ ಫೇಲಾದುದಕ್ಕೆ ಮತ್ತು ತನ್ನ ಆತ್ಮಹತ್ಯೆಗೆ ತಾನೇ ಕಾರಣ ಎಂದು ಬರೆದಿದ್ದಾನೆ.
ಮುನ್ನಾ ಕುಮಾರ್‌ನ ಸಹೋದರ ಹೇಳುವ ಪ್ರಕಾರ “ಮುನ್ನಾ ಭಗತ್ ಸಿಂಗ್ ನಿಂದ ಪ್ರೇರಿತನಾಗಿ ಸೇನೆಯನ್ನು ಸೇರಲು ಬಯಸಿದ್ದ. ಆತ್ಮಹತ್ಯೆ ತಾಸುಗಳ ಮುನ್ನ ನಾವೆಲ್ಲ ಒಟ್ಟಿಗೇ ಕುಳಿತು ಊಟಮಾಡಿದ್ದೆವು; ಆತ ನಾರ್ಮಲ್ ಆಗಿದ್ದ. ಆತ ಆತ್ಮಹತ್ಯೆ ಮಾಡಿಕೊಂಡಾನು ಎಂದು ನಾವು ಯಾರೂ ಕನಸಿನಲ್ಲೂ ಎಣಿಸಿರಲಿಲ್ಲ.
ಮುನ್ನಾ ಕುಮಾರ್ ಗಾಗಿ ಆತನ ತಂದೆ ಪ್ರಭು ಪ್ರಸಾದ್ ಈಚೆಗಷ್ಟೇ ಗ್ರಾಸರಿ ಸ್ಟೋರ್ ತೆರೆದಿದ್ದರು. ಆರ್ಮಿ ಪರೀಕ್ಷೆ ಫೇಲಾಗಿ ಜುಗುಪ್ಸೆಗೊಂಡಿದ್ದ ಮಗನನ್ನು ಜೀವನಮುಖೀಯನ್ನಾಗಿಸಲು ಯತ್ನಿಸಿದ್ದರು. ಆದರೆ ಎಲ್ಲವೂ ನೀರಿನಲ್ಲಿ ಮಾಡಿದ ಹೋಮವಾಯಿತು.