“ಕೆಲವೊಂದು ಸಿನಿಮಾಗಳ ನಾವು ಅಭಿನಯಿಸುವ ಪಾತ್ರಗಳಿಗಷ್ಟೇ ಸೀಮಿತವಾಗಿರುತ್ತವೆ. ಆದರೆ ಕೆಲವು ಸಿನಿಮಾಗಳು ಹಾಗಲ್ಲ. ಅದರಲ್ಲಿ ಅಭಿನಯಿಸುವ ಜೊತೆಗೆ ನಮಗೆ ಗೊತ್ತಿಲ್ಲದಿರುವುದನ್ನು ಕಲಿತುಕೊಳ್ಳಲು ಸಾಕಷ್ಟು ಅವಕಾಶವಿರುತ್ತದೆ. ಒಂದು ಸಿನಿಮಾ ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳು ತಿಳಿಸಿಕೊಡುತ್ತದೆ. ಇದು ಅಂಥದ್ದೇ ಒಂದು ಸಿನಿಮಾ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಇಲ್ಲಿಯವರೆಗೆ ಮಾಡಿರುವ ಬೆಸ್ಟ್ ಸಿನಿಮಾಗಳ ಲಿಸ್ಟ್‌ನಲ್ಲಿ ಖಂಡಿತವಾಗಿಯೂ ಈ ಸಿನಿಮಾ ಕೂಡ ಒಂದಾಗಲಿದೆ’ ಇದು ನಟಿ ಪಾವನಾ ಗೌಡ ಮಾತು.
ಅಂದಹಾಗೆ, ಪಾವನಾ ಗೌಡ ಇಂಥದ್ದೊಂದು ಮಾತು ಹೇಳಿರುವುದು ಮುಂಬರಲಿರುವ ತಮ್ಮ ಹೊಸ ಸಿನಿಮಾ “ಅಜ್ಞಾತವಾಸಿ’ಯ ಬಗ್ಗೆ. ಕಳೆದ ತಿಂಗಳಷ್ಟೇ ನಟ ಶ್ರೀನಗರ ಕಿಟ್ಟಿ ಜೊತೆಗೆ “ಗೌಳಿ’ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದ ಪಾವನಾ ಗೌಡ, ಈಗ “ಅಜ್ಞಾತವಾಸಿ’ಯ ಜೊತೆಯಾಗಿದ್ದಾರೆ. ಪಾವನಾ ಗೌಡ ಅಭಿನಯಿಸುತ್ತಿರುವ “ಅಜ್ಞಾತವಾಸಿ’ ಸಿನಿಮಾದ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇತ್ತೀಚೆಗಷ್ಟೇ “ಅಜ್ಞಾತವಾಸಿ’ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.
ಇದೇ ವೇಳೆ “ಅಜ್ಞಾತವಾಸಿ’ ಬಗ್ಗೆ ಮಾತನಾಡಿದ ಪಾವನಾ ಗೌಡ ಸಿನಿಮಾದ ಪಾತ್ರ ಮತ್ತು ಚಿತ್ರದ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ. “ಸಿನಿಮಾದ ಟೈಟಲ್ಲೇ ಹೇಳುವಂತೆ “ಅಜ್ಞಾತವಾಸಿ’ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಇದರಲ್ಲಿ ನಾನು ಪಂಕಜಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಂಕಜಾ ಎಂದರೆ ಕಮಲ ಎಂಬ ಅರ್ಥವಿದೆ. ಕಮಲದ ಗುಣ ಮತ್ತು ವೈಶಿಷ್ಟ್ಯತೆಗಳು ಹೇಗಿರುತ್ತದೆಯೋ ಅದೇ ರೀತಿ ನನ್ನ ಪಾತ್ರವಿದೆ. ಕಡಿಮೆ ಮಾತನಾಡುವ ಅಭಿನಯಕ್ಕೆ ಹೆಚ್ಚು ಅವಕಾಶವಿರುವ, ಅಷ್ಟೇ ರಿಸರ್ವ್ ಆಗಿರುವಂಥ ಪಾತ್ರವಿದು. ಸಿನಿಮಾ ನೋಡುವವರನ್ನು ನಿಧಾನವಾಗಿ ಆವರಿಸಿಕೊಳ್ಳುವಂಥ ಪಾತ್ರ ಸಿನಿಮಾದಲ್ಲಿದೆ. ಇದೊಂದು ಥ್ರಿಲ್ಲರ್ ಸಬೆjಕ್ಟ್ ಆಗಿರುವುದರಿಂದ, ಇದಕ್ಕಿಂತ ಹೆಚ್ಚಾಗಿ ನನ್ನ ಪಾತ್ರದ ಗುಟ್ಟು ಬಿಟ್ಟುಕೊಟ್ಟರೆ ಕುತೂಹಲ ಕಡಿಮೆಯಾಗಬಹುದು’ ಎನ್ನುವುದು ಪಾವನಾ ಮಾತು.
“ನನ್ನ ಪ್ರಕಾರ ಇದೊಂದು ಕಂಪ್ಲೀಟ್ ಟೆಕ್ನೀಷಿಯನ್ಸ್ ಸಿನಿಮಾ. ತುಂಬ ಬ್ರಿಲಿಯೆಂಟ್ ಸ್ಕ್ರಿಪ್ಟ್ ಸಿನಿಮಾದಲ್ಲಿದೆ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ, ನಿರ್ಮಾಪಕ ಹೇಮಂತ್ ರಾವ್ ಇಬ್ಬರೂ ಈಗಾಗಲೇ ಕ್ರಿಯಾಶೀಲ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು. ಉಳಿದಂತೆ ಅದ್ವೆ„ತ ಗುರುಮೂರ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಭರತ್ ಸಂಕಲನ ಹೀಗೆ ಇಡೀ ಸಿನಿಮಾದ ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಟೆಕ್ನೀಷಿಯನ್ಸ್ ಸಿನಿಮಾದಲ್ಲಿದ್ದಾರೆ. ಬಜೆಟ್‌ಗಿಂತ ಸಬ್ಜೆಕ್ಟ್ ಮುಖ್ಯ ಎಂಬುದನ್ನು ತೋರಿಸುವಂಥ ಸಿನಿಮಾವಿದು’ ಎಂಬ ಅಭಿಪ್ರಾಯ ಪಾವನ ಅವರದ್ದು. “”ಅಜ್ಞಾತವಾಸಿ’ ನೋಡುಗರನ್ನು ಮಾಯಾಲೋಕಕ್ಕೆ ಕರೆದುಕೊಂಡು ಹೋಗುವಂಥ ಸಿನಿಮಾ ಎಂಬ ನಂಬಿಕೆ ನನಗಿದೆ.
ನಮ್ಮ ಪ್ಲಾನ್ ಪ್ರಕಾರ ಎಲ್ಲ ನಡೆದರೆ, ಇದೇ ಜೂನ್ ವೇಳೆಗೆ “ಅಜ್ಞಾತವಾಸಿ’ ಥಿಯೇಟರ್‌ಗೆ ಬರುತ್ತದೆ’ ಎಂಬ ಮಾಹಿತಿ ನೀಡುತ್ತಾರೆ ಪಾವನಾ ಗೌಡ.