ಸೇನಾಪಡೆಯಲ್ಲಿ ನಾಲ್ಕು ವರ್ಷಗಳ ಅವಧಿಗಾಗಿ ಅಗ್ನಿವೀರರನ್ನು ನೇಮಕ ಮಾಡಲು ಹೊರಟಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಸಂಬಂಧ ದೇಶಾದ್ಯಂತ ಪ್ರತಿಭಟನೆಗಳೂ ನಡೆಯುತ್ತಿವೆ. ಅಷ್ಟೇ ಅಲ್ಲ, ಕೆಲವು ನಗರಗಳಲ್ಲಿ ಹಿಂಸಾಚಾರವೂ ನಡೆದಿದ್ದು, ರೈಲುಗಳಿಗೆ ಬೆಂಕಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡಲಾಗಿದೆ.
ಅಗ್ನಿಪಥ ಯೋಜನೆ ಬಗ್ಗೆ ಇತ್ತೀಚೆಗಷ್ಟೇ ಘೋಷಣೆ ಮಾಡಿರುವ ಕೇಂದ್ರ ಸರಕಾರ, ಆಗಿನಿಂದಲೂ ಇದರಿಂದ ಆಗುವ ಉಪಯೋಗಗಳ ಬಗ್ಗೆ ಹೇಳಿಕೊಂಡೇ ಬರುತ್ತಿದೆ. ಅದರಲ್ಲೂ ಸೇನೆಯಲ್ಲಿ ಹೆಚ್ಚು ಯುವಕರಿರಬೇಕು ಎಂಬ ಸದುದ್ದೇಶದಿಂದ ಇಂಥದ್ದೊಂದು ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದೂ ಹೇಳಿದೆ. ಅಲ್ಲದೆ ಸೇನಾಪಡೆ ಕೂಡ ಈ ಯೋಜನೆಯಿಂದಾಗುವ ಅನುಕೂಲಗಳ ಕುರಿತಂತೆ ಮನವೊಲಿಕೆ ಮಾಡುವ ಕೆಲಸವನ್ನು ನಡೆಸುತ್ತಿದೆ.
ಯಾವುದೇ ವಿಚಾರಗಳಾಗಲಿ, ದಿಢೀರನೇ ಯಾರೊಬ್ಬರೂ ಭುಗಿಲೇಳಲು ಸಾಧ್ಯವಿಲ್ಲ. ಇದರ ಹಿಂದೆ ಸಮಾಜವಿದ್ರೋಹಿ ಚಟುವಟಿಕೆಗಳ ಕೈವಾಡವಿರಲೇಬೇಕು. ಅಲ್ಲದೆ ಈ ಬಗ್ಗೆ ಸಂಚು ರೂಪಿಸಿಯೇ ಸಂಘಟಿತರಾಗಬೇಕು ಅಥವಾ ರಾಜಕೀಯ ಶಕ್ತಿಗಳು ಯುವಕರನ್ನು ದುರುದ್ದೇಶದಿಂದ ಬಳಸಿಕೊಳ್ಳಬೇಕು. ಬಿಹಾರದಲ್ಲಿನ ಗಲಭೆ ಗಮನಿಸಿದರೆ ಇಂಥದ್ದೊಂದು ಅನುಮಾನ ಮೂಡದೇ ಇರದು. ಕೋಚಿಂಗ್ ಸೆಂಟರ್‌ಗಳ ಮೇಲೆ ಅನುಮಾನವಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು.
ಅಗ್ನಿಪಥ ವಿರೋಧಿಸಿ ಪ್ರತಿಭಟನೆ ನಡೆಸಿದ ಯುವಕರು ಸೇನೆಗೆ ಹೋಗಲಿಚ್ಛಿಸಿದವರು. ಆದರೆ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವ ಮೂಲಕ ಸೇನೆಗೆ ಸೇರಲು ಇರಬೇಕಾದ ಮೂಲ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ರೈಲಿಗೆ ಬೆಂಕಿ ಇಡುವುದು, ಸಾರ್ವಜನಿಕ ಸಾರಿಗೆ ವಾಹನಗಳನ್ನು ನಾಶ ಮಾಡುವುದು, ದೊಂಬಿ ಎಬ್ಬಿಸುವುದು ಉಚಿತವಾದ ಕೆಲಸವಲ್ಲ. ಅದರಲ್ಲೂ ಸೇನೆಗೆ ಸೇರಲು ಇಚ್ಛಿಸಿರುವವರು ಹೀಗೆ ಮಾಡಿದರೆ ಅದು ಒಪ್ಪತಕ್ಕ ವಿಚಾರವಲ್ಲವೇ ಅಲ್ಲ.
ಇದರಿಂದಾಗಿಯೇ ರವಿವಾರವಷ್ಟೇ ಸೇನಾಪಡೆಯ ಪ್ರಮುಖ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ಸೇನಾ ನೇಮಕಾತಿ ವೇಳೆ ಬರುವವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ ಎಂಬ ಸ್ವಯಂಘೋಷಿತ ಪ್ರಮಾಣ ಪತ್ರ ತರಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ. ಸೇನೆಗೆ ದೊಂಬಿ ಮಾಡುವಂಥವರು ಬೇಕಾಗಿಲ್ಲ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜ| ವಿ.ಕೆ. ಸಿಂಗ್ ಕೂಡ ಹೇಳಿದ್ದಾರೆ. ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ, ಅಗ್ನಿಪಥ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಸೇನಾ ನೇಮಕಾತಿ ವೇಳೆ ಅವಕಾಶ ಸಿಗುವುದು ಕಷ್ಟ ಎಂದು ಹೇಳಬಹುದು.
ಏನೇ ಆಗಲಿ, ಯಾವುದೇ ಪ್ರತಿಭಟನೆಗಳು ಇರಲಿ, ಅವು ಶಾಂತ ರೀತಿ ಯಿಂದ ನಡೆಯಬೇಕು. ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆಗೆ ಅವ ಕಾಶ ಇದ್ದೇ ಇರುತ್ತದೆ. ಆದರೆ ಹೋರಾಟ ನಡೆಸಲು ಅವಕಾಶವಿದೆ ಎಂದ ಮಾತ್ರಕ್ಕೆ ದೊಂಬಿ ಎಬ್ಬಿಸುವ ಅವಕಾಶವನ್ನೂ ನೀಡಲಾಗಿದೆ ಅಂದುಕೊಳ್ಳುವುದು ತಪ್ಪೇ ಸರಿ. ಅಲ್ಲದೆ ನಮ್ಮದೇ ತೆರಿಗೆ ಹಣದಿಂದ ನಿರ್ಮಾಣ ಮಾಡಿರುವ ಮೂಲಸೌಕರ್ಯಗಳನ್ನು ನಾಶ ಮಾಡಿದರೆ, ನಮಗೇ ನಷ್ಟ ಹೆಚ್ಚು ಎಂಬುದು ಬಹುತೇಕರಿಗೆ ತಿಳಿದೇ ಇಲ್ಲ.
ಎಸೆಸೆಲ್ಸಿ ಅಥವಾ ಪಿಯುಸಿ ಮುಗಿಸಿದ ಮೇಲೆ ಅಗ್ನಿಪಥ ಯೋಜನೆಗೆ ಸೇರಬಹುದಾಗಿದ್ದು, ವಾಪಸ್ ಬಂದ ಮೇಲೆ ಮುಂದಿನ ವ್ಯಾಸಂಗಕ್ಕೂ ಭರಪೂರ ಅವಕಾಶಗಳಿವೆ. ಇದಕ್ಕಾಗಿಯೇ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನೂ ಘೋಷಿಸಿದೆ. ಜತೆಗೆ ಕೇಂದ್ರ ಸರಕಾರವೂ ಈ ಅಗ್ನಿಪಥ ಯೋಜನೆಯ ಸೌಲಭ್ಯಗಳ ಕುರಿತಂತೆ ಯುವಕರಿಗೆ ಇನ್ನಷ್ಟು ಅರಿಕೆ ಯಾಗುವಂತೆ ತಿಳಿಸುವ ಕೆಲಸ ಮಾಡಬೇಕಾಗಿದೆ.