Advertisement

ಅಗ್ನಿಪಥ್ ಯೋಜನೆಗೆ ವಿರೋಧ; ಮುಂದುವರಿದ ಹಿಂಸಾಚಾರ, ಬಿಹಾರ ಉಪ ಮುಖ್ಯಮಂತ್ರಿ ಮನೆ ಮೇಲೆ ದಾಳಿ

12:03 PM Jun 17, 2022 | Team Udayavani |

ನವದೆಹಲಿ: ಸೇನೆಗೆ ನಾಲ್ಕು ವರ್ಷಗಳ ಅವಧಿಗೆ ಯುವ ಜನರನ್ನು ಸೇರಿಸಿಕೊಳ್ಳುವ ಅಗ್ನಿಪಥ್ ಯೋಜನೆ ವಿರುದ್ಧ ಶುಕ್ರವಾರವೂ(ಜೂನ್ 17) ತೀವ್ರ ಪ್ರತಿಭಟನೆ ಮುಂದುವರಿದಿದ್ದು, ಉತ್ತರಪ್ರದೇಶ, ಬಿಹಾರದಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಬಿಹಾರದಲ್ಲಿ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿರುವ ಉಪಮುಖ್ಯಮಂತ್ರಿ ರೇಣು ದೇವಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ರೀತಿಯ ಹಿಂಸಾಚಾರ ಸಮಾಜಕ್ಕೆ ಅಪಾಯಕಾರಿಯಾಗಿದೆ. ಪ್ರತಿಭಟನೆ, ಹಿಂಸಾಚಾರದಿಂದ ಸಮಾಜಕ್ಕೆ ನಷ್ಟ ಎಂಬುದನ್ನು ಪ್ರತಿಭಟನಾಕಾರರು ತಿಳಿದುಕೊಳ್ಳಬೇಕು ರೇಣು ದೇವಿ ಎನ್ ಡಿಟಿವಿಗೆ ತಿಳಿಸಿದ್ದಾರೆ.

ಬಿಜಾರದಲ್ಲಿ ಅಗ್ನಿಪಥ್ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಸ್ ಗಳ ಕಿಟಕಿ ಗಾಜುಗಳನ್ನು ಪುಡಿಗೈಯಲಾಗಿದೆ. ಅಷ್ಟೇ ಅಲ್ಲ ಪಾದಚಾರಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ವರದಿ ವಿವರಿಸಿದೆ.

ಇಡೀ ರಾಜ್ಯಾದ್ಯಂತ ಯುವಕರು ರೈಲ್ವೆ ಹಳಿ ಮತ್ತು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಗುಸರಾಯ್ ನಲ್ಲಿ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣದಲ್ಲಿ ದಾಂಧಲೆ ನಡೆಸಿದ್ದು, ಸಮಷ್ಠಿಪುರ್ ನಲ್ಲಿ ಎರಡು ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಲಾಖಿಸರಾಯ್ ಜಿಲ್ಲೆಯಲ್ಲಿ ಬಿಜೆಪಿ ಕಚೇರಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.

ಉತ್ತರಪ್ರದೇಶದಲ್ಲಿ ಇಂದು ಬೆಳಗ್ಗೆ ಬಲ್ಲಿಯಾ ರೈಲ್ವೆ ನಿಲ್ದಾಣದೊಳಕ್ಕೆ ನುಗ್ಗಿದ ಉದ್ರಿಕ್ತ ಯುವಕರ ಗುಂಪು ರೈಲುಗಳಿಗೆ ಬೆಂಕಿ ಹಚ್ಚಿ, ರೈಲ್ವೆ ನಿಲ್ದಾಣದಲ್ಲಿರುವ ಆಸ್ತಿ ಪಾಸ್ತಿಯನ್ನು ಹಾನಿಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement

ಬಿಹಾರ ಮತ್ತು ಉತ್ತರಪ್ರದೇಶದ ಹಲವು ಭಾಗಗಳಲ್ಲಿ ಕೇಂದ್ರದ ನೂತನ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಬಿಜೆಪಿ ಆಡಳಿತದ ಮಧ್ಯಪ್ರದೇಶ, ಹರ್ಯಾಣದಲ್ಲಿಯೂ ಪ್ರತಿಭಟನೆ ಮುಂದುವರಿದಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ 24ಗಂಟೆಗಳ ಕಾಲ ಇಂಟರ್ನೆಟ್ ಮತ್ತು ಎಸ್ ಎಂಎಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next