ಹಾಸನ: ಅಗ್ನಿವೀರರಿಗೆ ಕರ್ನಾಟಕ ಪೊಲೀಸ್ ಸೇವೆಯಲ್ಲಿ ಶೇ.10, ಅಗ್ನಿಶಾಮಕ ಸೇವೆಯಲ್ಲಿ ಶೇ.50 ರಷ್ಟು ಮೀಸಲಾತಿ ನಿಗದಿಪಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಪೊಲೀಸರಿಗೆ ನಿರ್ಮಿಸುತ್ತಿರುವ ವಸತಿ ಗೃಹಗಳ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಗ್ನಿಪಥ ಉತ್ತಮ ಯೋಜನೆಯಾಗಿದೆ. ಭಾರತೀಯ ಸೇನೆಯಲ್ಲಿ ಸರಾಸರಿ ವಯಸ್ಸು 32 ಇದೆ. ಅದನ್ನು 25ಕ್ಕೆ ಇಳಿಸಬೇಕು. ಸೇನೆಗೆ ಬಿಸಿ ರಕ್ತದ ಯುವಕರ ಅಗತ್ಯವಿದೆ. ಹಾಗಾಗಿ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಘೋಷಣೆ ಮಾಡಿದೆ ಎಂದರು.
ನಮ್ಮ ದೇಶದಲ್ಲಿ ಸೇನೆಯಿಂದ ನಿವೃತ್ತರಾದವರ ಪಿಂಚಣಿಗೆ ಹೆಚ್ಚು ಖರ್ಚಾಗುತ್ತಿದೆ. ಭಾರತೀಯ ಸೇನೆಯ ಒಟ್ಟು ಬಜೆಟ್ 5 ಲಕ್ಷ ಕೋಟಿ. ಅದರಲ್ಲಿ 1.25 ಲಕ್ಷ ಕೋಟಿ ರೂ. ಸೈನಿಕರ ಪಿಂಚಣಿಗೆ ವೆಚ್ಚವಾಗುತ್ತಿದೆ. ಸೇನೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಶಸ್ತ್ರಾಸ್ತ್ರ ಖರೀದಿಗೆ ಸೇನಾ ಅನುದಾನ ಸಾಕಾಗುತ್ತಿಲ್ಲ. ಸೈನಿಕರಿಗೆ ನೀಡುವ ಪಿಂಚಣಿ ಉಳಿಸುವ ಒಂದಂಶವೂ ಅಗ್ನಿಪಥ ಯೋಜನೆಯಲ್ಲಿರಬಹುದು ಎಂದರು.
ಇಂತಹ ಮಹತ್ವದ ಯೋಜನೆ ನಮ್ಮ ಅಧಿಕಾರವಧಿಯಲ್ಲಿ ಆಗಲಿಲ್ಲವಲ್ಲ ಎಂದು ಆಸೂಯೆ ಕಾಂಗ್ರೆಸ್‌ಗೆ ಇದೆ. ಹಾಗಾಗಿಯೇ ಈ ಯೋಜನೆಯನ್ನು ಕಾಂಗ್ರೆಸ್‌ನವರು ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತನಿಖೆ ಮುಗಿದ ತಕ್ಷಣ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆಯಲಿದೆ. ಅರ್ಹರು ಅಧೀರರಾಗುವುದು ಬೇಡ. ಆದರೆ ದುಡ್ಡಿದ್ದರೆ ಸಾಕು ಪಿಎಸ್‌ಐ ಆಗಬಹುದು ಅಂದುಕೊಂಡಿದ್ದವರು ಈಗ ಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ವರ್ಷಗಳಿಂದ ಪಿಎಸ್‌ಐ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳಾಗುತ್ತಲೇ ಬಂದಿವೆ. ಆದರೆ ನಮ್ಮ ಸರ್ಕಾರ ಅಕ್ರಮಕ್ಕೆ ಅವಕಾಶ ಕೊಡುವುದಿಲ್ಲ.
-ಆರಗ ಜ್ಞಾನೇಂದ್ರ, ಗೃಹ ಸಚಿವ