ಸ್ನೇಹಿತನೋ, ಬಂಧುವೋ ಯಾರನ್ನಾದರೂ ಕರೆದು ಅವರ ವಯಸ್ಸು ಯಾವ ಯಾವ ಕಾರ್ಡ್‌ಗಳ ಮೇಲೆ ನಮೂದಿಸಲ್ಪಟ್ಟಿದೆ ಎಂದು ಕೇಳಿ. ಅವರು ವಯಸ್ಸನ್ನು ನಿಮಗೆ ಹೇಳಬೇಕಾಗಿಲ್ಲ. ಆದರೆ, ವಯಸ್ಸನ್ನು ತಕ್ಷಣವೇ ನೀವು ಹೇಳಬಲ್ಲಿರಿ!
ಇಸ್ಪೀಟ್ ಕಾರ್ಡ್‌ಗಳನ್ನು ಬಳಸಿಕೊಂಡು ಜಾದೂ ಮಾಡೋದು ಹೇಗೆ ಅಂತ ಕಳೆದವಾರವೂ ಹೇಳಿದ್ದೆ. ಜಾದೂ ಮಾಡೋರಿಗೆ ಇಸ್ಪೀಟ್ ಕಾರ್ಡ್ ಒಂದು ರೀತಿ ಮನರಂಜನೆಯ ಗಣಿ ಇದ್ದಂತೆ. ಪ್ರೇಕ್ಷಕರಿಗೆ ಬೋರ್ ಆಗುತ್ತಿದೆ ಅನಿಸಿದರೆ ಅಥವಾ ಪ್ರೇಕ್ಷಕರಲ್ಲಿ ನಿರಾಸೆ ಕಾಣುತ್ತಿದೆ ಅಂತ ಗೊತ್ತಾದರೆ ತಕ್ಷಣ ಕಾರ್ಡ್ ಅಪ್ಲೆ„ ಮಾಡಿಬಿಡಿ. ಆಗ ಎಲ್ಲವೂ ಚುಪ್ತಾ… ಅದು ಹೇಗೆ, ಚಿಂತೆ ಬೇಡ. ನಿಮಗೆ ಸುಲಭವಾಗಿ ಹೇಳಿ ಕೊಡುತ್ತೇನೆ.
ಚಿತ್ರದಲ್ಲಿ ತೋರಿಸಿರುವಂತೆ ಸಂಖ್ಯೆಗಳು ಇರುವ ಆರು ಕಾರ್ಡ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಇವುಗಳ ಸಹಾಯದಿಂದ 60 ವರ್ಷದೊಳಗಿನವರ ವಯಸ್ಸನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತದೆ. ಇದನ್ನು ಪ್ರದರ್ಶಿಸಲು ಆರು ಕಾರ್ಡ್‌ಗಳನ್ನು ಟೇಬಲಿನ ಮೇಲೆ ಸಾಲು, ಸಾಲಾಗಿ ಇಡಿ. ನಿಮ್ಮ ಸ್ನೇಹಿತನೋ, ಬಂಧುವೋ ಯಾರನ್ನಾದರೂ ಕರೆದು ಅವರ ವಯಸ್ಸು ಯಾವ ಯಾವ ಕಾರ್ಡ್‌ಗಳ ಮೇಲೆ ನಮೂದಿಸಲ್ಪಟ್ಟಿದೆ ಎಂದು ಕೇಳಿ. ಅವರು ವಯಸ್ಸನ್ನು ನಿಮಗೆ ಹೇಳಬೇಕಾಗಿಲ್ಲ. ಆದರೆ, ವಯಸ್ಸನ್ನು ತಕ್ಷಣವೇ ನೀವು ಹೇಳಬಲ್ಲಿರಿ!
ಅದು ಹೇಗೆ ಅಂತೀರಾ? ಸ್ವಲ್ಪ ತಡೀರಿ. ಇದರ ರಹಸ್ಯ ಇಷ್ಟೆ: ಅವರು ಯಾವ ಯಾವ ಕಾರ್ಡ್‌ಗಳ ಮೇಲೆ ಅವರ ವಯಸ್ಸನ್ನು ನಮೂದಿಸಲಾಗಿದೆ ಎಂದು ಹೇಳುತ್ತಾರೋ ಆಯಾಯ ಕಾರ್ಡ್‌ಗಳ ಮೊದಲ ಅಂಕೆ ಅಥವಾ ಸಂಖ್ಯೆಗಳನ್ನು ಅಂದರೆ ಕಪ್ಪು ಚೌಕದೊಳಗೆ ಇರುವ ಅಂಕೆ ಅಥವಾ ಸಂಖ್ಯೆಗಳನ್ನು ಒಟ್ಟು ಕೂಡಿಸಿದಾಗ ಬರುವ ಮೊತ್ತವೇ ಆತನ ವಯಸ್ಸಾಗಿರುತ್ತದೆ. ಅರ್ಥವಾಗಲಿಲ್ಲವೇ? ಚಿಂತೆ ಬೇಡ. ಇದಕ್ಕೆ ಉದಾಹರಣೆ ಕೊಡ್ತೀನಿ.
ಆತನ ವಯಸ್ಸು 45 ವರ್ಷ ಅಂತ ಇಟ್ಟುಕೊಳ್ಳೋಣ. ಅದು ಕಾರ್ಡಿನ ಮೊದಲ ಸಂಖ್ಯೆ 1, 4, 8, ಮತ್ತು 32 ಇರುವ ಕಾರ್ಡುಗಳಲ್ಲಿ ಇದೆ. ಇವುಗಳನ್ನು ಒಟ್ಟು ಕೂಡಿಸಿದಾಗ ಬರುವ ಮೊತ್ತವೇ ಆತನ ವಯಸ್ಸಿಗೆ ಸಮವಾಗಿರುತ್ತದೆ. ನಿನ್ನ ವಯಸ್ಸು ಇಷ್ಟು ಅಂತ ಹೇಳಿ… ಪ್ರೇಕ್ಷಕರಿಂದ ಅಭೂತಪೂರ್ವ ಚಪ್ಪಾಳೆ ನಿಮ್ಮದಾಗುತ್ತದೆ.
ಉದಯ್ ಜಾದೂಗಾರ್