ಬೆಂಗಳೂರು: ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ ಹುದ್ದೆ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಸಹಿತ ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರ ಹುದ್ದೆಗಳ ಮೊದಲ ನೇರ ನೇಮಕಾತಿಗೆ ಮಾತ್ರ ಅನ್ವಯಿಸುವಂತೆ ಒಂದು ವರ್ಷದ ಅವಧಿಗೆ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷಗಳ ಸಡಿಲಿಕೆಯನ್ನು ರಾಜ್ಯ ಸರಕಾರ ನೀಡಿದೆ.
ಸರಕಾರದ ನಿಯಮದಿಂದಾಗಿ ಅನುದಾನಿತ ಪದವಿ ಪೂರ್ವ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ನೇಮಕಾತಿಗಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.
ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟವಿದ್ದ ಹಿನ್ನೆಲೆಯಲ್ಲಿ 2020-21 ಮತ್ತು 2021-22ರ ಶೈಕ್ಷಣಿಕ ವರ್ಷದಲ್ಲಿ ನೇಮಕಾತಿ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸರಕಾರ ಈ ವಿನಾಯಿತಿಯನ್ನು ನೀಡಿದೆ.
2015ಕ್ಕೆ ಮುಂಚಿತವಾಗಿ ನಿವೃತ್ತಿ, ಮರಣ, ರಾಜೀನಾಮೆ ಮುಂತಾದ ಕಾರಣಗಳಿಂದ ಖಾಲಿಯಾಗಿರುವ ಅನುದಾನಿತ, ಖಾಸಗಿ ಪಿಯು ಕಾಲೇಜು ಮತ್ತು ಶಾಲೆಗಳ ಉಪನ್ಯಾಸಕರು ಮತ್ತು ಶಿಕ್ಷಕರ ಹುದ್ದೆ ಭರ್ತಿ ಮಾಡಲು ಸರಕಾರ ಈಗಾಗಲೇ ಅವಕಾಶ ನೀಡಿದೆ. ಈ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಶಾಲಾ ಕಾಲೇಜುಗಳಲ್ಲಿ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿದೆ.
ಸರಕಾರ ಈಗ ಒಂದು ವರ್ಷದ ಮಟ್ಟಿಗೆ ಎರಡು ವರ್ಷಗಳ ವಯೋಮಿತಿ ಸಡಿಲಗೊಳಿಸಿರುವುದರಿಂದ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಯಲ್ಲಿದ್ದ ಆದರೆ ವಯೋಮಿತಿ ದಾಟುವ ಆತಂಕದಲ್ಲಿದ್ದ ಅಭ್ಯರ್ಥಿಗಳಿಗೆ ಅನುಕೂಲ ತಂದಿದೆ.
Related Articles
ಆದರೆ ಸರಕಾರ ಕೇವಲ ಒಂದು ವರ್ಷ (ಮೇ 23, 2023ರಿಂದ) ಮಾತ್ರ ವಿನಾಯಿತಿ ನೀಡಿರುವುದರಿಂದ ನೇಮಕಾತಿ ಪ್ರಕ್ರಿಯೆ ಮುಂದಿನ ವರ್ಷದ ಮೇ 23ರೊಳಗೆ ಮುಕ್ತಾಯಗೊಂಡರೆ ಮಾತ್ರ ವಯೋಮಿತಿಯ ಗಡಿಯಲ್ಲಿರುವ ಅಭ್ಯರ್ಥಿಗಳಿಗೆ ಸಹಾಯವಾಗಲಿದೆ.
ಸರಕಾರ ಒಂದೇ ಬಾರಿ ನೇಮಕಾತಿ ಪ್ರಕಿಯೆಗೆ ಚಾಲನೆ ನೀಡುತ್ತದೆ. ಆದರೆ ಅನುದಾನಿತ ಶಾಲೆ, ಕಾಲೇಜುಗಳಲ್ಲಿ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಸರಕಾರದ ಇಂದಿನ ತೀರ್ಮಾನದಿಂದಾಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನೇಮಕಾತಿ ಪ್ರಯತ್ನ ನಡೆಸುತ್ತಿರುವ, ವಯಸ್ಸಿನ ಮಿತಿ ದಾಟಿರುವ ಸಾವಿರಾರು ಶಿಕ್ಷಕರು ಮತ್ತು ಸಿಬಂದಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ರಾಜ್ಯ ಪಿಯು ಗಣಿತ ಫಾರಂನ ಅಧ್ಯಕ್ಷ ಎಸ್. ಆರ್. ವೆಂಕಟೇಶ್ ಹೇಳುತ್ತಾರೆ.