Advertisement

ನಿಮ್ಗೆ ವಯಸ್ಸೇ ಆಗೋದಿಲ್ವಾ?

06:02 PM Sep 10, 2019 | mahesh |

ಗಂಡಸಿನ ಸಂಬಳವನ್ನು, ಹೆಂಗಸರ ವಯಸ್ಸನ್ನು ಕೇಳಬಾರದು ಅಂತಾರೆ. ಯಾಕಂದ್ರೆ, ಯಾವ ಮಹಿಳೆಯೂ ತನಗೆ ವಯಸ್ಸಾಗುತ್ತಿದೆ ಅಂತ ಒಪ್ಪಿಕೊಳ್ಳುವುದಿಲ್ಲ. ತಾನು ಚಿರಯೌವನೆಯಾಗಿ, ಸದಾ ಸುಂದರವಾಗಿ ಕಾಣಬೇಕು ಅನ್ನೋದು ಅವಳ ಆಸೆ. ಆದರೆ, ವಯಸ್ಸು ನಲವತ್ತರ ಗಡಿ ದಾಟುತ್ತಿದ್ದಂತೆಯೇ ಕನ್ನಡಿ ಕಹಿಸತ್ಯವನ್ನು ಬಯಲು ಮಾಡಲು ಶುರುಮಾಡುತ್ತದೆ. ಚರ್ಮದ ಸುಕ್ಕು, ಮುಖದ ಮೇಲೆ ಕಪ್ಪು ಕಲೆಗಳು, ಕಣ್ಣಿನ ಸುತ್ತ ಕಪ್ಪು ವರ್ತುಲ, ನೆರಿಗೆ, ಬಿಳಿಕೂದಲು…ಹೀಗೆ, ವೃದ್ಧಾಪ್ಯದ ಒಂದೊಂದೇ ಲಕ್ಷಣಗಳು ಅವಳನ್ನು ಅಧೀರಗೊಳಿಸುತ್ತದೆ.

Advertisement

ವಯಸ್ಸಾಗುತ್ತಿದ್ದಂತೆ ದೇಹದಲ್ಲಿ ಬದಲಾವಣೆಗಳಾಗುವುದು ಸಹಜವಾದರೂ, ಸೂಕ್ತ ಕಾಳಜಿ ವಹಿಸಿದರೆ ಅದನ್ನು ಮರೆಮಾಚಬಹುದು. ಅಂಗಡಿಗಳಲ್ಲಿ ಸಿಗುವ ಆ್ಯಂಟಿ ಏಜಿಂಗ್‌ ಕ್ರೀಂ, ಲೋಶನ್‌, ಸೆರಮ್‌ಗಳನ್ನು ಬಳಸದೆಯೇ, ಪ್ರಕೃತಿಯಲ್ಲಿ ಸಿಗುವ ಕೆಲವು ವಸ್ತುಗಳಿಂದ ಸೌಂದರ್ಯವನ್ನು ವೃದ್ಧಿಸಬಹುದು. ಆ ವಸ್ತುಗಳು ಯಾವುವು ಗೊತ್ತಾ?

1. ಅಲೋವೆರ (ಲೋಳೆಸರ): ಅಲೋವೆರಾದಲ್ಲಿ ಅಧಿಕ ಪ್ರಮಾಣದ ಮಾಲಿಕ್‌ ಆ್ಯಸಿಡ್‌ ಇರುವುದರಿಂದ, ಚರ್ಮದಲ್ಲಿ
ಕೊಲಜೆನ್‌(ಚರ್ಮದ ಕಾಂತಿ ಹೆಚ್ಚಿಸುವ ಅಂಶ) ಉತ್ಪತ್ತಿಯನ್ನು ಹೆಚ್ಚಿಸಿ, ತ್ವಚೆಯನ್ನು ಕಾಂತಿಯುತವಾಗಿಡುತ್ತದೆ.
ಉಪಯೋಗ: ಲೋಳೆಸರದ ಎಲೆಯಿಂದ ಜೆಲ್‌ ತೆಗೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದೇ ರೀತಿ ವಾರಕ್ಕೆರಡು ಬಾರಿ ಮಾಡಿ.

2. ತೆಂಗಿನ ಹಾಲು: ತೆಂಗಿನ ಹಾಲಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ತ್ವಚೆಯಲ್ಲಿನ ಡೆಡ್‌ ಸ್ಕಿನ್‌ ಅನ್ನು ಸ್ವತ್ಛಗೊಳಿಸಿ, ಹೊಳಪನ್ನು ನೀಡುತ್ತವೆ.
ಉಪಯೋಗ: ತೆಂಗಿನತುರಿಗೆ ಸ್ವಲ್ಪ ನೀರು ಬೆರೆಸಿ ರುಬ್ಬಿ, ಹಾಲನ್ನು ತಯಾರಿಸಿ. ಹತ್ತಿಯನ್ನು ತೆಂಗಿನ ಹಾಲಿನಲ್ಲಿ ಅದ್ದಿ ಮುಖಕ್ಕೆ ಮಸಾಜ್‌ ಮಾಡಿ, ಅರ್ಧ ಗಂಟೆ ನಂತರ ಮುಖ ತೊಳೆಯಿರಿ.

3. ಮೆಂತ್ಯೆ ಕಾಳು: ನಿಯಸಿನ್‌ ಮತ್ತು ವಿಟಮಿನ್‌ ಬಿ 3 ಅನ್ನು ಹೇರಳವಾಗಿ ಹೊಂದಿರುವ ಮೆಂತ್ಯೆ, ಚರ್ಮಕ್ಕೆ ಮರುಜೀವ ಕೊಟ್ಟು, ಒಣ ಚರ್ಮವನ್ನು ಹೋಗಲಾಡಿಸುತ್ತದೆ. ಚರ್ಮ ಸುಕ್ಕಾಗುವುದನ್ನು ಕೂಡ ತಡೆಯುತ್ತದೆ.
ಉಪಯೋಗ: ಮೆಂತ್ಯೆಕಾಳನ್ನು ನಾಲ್ಕು ಗಂಟೆ ನೀರಲ್ಲಿ ನೆನೆಸಿ, ನಂತರ ರುಬ್ಬಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ. ಒಂದು ಗಂಟೆ ನಂತರ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಮಾಡಿದರೆ ಉತ್ತಮ.

Advertisement

4. ಬಾಳೆಹಣ್ಣು: ಬಾಳೆಹಣ್ಣಲ್ಲಿರುವ ವಿಟಮಿನ್‌ ಸಿ, ಇ ಮತ್ತು ಪೊಟ್ಯಾಷಿಯಂ ಅಂಶಗಳು ಚರ್ಮದ ಕೊಲಜೆನ್‌ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.
ಉಪಯೋಗ: ಬಾಳೆಹಣ್ಣನ್ನು ರುಬ್ಬಿ ಪೇಸ್ಟ್‌ ಮಾಡಿ, ಮುಖಕ್ಕೆ ಹಚ್ಚಿ, ಒಣಗಿದ ನಂತರ ತೊಳೆಯಿರಿ.

5. ಕಬ್ಬಿನ ಹಾಲು : ಕಬ್ಬಿನಹಾಲಿನಲ್ಲಿ ಗ್ಲಯೊಲಿಕ್‌ ಆ್ಯಸಿಡ್‌ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಚರ್ಮದ ಸತ್ತ ಜೀವಕೋಶಗಳನ್ನು ಹೊರ ಹಾಕಿ, ತ್ವಚೆಗೆ ಮರುಜೀವ ಕೊಡುತ್ತದೆ.
ಉಪಯೋಗ: ಕಬ್ಬಿನ ಹಾಲನ್ನು ಒಂದು ಚಿಟಿಕೆ ಅರಿಶಿನದೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಿ. 15 ನಿಮಿಷ ಒಣಗಲು ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

-ಮೇಘನಾ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next