Advertisement

ಅಸ್ಥಿ ಭಾರಕ್ಕೆ ಕುಸಿದಿದ್ದ ಅಗಸ್ತ್ಯ ತೀರ್ಥಕ್ಕೆ ಹೊಸ ಅಸ್ತಿತ್ವ ತರುವ ಪ್ರಯತ್ನ!

04:46 PM Apr 07, 2022 | Team Udayavani |

ಸಾಗರ: ಮೃತರ ಅಸ್ಥಿಯನ್ನು ಗೋಕರ್ಣದ ಕೋಟಿತೀರ್ಥದ ಹೊರತಾಗಿ ತಾಲೂಕಿನ ವರದಾಮೂಲದ ಅಗಸ್ತ್ಯ ತೀರ್ಥದಲ್ಲಿ ವಿಸರ್ಜಿಸಬೇಕು ಎಂಬ ಪ್ರತೀತಿಗೆ ಅನುಗುಣವಾಗಿ ನೂರಾರು ವರ್ಷಗಳಿಂದ ಮಡಿಕೆ, ಗಡಿಗೆ, ಕುಡಿಕೆಗಳಲ್ಲಿ ಹಿಂದೂ ಸಮಾಜದ ಬಹುತೇಕ ಜಾತಿಯವರ ಅಸ್ಥಿ ಸಮರ್ಪಣೆಯನ್ನು ಮಾಡುತ್ತಿದ್ದ ಹಿನ್ನೆಲೆಯಲ್ಲಿ ‘ಕೆರೆ’ಯ ಸ್ವರೂಪವನ್ನೇ ಕಳೆದುಕೊಂಡಿದ್ದ ವರದಾಮೂಲದ ಅಗಸ್ತ್ಯ ತೀರ್ಥದ ಹೂಳು ತೆಗೆಯುವ ಕೆಲಸಕ್ಕೆ ಸಾಗರದ ಜೀವಜಲ ಕಾರ್ಯಪಡೆ ಹಾಗೂ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆ ತೊಡಗಿಸಿಕೊಂಡಿವೆ.

Advertisement

ಧಾರ್ಮಿಕವಾಗಿ ಅತ್ಯಂತ ಮಹತ್ವ ಹೊಂದಿರುವ ಈ ‘ಅಸ್ಥಿ ಕೆರೆ’ಯ ಹೂಳು ತೆಗೆಯುವುದಕ್ಕೆ ಕನಿಷ್ಠ 30 ಲಕ್ಷ ರೂ. ಬೇಕಾಗಿರುವ ಹಿನ್ನೆಲೆಯಲ್ಲಿ ಸಮಾಜದ ಎಲ್ಲರ ಸಹಕಾರ ಸಿಗದಿದ್ದರೆ ಉದ್ದೇಶಿತ ಕೆಲಸ ಪೂರ್ಣಗೊಳ್ಳುವುದು ಕಷ್ಟ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಕಳೆದ ವರ್ಷ ಚಾಲನೆ: ಭೀಮನಕೋಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆವಿನಹಳ್ಳಿ ಹೋಬಳಿಯ ತೀರ್ಥ ಗ್ರಾಮದ ವರದಾಮೂಲದ ಅಗಸ್ತ್ಯ ತೀರ್ಥ ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಕಳೆದ ವರ್ಷದ ಏಪ್ರಿಲ್‌ನಲ್ಲಿ ವರದಾಮೂಲದ ಗ್ರಾಮಸ್ಥರ ಸಹಯೋಗದಲ್ಲಿ ಚಾಲನೆ ನೀಡಲಾಗಿತ್ತು. ಆಗ ಕೆರೆ ಕೋಡಿಯನ್ನು ಒಡೆದು ನೀರನ್ನು ಹೊರಕ್ಕೆ ಬಿಡಲಾಗಿತ್ತು. ಕೆರೆ ಒಣಗಿದ ನಂತರ ಹೂಳು ತೆಗೆಯುವುದನ್ನು ಆರಂಭಿಸಲು ಬೇಕಿದ್ದ ಪ್ರಾಥಮಿಕ ಕೆಲಸಗಳಿಗೆ ಹೆಜ್ಜೆ ಇರಿಸಲಾಗಿತ್ತು. ವರ್ಷದ ನಂತರ ಈಗ ಕೆರೆಯ ಹೂಳು ತೆಗೆಯುವುದಕ್ಕೆ ಚಾಲನೆ ನೀಡಲಾಗಿದೆ.

ಈಗಾಗಲೇ ಚಿಪ್ಪಳಿ ಲಿಂಗದಹಳ್ಳಿಯ ಆನೆಸೊಂಡಿಲು ಕೆರೆ ಹಾಗೂ ಬಂಗಾರಮ್ಮನ ಕೆರೆಯ ಹೂಳನ್ನು ಯಶಸ್ವಿಯಾಗಿ ತೆಗೆದು ಸಫಲತೆ ಪಡೆದಿರುವ ಯುವ ಜನರ ಈ ಎರಡು ಸಂಘಟನೆಗಳೇ ಕಾಮಗಾರಿಯನ್ನು ಕೈಗೆತ್ತಿಕೊಂಡಿವೆ. ಕೆರೆಯ ಮಹತ್ವದ ಕುರಿತು ವೇದಮೂರ್ತಿ ನಂದ್ರೆ ತಿಮ್ಮಣಭಟ್ರು 1851ರಷ್ಟು ಹಿಂದೆಯೇ ಬರೆದ ‘ವರದಾ ಮಹಾತ್ಮೆ’ ಗ್ರಂಥವನ್ನು ಉದ್ಧರಿಸಿ ಹೇಳುವ ವ.ಶಂ. ಗುರುದತ್ತ ಶರ್ಮ, ವರದಾಮೂಲ ನಿಜ ಅರ್ಥದಲ್ಲಿ ತೀರ್ಥಕ್ಷೇತ್ರ. ಇಲ್ಲಿ ಒಟ್ಟು 64 ತೀರ್ಥಗಳಿವೆ ಎಂಬ ಉಲ್ಲೇಖ ಕೃತಿಯಲ್ಲಿದೆ. 24 ತೀರ್ಥಗಳನ್ನೊಳಗೊಂಡ ವರದಾ ತೀರ್ಥವು ಸರ್ವ ತೀರ್ಥ ಎಂಬ ಹೆಸರು ಪಡೆದಿದ್ದರೆ ರುದ್ರ ತೀರ್ಥ, ಬ್ರಹ್ಮ ತೀರ್ಥಗಳ ಸಾಲಿನಲ್ಲಿ ಅಗಸ್ತ್ಯ ತೀರ್ಥವಿರುವುದನ್ನು ಹೇಳಲಾಗಿದೆ. ಮೃತರ ಅಸ್ಥಿಯನ್ನು ಹರಿವ ಗಂಗೆಗೆ ಚೆಲ್ಲುವಷ್ಟೇ ಪುಣ್ಯದ ಈ ಅಸ್ಥಿ ತೀರ್ಥದಲ್ಲಿ ಸಮರ್ಪಿಸಿದರೂ ಸಿಗುತ್ತದೆ ಎಂದು ವಿವರಿಸಲಾಗಿದೆ. ಇಂತಹ ಕೆರೆಯ ಪುನರುಜ್ಜೀವನದಿಂದ ಕೆರೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹಾಗೂ ಆಸ್ತಿಕ ಸಮಾಜಕ್ಕೆ ಆರೋಗ್ಯವಂತವಾದ ಅಸ್ಥಿ ಕೆರೆ ಸಿಕ್ಕಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Advertisement

ಇದನ್ನೂ ಓದಿ : RBI ಹಣಕಾಸು ನೀತಿ ನಿರೀಕ್ಷೆ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 575 ಅಂಕ ಕುಸಿತ, ನಿಫ್ಟಿ ಇಳಿಕೆ

ಸಂಘಟನೆಯ ಪ್ರಮುಖ, ಕಲ್ಮನೆ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಎಲ್.ವಿ.ಅಕ್ಷರ ಮಾಹಿತಿ ನೀಡಿ, ಈ ಹಿಂದಿನ ಎರಡು ಕೆರೆಗಳ ಹೂಳು ತೆಗೆಯುವಲ್ಲಿಯೂ ಸಾರ್ವಜನಿಕರ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಕರ್ನಾಟಕ ಬ್ಯಾಂಕ್ ನಮಗೆ ವಿಶೇಷ ಧನಸಹಾಯ ನೀಡಿದ್ದು ಈ ಬಾರಿ ಕೂಡ ಅಗಸ್ತ್ಯ ತೀರ್ಥದ ಹೂಳು ತೆಗೆಸಲು ಆರು ಲಕ್ಷ ರೂ.ಗಳನ್ನು ಒದಗಿಸುವ ಭರವಸೆ ನೀಡಿದೆ. ಸ್ಥಳೀಯರು ಮೂರು ಲಕ್ಷ ರೂ. ಕೂಡಿಸಿಕೊಡಲಿದ್ದಾರೆ. ಆದರೆ ಒಂದು ಎಕರೆಗೂ ಹೆಚ್ಚು ವಿಸ್ತಾರವಾದ ಕೆರೆಯನ್ನು ಸುಸಜ್ಜಿತಗೊಳಿಸಲು ಸುಮಾರು 30 ಲಕ್ಷ ರೂ. ಬೇಕು ಎಂದು ಅಂದಾಜಿಸಿದ್ದೇವೆ. ಮಳೆ ಕಾಡದಿದ್ದರೆ ಮುಂದಿನ 40 ದಿನಗಳಲ್ಲಿ ಕೆರೆಯ ಸಂಪೂರ್ಣ ಹೂಳನ್ನು ವಿಲೇವಾರಿ ಮಾಡುತ್ತೇವೆ ಎಂದರು.

ಜೀವಜಲ ಕಾರ್ಯಪಡೆಯ ಕಾರ್ಯಕರ್ತ ಎಲ್.ವಿ.ಸತೀಶ್ ಮಾತನಾಡಿ, ಬಂಗಾರಮ್ಮನ ಕೆರೆ ಇವತ್ತು ಸ್ಥಳೀಯರು ಹಾಗೂ ತಾಲೂಕಿನ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ನೌಕರರ ಮಕ್ಕಳು ಇತರರಿಗೆ ಈಜು ಕಲಿಸುವ ತಾಣವಾಗಿ ಮಾರ್ಪಟ್ಟಿದೆ. ಕೃಷಿಕರಿಗೆ ನೀರಿನ ಅನುಕೂಲ ಒದಗಿದೆ. ಈ ಭಾಗದ ಕಾಡುಕೋಣ, ಮಂಗ ಇನ್ನಿತರ ಪ್ರಾಣಿ ಪಕ್ಷಿಗಳಿಗೆ ಈ ಎರಡು ಕೆರೆಗಳು ನೀರು ಒದಗಿಸುವ ತಾಣಗಳಾಗಿವೆ. ಇಂತಹ ಉಪಯೋಗ ಈ ಅಗಸ್ತ್ಯ ತೀರ್ಥದಿಂದಲೂ ಲಭಿಸಬೇಕು ಎಂಬ ಆಶಯದಿಂದ ಹೂಳು ತೆಗೆಯುವ ಕೆಲಸ ಆರಂಭಿಸಲಾಗಿದೆ ಎಂದರು.

ವರದಾಮೂಲದ ಅಗಸ್ತ್ಯ ಕೆರೆಗೆ ಧಾರ್ಮಿಕ ನೆಲೆಗಟ್ಟಿನ ಮೇಲೆ ಅತ್ಯಂತ ಮಹತ್ವದ ಸ್ಥಾನವಿದೆ. ಮೃತರ ಅಸ್ಥಿಯನ್ನು ವಿಸರ್ಜಿಸುವುದಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗುವುದು. ಒಂದೆಡೆ ಕೆರೆಯ ಆರೋಗ್ಯಕ್ಕೆ ಧಕ್ಕೆಯಾಗದಂತೆ ಹಾಗೂ ಕೆರೆಯ ಸ್ವರೂಪಕ್ಕೂ ಹಾನಿಯಾಗದಂತಹ ಮಾದರಿಯಲ್ಲಿ ಅಸ್ಥಿ ವಿಸರ್ಜನೆಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಲಿದೆ ಎಂದರು.

ಇವರೆಲ್ಲ ಇದ್ದಾರೆ!
ಭೀಮನಕೋಣೆ ಪಿಎಲ್‌ಡಿಬಿ ಬ್ಯಾಂಕ್ ಮಾಜಿ ಅಧ್ಯಕ್ಷ ವ.ಶಂ.ರಾಮಚಂದ್ರಭಟ್, ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ಚಿಪ್ಳಿ, ಜೀವಜಲ ಕಾರ್ಯಪಡೆಯ ಪ್ರಮುಖ ಕಾರ್ಯಕರ್ತರಾದ ಎಲ್.ವಿ.ಅಶೋಕ, ಜಯಪ್ರಕಾಶ್ ಗೋಳಿಕೊಪ್ಪ, ಸುರೇಶ್‌ಗೌಡ, ಮಂಜುನಾಥ್ ವರದಾಮೂಲ, ವಿ.ಜಿ. ಶ್ರೀಧರ್ ಮೊದಲಾದವರು ಕೈಜೋಡಿಸಿದ್ದಾರೆ.

ಸಹಾಯ ಮಾಡುವವರು ಸಂಪರ್ಕಿಸಿ….
ಧಾರ್ಮಿಕವಾಗಿ ಅತ್ಯಂತ ಮಹತ್ವವಿರುವ ಅಗಸ್ತ್ಯ ಕೆರೆಯ ಪುನರುಜ್ಜೀವನ ಒದಗಿಸುವ ಕೆಲಸಕ್ಕೆ ಕೈ ಜೋಡಿಸುವವರು ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ಚಿಪ್ಳಿ ಅವರನ್ನು ಮೊಬೈಲ್ ಸಂಖ್ಯೆ 9449718869 ಮೂಲಕ ಸಂಪರ್ಕಿಸಿ ಹೆಚ್ಚಿನ ವಿವರ ಪಡೆಯಬಹುದು.

– ಮಾ.ವೆಂ.ಸ.ಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next