Advertisement

ಅಗಸ್ತ್ಯ ಋಷಿ ಶಾಪ… ಗಜೇಂದ್ರ ಮೋಕ್ಷದ ಹಿಂದಿನ ರಹಸ್ಯವೇನು?

07:32 PM Apr 13, 2020 | |

ಒಂದಾನೊಂದು ಕಾಲದಲ್ಲಿ ಇಂದ್ರದ್ಯುಮ್ನನೆಂಬುವವನು ಪಾಂಡ್ಯ ದೇಶವನ್ನು ಧರ್ಮದಿಂದ ಆಳುತ್ತಿದ್ದನು. ಅವನು ಶ್ರೀಮನ್ನಾರಾಯಣನ ಪರಮಭಕ್ತ. ರಾಜ್ಯವನ್ನು ತೊರೆದು ಮಲಯ ಪರ್ವತದ ತಪ್ಪಲಿನಲ್ಲಿ ಆಶ್ರಮವನ್ನು ಕಟ್ಟಿ ಮೌನವ್ರತ ಧಾರಣೆಮಾಡಿ ಶ್ರೀಹರಿಯ ನಾಮಸ್ಮರಣೆ ಮಾಡುತ್ತಾ ತಪೋನಿರತನಾಗಿಬಿಟ್ಟನು.

Advertisement

ಇಂದ್ರದ್ಯುಮ್ನನ ಕುಲಪುರೋಹಿತರಾದ ಅಗಸ್ತ್ಯ ಋಷಿಗಳು ರಾಜನು ಮಾಡಿದ್ದನ್ನು ಕೇಳಿ ಬಹಳ ಹರುಷಗೊಂಡರು. ಅವನ ಘನತೆಯನ್ನು ಪ್ರತ್ಯಕ್ಷವಾಗಿಯೇ ನೋಡುವ ಹಂಬಲದಿಂದ ಅವನ ಆಶ್ರಮಕ್ಕೆ ಹೊರಟು ಬಂದರು.  ಆಗ ರಾಜನು ಶ್ರೀಹರಿಯ ಧ್ಯಾನದಲ್ಲಿ ತನ್ನನ್ನು ತಾನು ಮರೆತು ಕುಳಿತಿದ್ದನು. ಗುರುಗಳು ಬಂದದ್ದನ್ನು ಲಕ್ಷಿಸಲೇ ಇಲ್ಲ. ಇದರಿಂದ ಕೋಪಗೊಂಡ ಋಷಿಗಳು “ನೀನು ಮದಾಂಧವಾದ ಆನೆಯಾಗು” ಎಂದು ಶಪಿಸಿ ಹೊರಟು ಹೋದರು.

ತನ್ನ ಅನುಷ್ಠಾನವು ಮುಗಿದ ಬಳಿಕ ಇಂದ್ರದ್ಯುಮ್ನನು ಕಣ್ತೆರೆದನು, ಅಗಸ್ತ್ಯರು ಬಂದು ಹೋದದ್ದನ್ನು ಅವರು ಶಾಪಕೊಟ್ಟದ್ದು ಎಲ್ಲವನ್ನು ತಪಃ ಶಕ್ತಿಯಿಂದ ಅರಿತನು. “ಸರಿ ಇದೆಲ್ಲವೂ ತನ್ನ ಪ್ರಾರಬ್ದಕ್ಕನುಗುಣವಾಗಿ ನಡೆಯಿತೆಂದು ಸುಮ್ಮನಾದನು. ರಾಜನ ಮರಣದ ನಂತರ ತ್ರಿಕೂಟ ಪರ್ವತದ ಸುತ್ತಲಿರುವ ದಟ್ಟವಾದ ಅರಣ್ಯದಲ್ಲಿ ಬಿದಿರಿನ ಮೆಳೆಗಳು ಬಹಳವಾಗಿರುವದರಿಂದ ಆನೆಗಳ ಸಂಖ್ಯೆ ಅತಿಯಾಗಿದ್ದವು. ಇಲ್ಲಿ ಆನೆಗಳ ಗುಂಪಿನಲ್ಲಿ ಗಂಡಾನೆಯಾಗಿ ಜನಿಸಿದನು, ಬಹು ಬೃಹದಾಕಾರನಾಗಿಯೂ ಅಸಮಾನ ಬಲಾಢ್ಯನಾಗಿಯೂ ಬೆಳೆದು ಆ ಅರಣ್ಯದಲ್ಲಿನ ಸಮಸ್ತ ಗಜ ವೃಂದಕ್ಕೆ ಅಧಿಪತಿಯಾಗಿ ” ಗಜೇಂದ್ರ” ಎಂದು ಮೆರೆಯತೊಡಗಿದನು.

ಮತ್ತೊಂದು ಕಡೆ ದೇವಲೋಕದ ಗಂಧರ್ವರಲ್ಲಿ “ಹೂಹೂ” ಎಂಬುವನು ಒಮ್ಮೆ ಭೂಮಿಗೆ ಬಂದು ಒಂದು ಉದ್ಯಾನವದಲ್ಲಿ ವಿಹರಿಸುತ್ತಿರುವಾಗ ಅವನೆದುರು ದೇವಲ ಋಷಿಗಳು ಬರುತ್ತಿದ್ದರು. ಆ ಋಷಿಗಳು ವೃದ್ಧಾಪ್ಯದಿಂದ ಕೃಷವಾಗಿ ಕುರೂಪಿಯಾಗಿದ್ದರು. ಇವರನ್ನು ಕಂಡ ಹೂಹೂ ಹಾಸ್ಯದಿಂದ ನಕ್ಕನು. ಇದರಿಂದ ಋಷಿಗಳು ಸಿಟ್ಟಾಗಿ, “ಎಲೈ ಮಧಾಂಧಾ ನೀನು ಈಗಿಂದೀಗಲೇ ಕ್ರೂರ ಜಂತುವಾದ ಮೊಸಳೆಯಾಗು” ಎಂದು ಶಪಿಸಿದರು. ತಪ್ಪಿನ ಅರಿವಾಗಿ ಹೂಹೂ ಪಶ್ಚಾತ್ತಾಪದಿಂದ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದನು. ಆಗ ದೇವಲರು ಕರುಣೆಯಿಂದ ” ಗಂಧರ್ವ ಏಳು , ನಾನು ಕೊಟ್ಟ ಶಾಪವು ಸುಳ್ಳಾಗಲಾರದು, ಮೊಸಳೆ ಜನ್ಮ ನೀನು ತಾಳಿದಾಗ ನಿನ್ನಂತೆ ಶಾಪಗ್ರಸ್ಥವಾದ ಒಂದು ಆನೆಯ ಕಾಲನ್ನು ಹಿಡಿ ಆಗ ಆ ಪುಣ್ಯಾತ್ಮನ ಪ್ರಾರ್ಥನೆಗೆ ಒಲಿದು ಶ್ರೀ ಮಹಾವಿಷ್ಣುವು ಅವನನ್ನು ಉದ್ಧರಿಸಲು ಬರುವನು. ಆಗ ನಿನ್ನ ಶಾಪವಿಮೋಚನೆಯಾಗುತ್ತದೆ”  ಎಂದು ಹೇಳಿ ಹೊರಟುಹೋದರು.

ಹೂಹೂ ಗಂಧರ್ವನು ಬೃಹದಾಕಾರದ ಮೊಸಳೆಯಾಗಿ ತ್ರಿಕೂಟ ಪರ್ವತದ ಅರಣ್ಯದ ಮಧ್ಯದಲ್ಲಿದ್ದ ಋತುಮಂಥ ಎಂಬ ಸರೋವರವನ್ನು ಹೊಕ್ಕು ಅಲ್ಲಿ ವಾಸಿಸತೊಡಗಿದನು.

Advertisement

ಒಮ್ಮೆ ಗಜೇಂದ್ರನು ಅದೇ ಋತುಮಂಥ ಸರೋವರದಲ್ಲಿ ತನ್ನ ಪರಿವಾರ ಸಮೇತ ಇಳಿದು ಸ್ವಚ್ಛಂದವಾಗಿ ವಿಹರಿಸಿ ದಡಕ್ಕೆ ಬರುವ ಸಮಯಕ್ಕೆ ಸರಿಯಾಗಿ ಅಲ್ಲೇ ವಾಸಿಸುತ್ತಿದ್ದ ಮೊಸಳೆಯೂ (ಹೂ ಹೂ  ಗಂಧರ್ವನು) ಗಜೇಂದ್ರನ ಕಾಲನ್ನು ಹಿಡಿಯಿತು. ಗಜೇಂದ್ರನು ಕಾಲನ್ನು ಝಾಡಿಸುತ್ತ ಮೊಸಳೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಬಹಳವಾಗಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವನ ಪರಿವಾರದವರು ಪ್ರಯತ್ನಿಸಿದರೂ ಅವರೆಲ್ಲರ ಶಕ್ತಿಮೀರಿ ಮೊಸಳೆಯೂ ಗಜೇಂದ್ರನನ್ನು ನೀರಿನಲ್ಲಿ ಜಗ್ಗತೊಡಗಿತು. ತಮ್ಮಿಂದ ಸಾಧ್ಯವಿಲ್ಲವೆಂದು ಎಲ್ಲ ಆನೆಗಳು ಹಿಂತಿರುಗಿದವು

ಗಜೇಂದ್ರನು ನೋವಿನಿಂದ ಪರಿತಪಿಸುತ್ತಿರಲು ಅವನಿಗೆ ತನ್ನ ಪೂರ್ವಜನ್ಮದ ಸ್ಮರಣೆಯಾಯಿತು. ತನ್ನ ಹಿಂದಿನ ಜನ್ಮದಲ್ಲಿ ಶ್ರೀಹರಿಯ ಭಕ್ತನಾಗಿದ್ದು ನೆನೆದು ಶ್ರೀಹರಿಯನ್ನು ಭಕ್ತಿಯಿಂದ ಸ್ತೋತ್ರಮಾಡತೊಡಗಿದನು. ಗಜೇಂದ್ರನು ಮರಣ ಸಂಕಟದಿಂದ ತೊಳಲಾಡುತ್ತಿದ್ದರು ಸಹ ಅದನ್ನು ಮರೆತು ಶ್ರೀಹರಿಯ ಪಾದಾರವಿಂದಗಳಲ್ಲಿ ಮನಸ್ಸಿಟ್ಟು ಕೂಗಲು ಶ್ರೀಮನ್ನಾರಾಯಣನು ಗರುಡವಾಹನವಾಗಿ ಬಂದು ತನ್ನ ಸುದರ್ಶನ ಚಕ್ರದಿಂದ ಹೊಡೆದು ಗಜೇಂದ್ರನ ಕಾಲನ್ನು ಎಳೆಯುತ್ತಿದ್ದ ಮೊಸಳೆಯನ್ನು ಕತ್ತರಿಸಿದನು. ಕೂಡಲೇ ಅದರೊಳಗಿಂದ ಹೂಹೂ ಗಂಧರ್ವನು ತನ್ನ ಮೂಲ ರೂಪದಿಂದೆದ್ದುಬಂದು ಶ್ರೀಮನ್ನಾರಾಯಣನಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನರ್ಪಿಸಿ ತನ್ನ ಲೋಕಕ್ಕೆ ಹೊರತು ಹೋದನು.

ನಂತರ ಶ್ರೀಹರಿಯು ಗರುಡನಿಂದ ಇಳಿದು ಗಜೇಂದ್ರನ ಮೈದಡವಿ ಸಮಾಧಾನ ಪಡಿಸಿದನು. ಶ್ರೀಹರಿಯ ಸ್ಪರ್ಶದಿಂದ ಗಜೇಂದ್ರನು ತನ್ನ ನಿಜರೂಪವಾದ ಇಂದ್ರದ್ಯುಮ್ನನಾಗಿ ಶ್ರೀಹರಿಯ ಮುಂದೆ ನಿಂತನು, ಶ್ರೀಹರಿಯು ಗಜೇಂದ್ರನಿಗೆ (ಇಂದ್ರದ್ಯುಮ್ನನಿಗೆ) ಮೋಕ್ಷವನ್ನು ಕರುಣಿಸಿ ತನ್ನ ಸಂಗಡ ವೈಕುಂಠಕ್ಕೆ ಕರೆದೊಯ್ದನು. ಭಕ್ತಿಯಿಂದ ಭಜಿಸುವ ಭಕ್ತರು ಸಂಕಟದಲ್ಲಿದ್ದಾಗ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ  ಶ್ರೀಹರಿಯು ಅವರನ್ನು ರಕ್ಷಿಸುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next