Advertisement

ಸಂತ್ರಸ್ತರಿಗೆ ನೀರೂ ಇಲ್ಲ, ಪರಿಹಾರವೂ ಇಲ್ಲ!

11:47 AM Jan 02, 2019 | |

ಹಾವೇರಿ: ಜಮೀನಿಗೆ ನೀರಾವರಿಯಾಗುತ್ತದೆಂಬ ಆಶಾಭಾವನೆಯಿಂದ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕೊಟ್ಟ ರೈತರಿಗೆ ಅತ್ತ ನೀರೂ ಇಲ್ಲ ಇತ್ತ ಪರಿಹಾರವೂ ಇಲ್ಲ! ಇದು ತಾಲೂಕಿನ ಅಗಸನಕಟ್ಟಿ, ಯಲಗಚ್ಚ, ರಾಮಾಪುರ, ಕರ್ಜಗಿ ಗ್ರಾಮದ ರೈತರ ದುಸ್ಥಿತಿ. ಈ ಗ್ರಾಮಗಳ ರೈತರು ಅಸನಮಟ್ಟಿ ಏತ ನೀರಾವರಿ ಯೋಜನೆಗಾಗಿ 1500ರಿಂದ 2000 ಎಕರೆ ಜಮೀನು ತ್ಯಾಗ ಮಾಡಿದ್ದಾರೆ. ಆದರೆ, ಕಾಲುವೆಗಾಗಿ ಜಮೀನು ಕಳೆದುಕೊಂಡವರಿಗೆ ಈ ವರೆಗೆ ಪರಿಹಾರವೂ ಸರಿಯಾಗಿ ಸಿಕ್ಕಿಲ್ಲ. ಕಾಲುವೆಯಲ್ಲಿ ನೀರೂ ಹರಿದಿಲ್ಲ.

Advertisement

ಅಗಸನಮಟ್ಟಿ ಹತ್ತಿರದಲ್ಲಿ ಸಣ್ಣ ನೀರಾವರಿ ಇಲಾಖೆ 1979- 80ರಲ್ಲಿ ವರದಾ ನದಿಯಿಂದ ಆ ಭಾಗದ ರೈತರ ಹೊಲಗಳಿಗೆ ನೀರುಣಿಸುವ ಉದ್ದೇಶದಿಂದ 8.65 ಲಕ್ಷ ರೂ. ವೆಚ್ಚದಲ್ಲಿ 1ನೇ ಹಂತದ ಅಗಸನಮಟ್ಟಿ ಏತನೀರಾವರಿ ಯೋಜನೆ ಕೈಗೆತ್ತಿಕೊಂಡಿತು. ವರದಾ ನದಿಯ ಪಕ್ಕದಲ್ಲಿ ಜಾಕ್‌ ವೆಲ್‌ ನಿರ್ಮಾಣ ಮಾಡಿ ಪಂಪ್‌ ಮೂಲಕ ನೀರು ಎತ್ತುವುದು, 7.36 ಕಿಮೀ ಕಾಲುವೆ ನಿರ್ಮಾಣ ಮಾಡಿ ಅಗಸನಮಟ್ಟಿ, ರಾಮಾಪುರ ಹಾಗೂ ಕರ್ಜಗಿ ಗ್ರಾಮದ ರೈತರ 850 ಎಕರೆ ಪ್ರದೇಶಕ್ಕೆ ನೀರು ಹರಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಈ ಯೋಜನೆಗಾಗಿ ಬಿಡುಗಡೆಯಾದ ಒಟ್ಟು 8.65 ಲಕ್ಷ ರೂ. ಅನುದಾನ ಸಾಕಾಗದೆ ಇರುವುದರಿಂದ ಗುತ್ತಿಗೆದಾರ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟರು. ಆದರೆ, ನಂತರ ಬಿಡುಗಡೆಯಾದ ಅನುದಾನದಲ್ಲಿ 2004ರಲ್ಲಿ 2ನೇ ಹಂತದ ಕಾಮಗಾರಿಯ ಜತೆಗೆ 1ನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಸರ್ಕಾರ 2003ರಲ್ಲಿ 2ನೇ ಹಂತದ ನೀರಾವರಿ ಯೋಜನೆ ಆರಂಭಿಸಲು ಯೋಜನೆಗಾಗಿ 2.56ಕೋಟಿ ರೂ. ಅನುದಾನ ನೀಡಿದೆ. ಅದೇ ಗುತ್ತಿಗೆದಾರನಿಗೆ ಅರ್ಧಕ್ಕೆ ಬಿಟ್ಟ ಒಂದನೇಯ ಹಂತ ಹಾಗೂ ಎರಡನೇಯ ಹಂತದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿತು.

ಎರಡನೇ ಹಂತದಲ್ಲಿ 3 ಕಿಮೀ ಕಾಲುವೆ ನಿರ್ಮಾಣ ಮಾಡಲಾಗಿದ್ದು, ಯಲಗಚ್ಚ ಗ್ರಾಮದ 234 ಎಕರೆ ಪ್ರದೇಶಕ್ಕೆ ನೀರು ಹರಿಸುವ ಯೋಜನೆಯನ್ನು ರೂಪಿಸಲಾಯಿತು. ಅದರಂತೆ ಗುತ್ತಿಗೆದಾರ 2004 ಇಸ್ವಿಯಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾನೆ. ಆದರೆ, ಇಲಾಖೆ 2005ರಲ್ಲಿ ಒಂದು ಬಾರಿ ಮಾತ್ರ ಕಾಲುವೆಯಲ್ಲಿ ನೀರು ಹರಿಸಿದ್ದು ಬಿಟ್ಟರೆ ಇಲ್ಲಿವರೆಗೂ ಕಾಲುವೆಗಳು ನೀರೇ ಕಂಡಿಲ್ಲ. ಉಪಕಾಲುವೆಗಳ ನಿರ್ಮಾಣವಂತೂ ಆಗಿಯೇ ಇಲ್ಲ.

ಕಾಲುವೆಯಲ್ಲಿ ಗಿಡಗಂಟಿ…: 2005ರ ನಂತರದಲ್ಲಿ ಕಾಲುವೆಯಲ್ಲಿ ನೀರು ಹರಿಯದ ಪರಿಣಾಮ ಹೂಳು ತುಂಬಿಕೊಂಡಿದ್ದು, ಆಳೆತ್ತರದ ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಇನ್ನು ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಕೆಲ ರೈತರು ಪರಿಹಾರಕ್ಕಾಗಿ ಅಲೆದಾಡಿ ಬೇಸತ್ತು ಕಾಲುವೆಯನ್ನು ಒಡೆದು ಬಿತ್ತನೆ ಮಾಡಿದ್ದಾರೆ.

Advertisement

ನೀರಾವರಿ ಯೋಜನೆಗಾಗಿ ಅಗಸನಮಟ್ಟಿ, ರಾಮಾಪುರ, ಕರ್ಜಗಿ ಹಾಗೂ ಯಲಗಚ್ಚ ಗ್ರಾಮದ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ, ಆದರೆ, ರೈತರು ಮಾತ್ರ ಇನ್ನೂ ಪೂರ್ತಿ ಹಣ ನೀಡಿಲ್ಲ ಎನ್ನುತ್ತಾರೆ. ಇನ್ನು 2ನೇ ಹಂತದಲ್ಲಿ ಅಗಸನಮಟ್ಟಿ ಗ್ರಾಮದ 23, ರಾಮಾಪುರದಲ್ಲಿ 12, ಕರ್ಜಗಿ 10, ಯಲಗಚ್ಚ ಗ್ರಾಮದಲ್ಲಿ 7 ರೈತರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಒಟ್ಟಾರೆ ನೂರಾರು ಎಕರೆ ಭೂಮಿ ಕಳೆದುಕೊಂಡು ಕಾಲುವೆ ನಿರ್ಮಿಸಿದರೂ ಇಲ್ಲಿಯ ಬೆಳೆಗಳಿಗೆ ಒಂದು ಹನಿಯೂ ನೀರು ಸಿಗದಿರುವುದು ಖೇದಕರ ಸಂಗತಿ.

ನೀರಾವರಿ ಕಲ್ಪಿಸುವ ಉದ್ದೇಶದಿಂದ ಕಾಲುವೆ ನಿರ್ಮಿಸಿ ರೈತರ ಭೂಮಿ ಹಾಳು ಮಾಡಲಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವನ್ನೂ ನೀಡಿಲ್ಲ. ಈ ಕುರಿತು ಸಾಕಷ್ಟು ಬಾರಿ ಅ ಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಿರ್ವಹಣೆ ಕೊರತೆಯಿಂದಾಗಿ ಕಾಲುವೆ ಸಂಪೂರ್ಣ ಹಾಳಾಗಿದೆ.
 ತೇಜಪ್ಪ, ರೈತ.

ಅಗಸನಮಟ್ಟಿ ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ದೊರೆತಿಲ್ಲವೆಂದು ಅಲ್ಲಿನ ರೈತರು ಕಾಲುವೆಯಲ್ಲಿ ನೀರು ಹರಿಸಲು ಬಿಡುತ್ತಿಲ್ಲ. ಈಗಾಗಲೇ 2012-13ರಲ್ಲಿ 65ಲಕ್ಷ ರೂ. ವೆಚ್ಚದಲ್ಲಿ ಕಾಲುವೆಯಲ್ಲಿನ ಹೂಳು ತೆಗೆಯಲಾಗಿದೆ. ಪರಿಹಾರಕ್ಕಾಗಿ ಇನ್ನೊಂದು ಬಾರಿ ಸರ್ವೆ ಮಾಡಿಸಿ ಉಪವಿಭಾಗಾಧಿಕಾರಿ ಕಚೇರಿಗೆ ನೀಡಿದ್ದು, ಅಲ್ಲಿಂದ ಬಂದ ವರದಿಯನ್ನು ನೀರಾವರಿ ಇಲಾಖೆಗೆ ಕಳುಹಿಸಲಾಗುವುದು. ನಂತರ ಇಲಾಖೆ ರೈತರಿಗೆ ಪರಿಹಾರ ನೀಡುತ್ತದೆ.
 ಹೆಸರು ಹೇಳಲಿಚ್ಛಿಸದ ಸಣ್ಣ ನೀರಾವರಿ
ಇಲಾಖೆ ಅಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next