Advertisement

ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣೆ -ಪ್ರಶಸ್ತಿ ಪ್ರದಾನ 

06:00 AM Mar 30, 2018 | Team Udayavani |

ಯಕ್ಷರಂಗದಲ್ಲಿ ತಮ್ಮದೇ ಪರಂಪರೆಯ ಭಾಗವತಿಕೆ ಅಗರಿ ಶೈಲಿಯನ್ನು ಹುಟ್ಟು ಹಾಕಿದವರು ಯಕ್ಷಬ್ರಹ್ಮ ಎನಿಸಿದ ದಿ.ಅಗರಿ ಶ್ರೀನಿವಾಸ ಭಾಗವತರು.ಶಿಸ್ತಿನ ರಂಗ ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದ ಅಗರಿಯವರು 75ಕ್ಕೂ ಮಿಕ್ಕಿ ಪೌರಾಣಿಕ ಪ್ರಸಂಗಗಳನ್ನು ಕಂಠಪಾಟ ಹೊಂದಿದ್ದರು. ಛಂದಃಶಾಸ್ತ್ರದಲ್ಲಿ ಅದ್ಭುತ ಹಿಡಿತ ಹೊಂದಿದ್ದ ಅಗರಿಯವರು ಯಕ್ಷರಂಗದಲ್ಲಿ ದಾಖಲೆ ನಿರ್ಮಿಸಿದ ಶ್ರೀದೇವಿಮಹಾತ್ಮೆ ಅಲ್ಲದೆ ಬಪ್ಪನಾಡು ಕ್ಷೇತ್ರಮಹಾತ್ಮೆ , ಕಟೀಲು ಕ್ಷೇತ್ರ ಮಹಾತ್ಮೆ , ಶ್ರೀದೇವಿ ಲಲಿತೋಪಖ್ಯಾನ , ಭರತೇಶ ವೈಭವ , ಶಿವ ಲೀಲಾರ್ಣವ , ಭಗವಾನ್‌ ಬುದ್ಧ , ತುಳುನಾಡ ಸಿರಿ ಮುಂತಾದ ಮೌಲಿಕ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಪ್ರಸಂಗಕರ್ತರೂ ಹೌದು. 

Advertisement

 ಅಗರಿ ಶ್ರೀನಿವಾಸ ಭಾಗವತರ ನೆನಪಿನಲ್ಲಿ ಅವರ ಪುತ್ರರಾದ ಅಗರಿ ರಘುರಾಮ ಭಾಗವತ, ಪ್ರಸಂಗಕರ್ತ ಅಗರಿ ಭಾಸ್ಕರ್‌ ರಾವ್‌ ಹಾಗೂ ಮೊಮ್ಮಕ್ಕಳಾದ ಅಗರಿ ಎಂಟಪ್ರೈಸಸ್‌ನ ಮಾಲಕರಾದ ಅಗರಿ ರಾಘವೇಂದ್ರ ರಾವ್‌ , ವಾದಿರಾಜ್‌ ರಾವ್‌ರವರು ಸ್ಥಾಪಿಸಿದ “ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಸಮಿತಿ ಸುರತ್ಕಲ್‌ ಮೂಲಕ 2006ರಿಂದ ಪ್ರತಿ ವರ್ಷ ಹಿರಿಯ ಕಲಾವಿದರನ್ನು ಗುರುತಿಸಿ “ಅಗರಿ ಪ್ರಶಸ್ತಿ’ ನೀಡಿ ಸಮ್ಮಾನಿಸುವ ಪರಂಪರೆಯನ್ನು ಪಾಲಿಸಿಕೊಂಡು ಬಂದಿದ್ದಾರೆ . 2017ನೇ ಸಾಲಿನ ಅಗರಿ ಪ್ರಶಸ್ತಿಗೆ ಅರ್ಥಧಾರಿ , ಚಿಂತಕ ಹಾಗೂ ವಿಮರ್ಶಕರಾದ ಡಾ| ಪ್ರಭಾಕರ ಜೋಶಿಯವರು ಆಯ್ಕೆಯಾಗಿದ್ದಾರೆ . 

ಪ್ರಭಾಕರ ಜೋಶಿ
ಡಾ| ಪ್ರಭಾಕರ ಜೋಶಿಯವರು ಶೇಣಿಯುಗ ಹಾಗೂ ಪ್ರಸ್ತುತ ಕಲಾವಿದರ ನಡುವಿನ ಕೊಂಡಿಯಾಗಿ ಗುರುತಿಸಿಕೊಂಡವರು . ಅಗರಿ ಶ್ರೀನಿವಾಸ ಭಾಗವತರೊಂದಿಗೆ ನೂರಾರು ಕೂಟಗಳಲ್ಲಿ ಕಾಣಿಸಿಕೊಂಡವರು.ಯಕ್ಷಗಾನದಲ್ಲೇ ಅಪಾರ ಸಾಧನೆ ಮಾಡಿ ಡಾಕ್ಟರೇಟ್‌ ಪಡೆದ ಹಿರಿಯ ಕಲಾವಿದರೂ ಹೌದು . ಯಕ್ಷಗಾನದ ಯಾವುದೇ ಜಿಜ್ಞಾಸೆಗಳಿಗೆ ಇದಮಿತ್ಥಂ ಎಂದು ಹೇಳಬಲ್ಲ ಅನುಭವೀ ವಿದ್ವಾಂಸರು.ಕಾಲೇಜಿನ ಪ್ರಾಚಾರ್ಯರಾಗಿದ್ದು ನಿವೃತ್ತರಾಗಿರುವ ಡಾ| ಜೋಶಿಯವರ ಅರ್ಥಗಾರಿಕೆ ಯಕ್ಷಗಾನ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ . ಸಾವಿರಾರು ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ , ಅವಲೋಕನಕಾರರಾಗಿ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಡಾ|ಜೋಷಿಯವರಿಗೆ ಅಗರಿ ಪ್ರಶಸ್ತಿ ಸಾಧನೆಗೆ ಅರ್ಹವಾಗಿಯೇ ಸಂದಿದೆ. 

ರವಿಚಂದ್ರ ಕನ್ನಡಿಕಟ್ಟೆ 
ಕಳೆದ ವರ್ಷ ಮೂಡಬಿದಿರೆಯಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ರಾಘವೇಂದ್ರ ರಾವ್‌ರವರು ಅಗರಿ ಶೈಲಿಯನ್ನು ಹೆಚ್ಚು ಭಾರಿ ಬಳಕೆ ಮಾಡುವ ಭಾಗವತರನ್ನು ಗುರುತಿಸಿ ಗೌರವ ಸಮ್ಮಾನ ಪ್ರಶಸ್ತಿ ನೀಡುವುದಾಗಿ ಘೋಷಿಸಿ , ಪ್ರೇಕ್ಷಕರೇ ಈ ಕುರಿತು ಮಾಹಿತಿ ನೀಡಬೇಕೆಂದು ವಿನಂತಿಸಿದ್ದರು .ಅದರಂತೆ ಈ ಸಾಲಿನ ಗೌರವ ಪ್ರಶಸ್ತಿಗೆ ಯುವ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರು ಆಯ್ಕೆಯಾಗಿದ್ದಾರೆ.ರವಿಚಂದ್ರ ವೇಷಧಾರಿಯಾಗಿ ಸುರತ್ಕಲ್‌ ಮೇಳಕ್ಕೆ ಪ್ರವೇಶಿಸಿದವರು. ಅವರ ಸುಶ್ರಾವ್ಯ ಕಂಠ ಗುರುತಿಸಿದ ಅಂದಿನ ಸುರತ್ಕಲ್‌ ಮೇಳದ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು ರವಿಚಂದ್ರರನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ರವಿಚಂದ್ರ ಅಲ್ಪ ಕಾಲಾವಧಿಯಲ್ಲಿ ಭಾಗವತಿಕೆಯ ಪಟ್ಟು ಕರಗತ ಮಾಡಿಕೊಂಡು ಗುರುಗಳೊಂದಿಗೆ ತಿರುಗಾಟ ಆರಂಭಿಸಿದರು. 

ಪದ್ಯಾಣರು ಇಂದಿಗೂ ಅಗರಿಶೈಲಿಯನ್ನು ತಮ್ಮ ಭಾಗವತಿಕೆಯಲ್ಲಿ ಅಳವಡಿಸಿಕೊಳ್ಳುತ್ತಾರೆ .ಇದರಿಂದ ಪ್ರೇರಿತಗೊಂಡ ಕನ್ನಡಿಕಟ್ಟೆಯವರೂ ತಮ್ಮ ಭಾಗವತಿಕೆಯಲ್ಲಿ ನಾಲ್ಕೈದು ಪದ್ಯಗಳನ್ನಾದರೂ ಅಗರಿಶೈಲಿಯಲ್ಲೇ ಹಾಡುವ ಪರಿಪಾಠ ಹೊಂದಿದ್ದಾರೆ.ಸ್ಪಷ್ಟ ಉಚ್ಛಾರ , ಸಮುಚಿತ ರಾಗಗಳ ಬಳಕೆ , ಸಂದರ್ಭ, ರಸಭಾವವನ್ನು ಲಕ್ಷಿಸಿ ರಾಗಗಳ ಸಂಯೋಜನೆ ಎಲ್ಲವೂ ಕನ್ನಡಿಕಟ್ಟೆಯವರ ಭಾಗವತಿಕೆಯಲ್ಲಿ ಮೇಳೈಸಿರುವ ಅಂಶಗಳು. 

Advertisement

 ಗೋವಿಂದದಾಸ್‌ ಕಾಲೇಜ್‌ ಸುರತ್ಕಲ್‌ ಹಾಗೂ ಶ್ರೀದುರ್ಗಾ ಮಕ್ಕಳ ಮೇಳ ಕಟೀಲು ಇವರ ಸಹಕಾರದಲ್ಲಿ ಎ.1ರಂದು ಕಟೀಲಿನ ಸರಸ್ವತಿ ಸದನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ .ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಕಟೀಲಿನ ಅಸ್ರಣ್ಣ ಬಂಧುಗಳ , ಡಾ| ಚಿನ್ನಪ್ಪ ಗೌಡ , ಹೃದ್ರೋಗ ತಜ್ಞರಾದ ಡಾ| ಪದ್ಮನಾಭ ಕಾಮತ್‌ , ಶ್ರೀಪತಿ ಭಟ್‌ರ ಉಪಸ್ಥಿತಿಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು .

ಕಟೀಲಿನ ಅನುವಂಶಿಕ ಅರ್ಚಕರಾದ ಶ್ರೀಹರಿ ನಾರಾಯಣದಾಸ ಅಸ್ರಣ್ಣರು ಅಭಿನಂದನಾ ಭಾಷಣ ಮಾಡಲಿದ್ದಾರೆ .ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ಭಾಷಣವನ್ನು ಯಕ್ಷಗಾನ ವಿಮರ್ಶಕ ಎಂ .ಶಾಂತರಾಮ ಕುಡ್ವ ನೆರವೇರಿಸಲಿದ್ದಾರೆ .ಅನಂತರ ಅಗರಿ ಶೈಲಿಯ ಗಾನವೈಭವ ಹಾಗೂ ತಾಳಮದ್ದಳೆ ಕೂಟ ಜರಗಲಿದೆ.
 
ಎಂ.ಶಾಂತರಾಮ ಕುಡ್ವ 

Advertisement

Udayavani is now on Telegram. Click here to join our channel and stay updated with the latest news.

Next