Advertisement

ಅಗಲಗುರ್ಕಿ ರೈಲ್ವೆ ಅಂಡರ್‌ಪಾಸ್‌ಗೆ ಬಿಡದ ಗ್ರಹಣ!

03:08 PM Jun 26, 2023 | Team Udayavani |

ಚಿಕ್ಕಬಳ್ಳಾಪುರ: ನಗರದ ಹೊರ ವಲಯದ ಅಗಲಗುರ್ಕಿ ಗ್ರಾಮದ ಬಳಿ ನಿರ್ಮಿಸಿರುವ ರೈಲ್ವೆ ಅಂಡರ್‌ಪಾಸ್‌ಗೆ ಅಂಟಿರುವ ಗ್ರಹಣ ಸದ್ಯಕ್ಕೆ ಬಿಡುವ ಲಕ್ಷಣ ಕಾಣುತ್ತಿಲ್ಲ. ಅವೈಜ್ಞಾನಿಕ ಅಂಡರ್‌ಪಾಸ್‌ ಕಾಮಗಾರಿ ಲಕ್ಷಾಂತರ ರೂ. ವೆಚ್ಚ ಮಾಡಿರುವ ಅಧಿಕಾರಿಗಳು ಕಾಮಗಾರಿ ಮುಗಿಸದೇ ಅಥವಾ ಬದಲಿ ಕಾಮಗಾರಿ ಕೈಗೆತ್ತಿ ಕೊಳ್ಳದೇ ನಿರ್ಲಕ್ಷಿಸಿದ್ದು, ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸಬೇಕಾಗಿದೆ.

Advertisement

ಅಗಲಗುರ್ಕಿ ಗ್ರಾಮ ಹೆಚ್ಚು ಜನ ದಟ್ಟಣೆ ಇರುವ ಕಾರಣಕ್ಕೆ ಸುತ್ತಮುತ್ತ ಸಾಕಷ್ಟು ಕೈಗಾರಿಕಾ ಪ್ರದೇಶಗಳು ಅಲ್ಲಿ ತಲೆ ಎತ್ತಿದ್ದು, ಜೊತೆಗೆ ಶಿಕ್ಷಣ ಸಂಸ್ಥೆಗಳು ಇರುವ ಕಾರಣಕ್ಕೆ ಅಗಲಗುರ್ಕಿ ಸಮೀಪ ರೈಲ್ವೆ ಅಂಡರ್‌ ಪಾಸ್‌ ಅವಶ್ಯಕತೆಯನ್ನು ಮನಗಂಡ ರೈಲ್ವೆ ಅಧಿಕಾರಿಗಳು ಕಾಮಗಾರಿ ಕೈಗೆತ್ತಿಕೊಂಡಿದ್ದರು. ಆದರೆ, ಅವೈಜ್ಞಾನಿಕವಾಗಿ ಕೂಡಿದ್ದ ಅಂಡರ್‌ಪಾಸ್‌ ಕಾಮಗಾರಿಯನ್ನು ವೀಕ್ಷಿಸಿದ್ದ ಜಿಲ್ಲೆಯ ಸಂಸದರು ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿ ಕಾಮಗಾರಿ ಅವೈಜ್ಞಾ ನಿಕವಾಗಿ ನಡೆದಿರುವುದ್ದಕ್ಕೆ ಬೇಸರ ವ್ಯಕ್ತಪಡಿಸಿ ಬದಲಿ ಕಾಮಗಾರಿಗೆ ಸೂಚಿಸಿದ್ದರು. ಆದರೆ, ಕಾಮಗಾರಿ ಯನ್ನು ಅತ್ತ ಪೂರ್ಣಗೊಳಿಸದೇ ಇತ್ತ ಬದಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳದೇ ರೈಲ್ವೆ ಇಲಾಖೆ ಅಧಿ ಕಾರಿಗಳು ಎರಡು-ಮೂರು ವರ್ಷದಿಂದ ಕೈ ಕಟ್ಟಿ ಕೂತಿರುವುದು ಈಗ ಅಗಲಗುರ್ಕಿ ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ಅರ್ಧಕ್ಕೆ ಮುಗಿದಿದ್ದು, ಸುತ್ತಮುತ್ತ ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾತ್ರಿಯಾದರೆ ಅಕ್ರಮ ಚಟುವಟಿಕೆ: ಅಗಲಗುರ್ಕಿ ಸಮೀಪ ಅವೈಜ್ಞಾನಿಕವಾಗಿ ನಿರ್ಮಿಸಿರುವ ಅಂಡರ್‌ ಪಾಸ್‌ ಸದ್ಯ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ರಾತ್ರಿಯಾದರೆ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಬಳಕೆ ಆಗುತ್ತಿದೆಯೆಂಬ ಆರೋಪ ಸುತ್ತಮುತ್ತಲಿನ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಓಡಾಟ ಸೇರಿದಂತೆ ಸಾರ್ವಜನಿಕರ ವಾಹನ ದಟ್ಟಣೆ ಇರುವ ಕಾರಣಕ್ಕೆ ಈ ರಸ್ತೆಯಲ್ಲಿ ರೈಲ್ವೆ ಅಂಡರ್‌ಪಾಸ್‌ ನಿರ್ಮಾಣದ ಅಗತ್ಯತೆಯನ್ನು ಕಂಡು ಕಾಮಗಾರಿ ನಡೆಸಿದರೂ ಅವೈಜ್ಞಾನಿಕವಾಗಿ ಕೂಡಿರುವುದರಿಂದ ಅಂಡರ್‌ಪಾಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ರೈಲ್ವೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಸಂಬಂಧಪಟ್ಟ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿ ಗಳು ಇತ್ತಕಡೆ ಗಮನ ಹರಿಸಿ ವೈಜ್ಞಾನಿಕವಾಗಿ ವಾಹನ ಸವಾರರಿಗೆ ಅನುಕೂಲವಾಗುವಂತೆ ರೈಲ್ವೆ ಅಂಡರ್‌ ಪಾಸ್‌ ನಿರ್ಮಿಸಲಿ ಎನ್ನುವ ಒಕ್ಕೊರಲಿನ ಆಗ್ರಹ ಕೇಳಿ ಬರುತ್ತಿದೆ.

ಸಂಸದ ಬಚ್ಚೇಗೌಡಆದೇಶಕ್ಕೂ ಕಿಮ್ಮತ್ತಿಲ್ಲ! : ಅಗಲಗುರ್ಕಿ ರೈಲ್ವೆ ಕ್ರಾಸಿಂಗ್‌ ಬಳಿ ಅವೈಜ್ಞಾನಿಕವಾಗಿ ನಡೆಸಿರುವ ರೈಲ್ವೆ ಅಂಡರ್‌ಪಾಸ್‌ ಕಾಮಗಾರಿಯನ್ನು ಒಮ್ಮೆ ಖುದ್ದು ಪರಿಶೀಲಿಸಿದ್ದ ಕ್ಷೇತ್ರದ ಸಂಸದ ಬಿ.ಎನ್‌. ಬಚ್ಚೇಗೌಡ ಸಹ ಕಾಮಗಾರಿಗೆ ತಡೆಯೊಡ್ಡಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು. ಆದರೆ, ಸಂಸದರ ಮಾತಿಗೂ ಇಲ್ಲಿವರೆಗೂ ಕಿಮ್ಮತ್ತು ಸಿಕ್ಕಿಲ್ಲ. ರೈಲ್ವೆ ಇಲಾಖೆ ಅಧಿಕಾರಿಗಳು ಮಾತ್ರ ಬದಲಿ ಕಾಮಗಾರಿ ಇನ್ನೂ ಕೈಗೆತ್ತಿಕೊಂಡಿಲ್ಲ. ಹೀಗಾಗಿ ಅಗಲಗುರ್ಕಿ ಮೂಲಕ ವಿವಿಧ ಗ್ರಾಮಗಳಿಗೆ ತೆರಳುವ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ರೈಲ್ವೆ ಕ್ರಾಸಿಂಗ್‌ ದಾಟಿ ಹೋಗಬೇಕಿದೆ.

Advertisement

ಅಂಡರ್‌ಪಾಸ್‌ ಸುತ್ತಲೂ ಕೈಗಾರಿಕಾ ತ್ಯಾಜ್ಯ!: ಸದ್ಯ ಕಾಮಗಾರಿ ನಡೆಯದೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಗಲಗುರ್ಕಿ ರೈಲ್ವೆ ಅಂಡರ್‌ಪಾಸ್‌ ಸುತ್ತಮುತ್ತಲೂ ಕೈಗಾರಿಕಾ ತ್ಯಾಜ್ಯ ಸೇರಿಕೊಂಡು ಇಡೀ ಅಂಡರ್‌ಪಾಸ್‌ ಅನೈರ್ಮಲ್ಯಕ್ಕೆ ತುತ್ತಾಗಿದೆ. ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಿರುವ ಅಂಡರ್‌ಪಾಸ್‌ ಜನರ ಬಳಕೆಗೆ ಬಾರದೇ ಅನುಪಯುಕ್ತವಾಗಿದೆ. ಮುಂದೊಂದು ದಿನ ಅಂಡರ್‌ಪಾಸ್‌ ಒಳಗೂ ಕೈಗಾರಿಕಾ ತ್ಯಾಜ್ಯ ಬಿಸಾಡಿದರೂ ಯಾರು ಕೇಳ್ಳೋರಿಲ್ಲದ ದುಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕರು ಇತ್ತ ಕಡೆ ಗಮನಹರಿಸಿ ಅಂಡರ್‌ಪಾಸ್‌ನ್ನು ವೈಜ್ಞಾನಿಕವಾಗಿ ನಿರ್ಮಿಸಲು ಕ್ರಮ ವಹಿಸಬೇಕೆಂಬ ಆಗ್ರಹ ಆ ಭಾಗದ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಅಗಲಗುರ್ಕಿ ಗ್ರಾಪಂ ಕೇಂದ್ರವಾಗಿದ್ದು, ಗ್ರಾಮದ ಮೂಲಕ ಹತ್ತಾರು ಗ್ರಾಮಗಳಿಗೆ ವಾಹನ ಸಂಚಾರ ಇದೆ. ಗ್ರಾಮದ ಬಳಿಕ ರೈಲ್ವೆ ಕ್ರಾಸಿಂಗ್‌ ಇರುವುದರಿಂದ ಅಂಡರ್‌ಪಾಸ್‌ ಅಗತ್ಯ ವಾಗಿತ್ತು. ಆದರೆ ಅಂಡರ್‌ಪಾಸ್‌ ರೈಲ್ವೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ಸಂಸದರೇ ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕವಾಗಿ ಅಂಡರ್‌ಪಾಸ್‌ ನಿರ್ಮಿಸು ವಂತೆ ಸೂಚಿಸಿದರೂ ಇದುವರೆಗೂ ಕಾಮಗಾರಿ ಆರಂಭಗೊಂಡಿಲ್ಲ. – ಅಗಲಗುರ್ಕಿ ನೊಂದ ಗ್ರಾಮಸ್ಥರು.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next