ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಬಹುಕೋಟಿ ಸೋಲಾರ್ ವಿದ್ಯುತ್ ಪ್ಯಾನಲ್ ಹಗರಣದಲ್ಲಿ ಆರೋಪ ಪಟ್ಟಿ ದಾಖಲಿಸಲು ಕೇರಳ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅವರನ್ನು ರಾಜ್ಯ ಉಸ್ತುವಾರಿಯಾಗಿ ಮುಂದುವರಿಸುವ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ವಕ್ತಾರ ಹಾಗೂ ಶಾಸಕ ಎಸ್.ಸುರೇಶ್‌ಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೋಲಾರ್ ವಿದ್ಯುತ್ ಪ್ಯಾನಲ್ ಹಗರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಗರಣದಲ್ಲಿ ವೇಣುಗೋಪಾಲ್ ಅವರ ಪಾತ್ರ ಇರುವುದನ್ನು ಖಚಿತಪಡಿಸಿರುವ ಕಾರಣ ಅಲ್ಲಿನ ಸರ್ಕಾರ ಅವರ ವಿರುದ್ಧ ಆರೋಪಪಟ್ಟಿ ದಾಖಲಿಸಲು ನಿರ್ಧರಿಸಿದೆ. ಹೀಗಿರುವಾಗ ವೇಣುಗೋಪಾಲ್ ಅವರನ್ನು ರಾಜ್ಯ ಉಸ್ತುವಾರಿಯಾಗಿ ಮುಂದುವರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಮ್ಮ ನಿಲುವು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಭಾರೀ ಹಗರಣದಲ್ಲಿ ಸಿಲುಕಿರುವವರೇ ಕರ್ನಾಟಕದಲ್ಲಿ ಕಾಂಗ್ರೆಸ್ ವಿದ್ಯಮಾನಗಳ ಮೇಲ್ವಿಚಾರಣೆ ನಡೆಸುತ್ತಿರುವುದು ಅಚ್ಚರಿಯ ಸಂಗತಿ ಎಂದು ಹೇಳಿರುವ ಅವರು, ಈ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಿಜೆಪಿ ನಾಯಕರ ವಿರುದ್ಧ ದೂರು ದಾಖಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿರುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಜನರನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳು ಉಡಾಫೆ ಉತ್ತರ ನೀಡುತ್ತಾರೆ. ಆದರೆ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೂ ಇದೇ ರೀತಿ ಉಡಾಫೆಯಿಂದ ಪ್ರತಿಕ್ರಿಯೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಆರೋಪದ ಬಗ್ಗೆ ಮೌನಮುರಿಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನೈತಿಕತೆಗೆ ಬೆಲೆ ನೀಡಿ ವೇಣುಗೋಪಾಲ್ ಅವರು ಈಗ ಹೊಂದಿರುವ ಜವಾಬ್ದಾರಿಯಿಂದ ಮುಕ್ತಗೊಳಿಸುವುದೇ ಅಥವಾ ಅವರನ್ನೇ ಅನಿವಾರ್ಯವಾಗಿ ಮುಂದುವರಿಸುತ್ತದೆಯೇ ಎನ್ನುವುದನ್ನು ರಾಜ್ಯದ ಜನರು ಕುತೂಹಲದಿಂದ ನೋಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.