Advertisement

‘ಮತ್ತೆ ಕಲ್ಯಾಣ’..ಕ್ಕಿದೆ ನಮ್ಮೆಲ್ಲ ಚಿಕ್ಕಪುಟ್ಟ ಸಮಾಜಗಳ ಬೆಂಬಲ

10:12 AM Aug 20, 2019 | Team Udayavani |

ದಾವಣಗೆರೆ: ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ… ಕಾರ್ಯಕ್ರಮಕ್ಕೆ ಶೋಷಿತ ಹಿಂದುಳಿದ ಚಿಕ್ಕಪುಟ್ಟ ಸಮುದಾಯಗಳ ಒಕ್ಕೂಟ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಾಡದ ಆನಂದರಾಜ್‌ ತಿಳಿಸಿದ್ದಾರೆ.

Advertisement

12ನೇ ಶತಮಾನದಲ್ಲೇ ಶೋಷಿತ ಹಿಂದುಳಿದ ಚಿಕ್ಕಪುಟ್ಟ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿದಂತಹ ಮಹಾನ್‌ ದಾರ್ಶನಿಕ ಬಸವಣ್ಣನವರ ಆಡಳಿತ ಮತ್ತೆ ಮರುಕಳಿಸುವ ಸದಾಶಯದೊಂದಿಗೆ ಪಂಡಿತಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಆ. 22 ರಂದು ದಾವಣಗೆರೆಯ ಎಸ್‌.ಎಸ್‌.ಎಸ್‌. ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಒಕ್ಕೂಟದಲ್ಲಿನ ಎಲ್ಲಾ ಸಮುದಾಯದವರು, ಮುಖಂಡರು ಭಾಗವಹಿಸುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ಮಡಿವಾಳ, ಸವಿತಾ, ಕೊರಚ ಒಳಗೊಂಡಂತೆ ಅನೇಕ ಸಣ್ಣ ಪುಟ್ಟ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ್ದರು. ಇಂದಿಗೂ ಅನೇಕ ಸಮಾಜಗಳು ಅನೇಕ ಕಾರಣದಿಂದ ಸಮಾಜದ ಮುಖ್ಯವಾಹಿನಿಗೆ ಬಂದಿಲ್ಲ. ಅಂತಹ ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಜೊತೆಗೆ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಆ.1 ರಿಂದ ಮತ್ತೆ ಕಲ್ಯಾಣ… ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

ಶೋಷಿತ ಹಿಂದುಳಿದ ಚಿಕ್ಕಪುಟ್ಟ ಸಮುದಾಯಗಳು ಮೌಡ್ಯ, ಕಂದಾಚಾರದಿಂದ ಹೊರ ಬಂದು ಮುಖ್ಯವಾಹಿನಿಯಲ್ಲಿ ಎಲ್ಲಾ ಸಮಾಜಗಳಂತೆ ಬಾಳಲು ಬಸವಣ್ಣನವರ ಸಮಾನತೆ, ತತ್ವಾದರ್ಶ, ವಿಚಾರಗಳು ಅತ್ಯಗತ್ಯ. ಬಸವಣ್ಣನವರ ಆಡಳಿತ ಮರುಕಳಿಸಲಿ ಎಂಬುದೇ ನಮ್ಮ ಎಲ್ಲರ ಆಶಯ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿಜವಾಗಿಯೂ ಬಸವಣ್ಣನವರ ತತ್ವಾದರ್ಶ ಪಾಲಿಸುವರೇ ಆಗಿದ್ದರೆ ಸಂಪುಟದಲ್ಲಿ ಹಿಂದುಳಿದವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ಎನ್‌. ರಂಗಸ್ವಾಮಿ ಮಾತನಾಡಿ, ಬೆಳಗಾಗುತ್ತಿದ್ದಂತೆ ಸವಿತಾ ಸಮಾಜದವರ ನೋಡಿದರೆ ಕೆಟ್ಟದಾಗುತ್ತದೆ ಎಂಬ ಭಾವನೆ ದೂರ ಮಾಡುವ ಉದ್ದೇಶದಿಂದಲೇ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದರು. 99 ಹಿಂದುಳಿದ ಜಾತಿಯವರನ್ನು ಒಗ್ಗೂಡಿಸಿ, ಸಾಮಾಜಿಕ ನ್ಯಾಯ ಒದಗಿಸಿದವರು ಬಸವಣ್ಣನವರು. ಅದು ಈ ಕ್ಷಣಕ್ಕೂ ಒದಗಿ ಬಂದಿಲ್ಲವಾದರೂ ಮತ್ತೆ ಸಾಮಾಜಿಕ ನ್ಯಾಯ, ಬಸವಣ್ಣನವರ ಆಡಳಿತ ಮರುಕಳಿಸುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣದ… ಯಶಸ್ಸಿಗೆ ಎಲ್ಲರೂ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ನಾಗೇಂದ್ರಪ್ಪ ಮಾತನಾಡಿ, ಮತ್ತೆ ಕಲ್ಯಾಣದಂತಹ ಕಾರ್ಯಕ್ರಮದ ಮೂಲಕ ಬದಲಾವಣೆ ಕಾಣುವಂತಾಗುತ್ತದೆ. ಮೌಡ್ಯ, ಕಂದಾಚಾರ ದೂರವಾಗುತ್ತದೆ ಎಂಬ ಆಶಯ ನಮ್ಮದಾಗಿದೆ ಎಂದರು.

ಲಂಬಾಣಿ ಸೇವಾ ಸಮಾಜದ ಸಿ. ಚಂದ್ರನಾಯ್ಕ, ನೇಕಾರ ಸಮಾಜ ಜಿಲ್ಲಾ ಅಧ್ಯಕ್ಷ ಡಿ. ಬಸವರಾಜ್‌ ಗುಬ್ಬಿ, ಕೆ.ಆರ್‌. ಗಂಗರಾಜ್‌, ಪ್ರವೀಣ್‌ಕುಮಾರ್‌, ಸಿದ್ದರಾಮಣ್ಣ, ಹಾಲೇಶ್‌, ಎಚ್. ಜಯಣ್ಣ, ಡಿ.ಬಿ. ಆಂಜನೇಯ, ಆರ್‌.ಬಿ. ರಾಮಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next