Advertisement

ಭವಿಷ್ಯಕ್ಕಾಗಿ “ಮತ್ತೆ ಕಲ್ಯಾಣ ಅನಿವಾರ್ಯ’

09:02 PM Aug 11, 2019 | Lakshmi GovindaRaj |

ನೆಲಮಂಗಲ: ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಅವರು ಖಾಲಿ ಚೀಲವಿದ್ದಂತೆ, ಚೀಲಕ್ಕೆ ಮೌಲ್ಯಯುತ ನೈತಿಕತೆ ಮತ್ತು ಅರಿವು ತುಂಬುವ ಕೆಲಸ ಪೋಷಕರು ಮತ್ತು ಶಿಕ್ಷಕರಿಂದಾಗಬೇಕು. ಪ್ರತಿ ಮಗುವಿನಲ್ಲಿರುವ ಸಾಮಾಜಿಕ ಪ್ರಜ್ಞೆ ಮತ್ತು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಸಿರಿಗೆರೆ ಬೃಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಪಟ್ಟಣದ ಪವಾಡಬಸವಣ್ಣ ದೇವರಮಠದಲ್ಲಿ ಸಹಮತ ವೇದಿಕೆಯಿಂದ ಆಯೋಜಿಸಲಾಗಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿ ಮಾತನಾಡಿದರು.

Advertisement

ಗಳಿಸುವುದಕ್ಕಿಂತ ಉಳಿಸುವುದ ಕಲಿಸಿ: ಸಮಾಜದ ಜನರು 12ನೇ ಶತಮಾನದಲ್ಲಿ ಸಾಮರಸ್ಯದಿಂದ ಬಾಳಲು ಬಸವಣ್ಣನವರ ಕಲ್ಯಾಣ ಕಾರ್ಯ ರಕ್ಷಣೆಯಾಗಿತ್ತು. ವಿದ್ಯಾರ್ಥಿಗಳು ಭವಿಷ್ಯದ ಶಕ್ತಿಗಳಾಗಲು ಮತ್ತೆ ಕಲ್ಯಾಣ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಲ್ಲಿನ ಸಂಸ್ಕಾರ ಬೆಳೆದರೆ ಮಾತ್ರ ನಾಡಿನ ಭವಿಷ್ಯ ಅತ್ಯುತ್ತಮವಾಗಿರಲು ಸಾಧ್ಯ. ಮನುಷ್ಯನಲ್ಲಿ ಸಂಸ್ಕಾರ ಮೂಡಬೇಕಾದರೆ ಮತ್ತೆ ಕಲ್ಯಾಣದ ಅವಶ್ಯವಿದೆ. ಮಕ್ಕಳಿಗೆ ಕೇವಲ ಶಿಕ್ಷಣ ಕಲಿಸುವುದಕ್ಕಿಂತ ಸಂಸ್ಕಾರ, ಸಂಸ್ಕೃತಿ ಕಲಿಸಿ, ಗಳಿಸುವುದಕ್ಕಿಂತ ಉಳಿಸುವುದನ್ನು ಕಲಿಸಿ. ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ದೊರೆಯುವಂತಾಗಬೇಕು ಎಂದು ಹೇಳಿದರು.

ಶರಣರದ್ದು ಮತಾಂತರವಲ್ಲ: 12ನೇಯ ಶತಮಾನದಲ್ಲಿ ಶರಣರು ಮತಾಂತರವಾಗಲಿಲ್ಲ. ಅನಿಷ್ಠ ಜಾತಿ ಪದ್ಧತಿಯಿಂದ ಹೊರಬಂದು, ತುಳಿತಕ್ಕೆ ಒಳಗಾದವರಿಗೆ ಅರಿವು ಮೂಡಿಸಿದರು. ನರಜನ್ಮ ತೊಡೆದು ಲಿಂಗಧಾರಣೆ ಮಾಡಿ ಹರಜನ್ಮ ಪಡೆದರು. ಲಿಂಗಧಾರಣೆ ಬಲವಂತವಾಗಿರಲಿಲ್ಲ. ಆಗಿದ್ದರೆ ಮಾತ್ರ ಮತಾಂತರ. ಸ್ವಯಂ ಲಿಂಗಧಾರಣೆ ಮಾಡಿಕೊಳ್ಳುವುದು ಮತಾಂತರವಲ್ಲ ಎಂದು ಮಹಿಳೆಯೊಬ್ಬರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಠಗಳು ಒಂದು ಜಾತಿಗೆ ಸಿಮೀತವಾಗದೇ ಬಸವಣ್ಣನವರ ತತ್ವಗಳಿಗನುಗುಣವಾಗಿ ನಡೆದುಕೊಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ನಮ್ಮ ಮಠದ ಅಂಗಳದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಜತೆಗೆ ಮಠಗಳಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶಗಳಿವೆ. ಪ್ರಾಧ್ಯಾನ್ಯತೆ ಇಲ್ಲ ಎಂಬುದು ಸುಳ್ಳು ಎಂದರು.

ವಿದ್ಯಾರ್ಥಿಗಳಿಂದ ಸಂವಾದ: ಮುಕ್ತ ಸಂವಾದದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 12 ನೇ ಶತಮಾನದಿಂದ 21 ನೇ ಶತಮಾನದವರಗೆನ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದರು. ಹೆಚ್ಚಾಗಿ ಲಿಂಗಾಯಿತ ಧರ್ಮದ ಗೊಂದಲದ ವಿಚಾರ ವಿದ್ಯಾರ್ಥಿಗಳಿಂದ ಪ್ರತಿಧ್ವನಿಸಿತು. ಬಸವಣ್ಣನವರ 2 ಮದುವೆ, ಕಲ್ಯಾಣ ಅನಿವಾರ್ಯವೇ?, ಮತ್ತೆ ಕಲ್ಯಾಣದ ಉದ್ದೇಶ, ಲಿಂಗಾಯತ ಜಾತಿಯೋ ಧರ್ಮವೋ? ವಿಷಯಗಳ ಕುರಿತು ಸ್ವಾಮೀಜಿಗಳು ಸ್ಪಷ್ಟನೆ ನೀಡಿದರು. ವಚನ ಗಾಯನ, ಪ್ರಬಂಧ, ವಚನಕಂಠಪಾಠ , ಭಾಷಣ, ಪ್ರಬಂಧ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ 130 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರಸಲಾಯಿತು.

Advertisement

ಸಾಮರಸ್ಯ ನಡಿಗೆ: ಪಟ್ಟಣದ ಪವಾಡ ಶ್ರೀಬಸವಣ್ಣದೇವರ ಮಠದಲ್ಲಿ ಸಿರಿಗೆರೆ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಗಳು ಮತ್ತು ಬಸವಣ್ಣದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸಾಮರಸ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀರಗಾಸೆ, ಪಠಕುಣಿತ, ಡೊಳ್ಳುಕುಣಿತ ಮತ್ತಿತರ ಜನಪದ ಕಲಾತಂಡಗಳು ಸಾಮರಸ್ಯ ನಡಿಗೆಗೆ ಮೆರಗು ತಂದು ಸಾರ್ವಜನಿಕರನ್ನು ಆಕರ್ಷಿಸಿದವು.

ರಾಜ್ಯ ಸಭೆ ಸದಸ್ಯ ಡಾ.ಎಲ್‌.ಹನುಮಂತಯ್ಯ, ಕಲಾವಿದರಾದ ಶ್ರೀನಿವಾಸ್‌ ಕಪ್ಪಣ್ಣ, ಸಹಮತ ವೇದಿಕೆ ಸಂಯೋಜಕ ಅನಂತ ನಾಯಕ, ಕೆನಡಾದ ಪ್ರತಿನಿಧಿ ಜ್ಯೋತಿ, ಕಂಚಗಲ್‌ ಬಂಡೇ ಮಠದ ಬಸವಲಿಂಗ ಸ್ವಾಮೀಜಿ, ಖಾನಿಮಠದ ಶ್ರೀಬಸವರಾಜ ಸ್ವಾಮೀಜಿ, ವಿಜಯಪುರ ಬಸವಕಲ್ಯಾಣ ಮಠದ ಶ್ರೀಮಹದೇವ ಸ್ವಾಮೀಜಿ, ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿ. ಸಿದ್ದರಾಜು, ಪುರಸಭೆ ಸದಸ್ಯ ಪೂರ್ಣಿಮಾ ಸುಗ್ಗರಾಜು, ಸುಧಾ ಕೇಶವಮೂರ್ತಿ, ಪ್ರದೀಪ್‌, ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ತಿಮ್ಮರಾಜು, ಅಧ್ಯಕ್ಷ ರುದ್ರಪ್ಪ, ರೈತಹಿತರಕ್ಷಣಾಸಮಿತಿ ಕಾಯದರ್ಶಿ ಲಕ್ಷ್ಮೀವೆಂಕಟೇಶ್‌,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next