ಸುಕೃತಾ ವಾಗ್ಲೆ ಅಂದಾಕ್ಷಣ ನೆನಪಿಗೆ ಬರೋದೇ “ಜಟ್ಟ’ ಹಾಗೂ “ಕಿರಗೂರಿನ ಗಯ್ನಾಳಿಗಳು’. ಆ ಚಿತ್ರದಲ್ಲಿ ಪಕ್ಕಾ ರಫ್ ಅಂಡ್ ಟಫ್ ಹುಡುಗಿಯಾಗಿ ಕಾಣಿಸಿಕೊಂಡ ಸುಕೃತಾ ಅವರನ್ನು ಈಗಲೂ ಜನರ ಗುರುತಿಸೋದು “ಗಯ್ನಾಳಿ’ ಅಂತಾನೆ. ಸುಕೃತಾಗೆ ಹೀಗೆ ಕರೆದರೆ ಯಾವುದೇ ಬೇಸರವಿಲ್ಲ. ಯಾಕೆಂದರೆ, ಜನರು ಗುರುತಿಸಿರೋದೇ ಹಾಗೆ. ಅಷ್ಟಕ್ಕೂ ಈಗ ಸುಕೃತಾ ವಾಗ್ಲೆ ಕುರಿತು ಯಾಕೆ ಇಷ್ಟೊಂದು ಪೀಠಿಕೆ ಅಂತೀರಾ.
ವಿಷಯವಿದೆ. ಅವರೀಗ “ಮೇಘ ಅಲಿಯಾಸ್ ಮ್ಯಾಗಿ’ ಎಂಬ ಹೊಸ ಚಿತ್ರ ಮಾಡಿದ್ದಾರೆ. ಅದೀಗ ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದಲ್ಲೂ ಸುಕೃತಾ ವಾಗ್ಲೆ ಅವರಿಗೆ ಮತ್ತದೇ ರೀತಿಯ ಪಾತ್ರ ಸಿಕ್ಕಿದೆ. ಹೌದು, ಸುಕೃತಾ ವಾಗ್ಲೆ ಅವರಿಗೆ ಅದೇನೋ ಗೊತ್ತಿಲ್ಲ. “ಜಟ್ಟ’ ಸಿನಿಮಾ ಬಳಿಕ ಸಿಕ್ಕಂತಹ ಪಾತ್ರಗಳೆಲ್ಲವೂ ಹಾಗೆಯೇ ಇವೆಯಂತೆ. ಆದರೆ, ಸುಕೃತಾ ಮಾತ್ರ, ಒಂದಷ್ಟೂ ಬೇಸರಿಸಿಕೊಳ್ಳದೆ, ತಮ್ಮ ಪಾಲಿಗೆ ಬಂದ ಪಾತ್ರವನ್ನು ಕಣ್ಣಿಗೊತ್ತಿಕೊಂಡು ನಿರ್ವಹಿಸುತ್ತಿದ್ದಾರೆ.
ಈಗ “ಮೇಘ ಅಲಿಯಾಸ್ ಮ್ಯಾಗಿ’ ಚಿತ್ರದಲ್ಲೂ ಸುಕೃತಾ ವಾಗ್ಲೆ ಅವರಿಗೊಂದು ಹೊಸತನದ ಪಾತ್ರ ಸಿಕ್ಕಿದೆಯಂತೆ. ಅದೊಂದು ರೀತಿಯ ಗಂಡುಬೀರಿ ಪಾತ್ರವಂತೆ. ಈ ಚಿತ್ರ ನೋಡಿ ಹೊರ ಬಂದವರು ಅವರನ್ನು “ಗಯ್ನಾಳಿ’ ಸುಕೃತಾ ಅನ್ನುವ ಬದಲು “ಟಾಮ್‌ಬಾಯ್’ ಸುಕೃತಾ ಅಂತ ಕರೆದರೆ ಅಚ್ಚರಿ ಇಲ್ಲವಂತೆ. ಅಂದಹಾಗೆ, ಸುಕೃತಾ ವಾಗ್ಲೆ ಇಲ್ಲಿ ನಾಯಕಿಯೋ, ನಾಯಕನೋ ಎಂಬಷ್ಟರ ಮಟ್ಟಿಗೆ ಕಾಣಿಸಿಕೊಂಡಿದ್ದಾರಂತೆ.
ಅವರಿಲ್ಲಿ ಹೇರ್‌ಕಟ್ ಮಾಡಿಸಿಕೊಂಡು, ಲೋಕಲ್ ಡೈಲಾಗ್ ಹೇಳಿಕೊಂಡು, ಹುಡುಗನಂತೆಯೇ ಬಾಡಿಲಾಂಗ್ವೇಜ್ ವಿಭಿನ್ನವಾಗಿಸಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರಂತೆ. ಇನ್ನೊಂದು ವಿಶೇಷವೆಂದರೆ, ಅವರಿಗೆ ಇದೇ ಮೊದಲ ಸಲ ಈ ಚಿತ್ರದಲ್ಲಿ ಸೋಲೋ ಹಾಡೊಂದರಲ್ಲಿ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆಯಂತೆ. ಅದು ಅವರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಟಾಮ್‌ಬಾಯ್ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡು, ಪಕ್ಕಾ ಗಂಡುಬೀರಿಯಂತೆ ವರ್ತಿಸುವ ಪಾತ್ರ ಅವರಿಗೊಂದು ಹೊಸ ಇಮೇಜ್ ತಂದುಕೊಡುತ್ತೆ ಎಂಬ ವಿಶ್ವಾಸ ಅವರಿಗಿದೆ.
ಯಾಕೆಂದರೆ, ಅದೊಂದು ಪಕ್ಕಾ ಮಾಡ್ರನ್ ಗಂಡುಬೀರಿಯಂತಿರುವ ಪಾತ್ರವಂತೆ. “
ಅಕ್ಕ ಮಾಲಾಶ್ರೀ, ಅಮ್ಮ ಮಂಜುಳನ್ನ ನೆನಸ್ಕೊಂಡು ಕೊಡ್ತಾ ಇದ್ರೆ, ಕೇಳ್ತಾ ಇರೋದ್ ವಾಪಸ್ ಬರ್ತಾ ಇರ್ಬೇಕು …’ ಎಂಬಂತಹ ಪಂಚಿಂಗ್ ಡೈಲಾಗ್‌ಗಳೇ “ಮೇಘ ಅಲಿಯಾಸ್ ಮ್ಯಾಗಿ’ಯಲ್ಲಿ ಆವರಿಸಿಕೊಂಡಿವೆಯಂತೆ. ಅದೇನೆ ಇರಲಿ, ಇಲ್ಲಿ ಮೇಘ ಹೇಗಿರ್ತಾಳೆ, ಮ್ಯಾಗಿ ಹೇಗೆ ಕಾಣ್ತಾಳೆ ಅನ್ನೋದಕ್ಕೆ ಸಿನಿಮಾ ನೋಡಬೇಕು ಎನ್ನುವ ಸುಕೃತಾ ವಾಗ್ಲೆ ಪ್ರಕಾರ, ಹೆಣ್ಣುಮಕ್ಕಳು “ಮ್ಯಾಗಿ’ ಥರಾನೇ ಇದ್ದರೆ ಚೆನ್ನ’ ಎಂದು ಹೇಳಿ ಸುಮ್ಮನಾಗುತ್ತಾರೆ.