ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಮುಂದುವರಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪುನಃ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಐಐಎಂನ ಹೆಸರಿನಲ್ಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿದ್ದ ಶಾದಬ್ ಅಹಮ್ಮದ್ (28), ಇಸ್ರಾರ್ ಅಹಮ್ಮದ್(32), ಪುಸೈಲ್ ಅಹಮ್ಮದ್ (30), ಮಹಮ್ಮದ್ ಇದ್ರೀಸ್ (30), ಉಸ್ಮಾನ್ ಅಬರೇಜ್ (33) ಬಂಧಿತರು. ಆರೋಪಿ ಮನ್ಸೂರ್ ಖಾನ್ ಐಐಎಂ ಹೆಸರಿನಲ್ಲಿ ಒಟ್ಟು ಹದಿನೆಂಟು ಕಂಪನಿಗಳನ್ನು ನಡೆಸುತ್ತಿದ್ದ ಸಂಗತಿ ಇದುವರೆಗಿನ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಈ ಪೈಕಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯೂ ಇದರಲ್ಲಿಯೂ ವಂಚನೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಸೊಸೈಟಿಯ ನಿರ್ದೇಶಕರಾಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದು ಅಧಿಕಾರಿಯೊಬ್ಬರು ತಿಳಿಸಿದರು. ವಿಚಾರಣೆ ಮುಂದುವರಿಸಲಾಗಿದೆ ಎಂದು ಎಸ್‌ಐಟಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಐಎಎಂ ಹೊಂದಿದ್ದ ಹದಿನೆಂಟು ಕಂಪನಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಲಾಗುತ್ತದೆ. ಜತೆಗೆ, ಐಐಎಂ ಉದ್ಯೋಗಿಗಳು ಅವ್ಯವಹಾರದಲ್ಲಿ ಶಾಮೀಲಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.
4ನೇ ಹೆಂಡತಿ ಮನೆಯಲ್ಲಿ ಶೋಧ!: ಐಐಎಂ ಮಾಲೀಕ ಮನ್ಸೂರ್ ಖಾನ್ ನಾಲ್ಕನೇ ಪತ್ನಿ ನಿವಾಸದಲ್ಲಿ ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಶಿವಾಜಿನಗರದ ಕೋಲ್ಸ್ ಪಾರ್ಕ್ ರಸ್ತೆಯಲ್ಲಿರುವ ಮನ್ಸೂರ್ ನಾಲ್ಕನೇ ಪತ್ನಿ, ಆಕೆಯ ಸಹೋದರ ಹಾಗೂ ಸಂಬಂಧಿಕರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು ಕೆಲವು ದಾಖಲೆಗಳು ಲಭ್ಯವಾಗಿವೆ. ಪ್ರಕರಣದಲ್ಲಿ ಅವರ ಪಾತ್ರವಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.