ಮಂಗಳೂರು: ಪಡಿತರ ಚೀಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದ್ದು, ಆಗಸ್ಟ್ 23ರಂದು ಒಂದು ದಿನ ಮಾತ್ರ ಅವಕಾಶ ನೀಡಲಾಗಿದೆ.
ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ದಿನಾಂಕ ಆಗಸ್ಟ್ 23ರಂದು ಮಾತ್ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ಅವಕಾಶ ಕಲ್ಪಿಸಲಾಗಿದೆ.
ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಆ. 18ರಿಂದ 21ರ ತನಕ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆ ತನಕ ಅವಕಾಶ ಕಲ್ಪಿಸಲಾಗಿತ್ತು. ಆ. 18, 19ರಂದು ತುರ್ತು ಚಿಕಿತ್ಸೆಗಾಗಿ ಬಿಪಿಎಲ್ ಕಾರ್ಡ್‌ನಲ್ಲಿ ಹೆಸರು ಸೇರಿಸಿದ ಅರ್ಜಿಗಳ ವಿಲೇವಾರಿ, ಉಳಿದಂತೆ ಬಿಪಿಎಲ್ ಕಾರ್ಡ್‌ನಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವುದು, ರೇಷನ್ ಅಂಗಡಿ ಬದಲಾವಣೆ ಮೊದಲಾದ ಅವಕಾಶ ನೀಡಲಾಗಿತ್ತು.
ಆದರೆ ಸರ್ವರ್ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಪಡಿತರ ಚೀಟಿ ತಿದ್ದುಪಡಿಗೆ ಸಮಸ್ಯೆಯಾಗಿದೆ. ಈ ವಿಚಾರವನ್ನು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳೂ ಈಗಾಗಲೇ ರಾಜ್ಯದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಬುಧವಾರ ಮತ್ತೆ ಒಂದು ದಿನದ ಅವಕಾಶ ಕೊಡಲಾಗಿದೆ.
ನಾಲ್ಕೂವರೆ ತಿಂಗಳು ಸ್ಥಗಿತ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಹೊಸದಾಗಿ ಎಪಿಎಲ್, ಬಿಪಿಎಲ್ ಕಾರ್ಡ್ ಮಾಡಿಸುವುದು, ಹೆಸರು ತಿದ್ದುಪಡಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಹೊಸ ಸರಕಾರ ಅಧಿಕಾರಕ್ಕೆ ಬಂದರೂ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯಗಳ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತವನ್ನು ಸುಮಾರು ನಾಲ್ಕೂವರೆ ತಿಂಗಳ ಕಾಲ ಮುಂದುವರಿಸಲಾಗಿತ್ತು.