ಚಿಂತಾಮಣಿ: ಅವಳಿ ಜಿಲ್ಲೆಯಲ್ಲಿ ಜಿದ್ದಾಜಿದ್ದಿ ರಾಜ ಕಾರಣಕ್ಕೆ ಪ್ರಸಿದ್ಧಿ ಪಡೆದ ಚಿಂತಾಮಣಿ ವಿಧಾನಸಭೆ ಕ್ಷೇತ್ರ ರಾಜಕಾರಣದಲ್ಲಿ ಬದಲಾವಣೆ ಕೂಗು ಕೇಳಿಬರುತ್ತಿದೆ. ಮಾಜಿ ಶಾಸಕ ಎಂ.ಸಿ.ಸುಧಾಕರ್ ಮರಳಿ ಕಾಂಗ್ರೆಸ್ ಕಡೆ ಮುಖಮಾಡುತ್ತಿದ್ದು, ತಾಲೂಕಿನ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಾಲೂಕಿನಲ್ಲಿ ತಾಪಂ, ಜಿಪಂ ಚುನಾವಣೆ ಕಾವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ರಾಜಕೀಯ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಬದಲಾವಣೆಗಳುಕ್ಷೇತ್ರದ ಜನರ ಕುತೂಹಲ ಕೆರಳಿಸಿದೆ. ಅದರಲ್ಲಿಯೂ ಮಾಜಿ ಶಾಸಕ ಎಂ.ಸಿ.ಸುಧಾಕರ್ ಚಿಕ್ಕಬಳ್ಳಾಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಗೌರಿಬಿದನೂರು ಶಾಸಕ ಶಿವಶಂಕರ್‌ರೆಡ್ಡಿ, ಉಮಾಶ್ರೀ ಅವರ ತಂಡದೊಂದಿಗೆ ಡಿ.ಕೆ.ಶಿವಕುಮಾರ್‌ಅವರನ್ನುಭೇಟಿಮಾಡಿರುವುದು ಸುಧಾಕರ್ ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಾರೆಂಬ ಕೂಗಿಗೆ ಪುಷ್ಟಿ ನೀಡಿದಂತಾಗಿದೆ.
ಚಿಂತಾಮಣಿಯ ಎಂ.ಸಿ.ಆಂಜನೇಯರೆಡ್ಡಿ ಕುಟುಂಬವು 1951ರಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಶಾಸಕರಾಗಿ ಆಯ್ಕೆ ಆಗಿದ್ದು ವಿಶೇಷ. ಇನ್ನು ಆಂಜನೇಯರೆಡ್ಡಿ ಕುಟುಂಬದವರು ಕಾಂಗ್ರೆಸ್ ಪಕ್ಷ ಬಿಟ್ಟು ಸ್ಪರ್ಧೆ ಮಾಡಿದ್ದ ವೇಳೆ ಸೋಲು ಕಂಡಿದ್ದೇ ಹೆಚ್ಚು. ಕಾಂಗ್ರೆಸ್ ಪಕ್ಷದಿಂದ 2004, 2008ರ ಚುನಾವಣೆಯಲ್ಲಿ ಶಾಸಕರಾಗಿದ್ದ ಎಂ.ಸಿ.ಸುಧಾಕರ್, 2013 ಮತ್ತು 2018ರಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಸೋಲನ್ನು ಕಂಡಿದ್ದರು. ಆದ್ದರಿಂದ ಅವರು ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ ಎಂಬ ಅಂತೆ ಕಂತೆಗಳಿಗೆ ಇತ್ತೀಚಿನ ಬೆಳೆವಣಿಗೆಗಳು ಪುಷ್ಟಿಕರಿಸುತ್ತವೆ.
ಡಿಕೆಶಿ, ಸಿದ್ದುಭೇಟಿ: ಕಳೆದ15 ದಿನಗಳ ಹಿಂದೆಯೂ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದ ಸುಧಾಕರ್, ಭಾನುವಾರ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಫೋಟೋಗಳನ್ನು ಕೆಪಿಸಿಸಿ ಅಧ್ಯಕ್ಷರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ಸುಧಾಕರ್ ಅವರು ಕಾಂಗ್ರೆಸ್ ಪಕ್ಷ ಸೇರುವುದು ಖಚಿತವಾಗಿದೆ ಎಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಎಂ.ಸಿ.ಸುಧಾಕರ್ ಭೇಟಿ ಮಾಡಿದ್ದ ಫೋಟೋಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದನ್ನು ಕಂಡ ಎಂಸಿಎಸ್ ಬೆಂಬಲಿಗರು ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿ, ಸಂತಸ ವ್ಯಕ್ತಪಡಿಸಿದ್ದಾರೆ.
ಮುಸುಕಿನ ಗುದ್ದಾಟ ಶಮನವಾಯಿತೇ?: ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಮತ್ತು ಎಂ.ಸಿ.ಸುಧಾಕರ್ ನಡುವಿನ ರಾಜಕೀಯ ಗುದ್ದಾಟ ಹಾವು ಮುಂಗುಸಿಯಂತೆ ಇನ್ನು ಹಲವು ವರ್ಷಗಳಿಂದ ನಡೆಯುತ್ತಿದ್ದು, ಎಂ.ಸಿ.ಸುಧಾಕರ್ ಕಾಂಗ್ರೆಸ್ ಪಕ್ಷ ಸೇರಲು ನಡೆಯುತ್ತಿರುವ ಬೆಳವಣಿಗೆಗಳು ಕಂಡರೆ ಬಹುಶಃ ಇಬ್ಬರ ನಡುವಿನ ಮುನಿಸು ಶಮನವಾಗಿದಿಯೇ ಅಥವಾ ಇಲ್ಲವೆ ಎಂಬುವುದು ಕ್ಷೇತ್ರದ ಜನರಲ್ಲಿಕುತೂಹಲ ಮೂಡಿಸಿದೆ.