Advertisement

Assembly Session ಇಂದಿನಿಂದ ಮತ್ತೆ ಕಲಾಪ: ಹಗರಣಗಳದ್ದೇ ಪ್ರಲಾಪ?

12:41 AM Jul 22, 2024 | Team Udayavani |

ಬೆಂಗಳೂರು: ವಾರದ ಹಿಂದೆ ಆರಂಭವಾದ ರಾಜ್ಯ ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಮತ್ತೆ ಮಂದುವರಿಯಲಿದ್ದು, ಆಡಳಿತ- ವಿಪಕ್ಷ ಗಳು ಪರಸ್ಪರ ಹಗರಣಗಳ ವಿಚಾರ ಮುಂದಿಟ್ಟುಕೊಂಡು ಕೆಸರೆರಚಾಟ ನಡೆಸುವ ಸಾಧ್ಯತೆಗಳೇ ಹೆಚ್ಚಾಗಿವೆ. ಮುಡಾ ವಿಚಾರ ಮುಂದಿಟ್ಟುಕೊಂಡು ಅಹೋರಾತ್ರಿ ಧರಣಿಗೂ ವಿಪಕ್ಷಗಳು ಯೋಜಿಸಿವೆ. ಅತಿವೃಷ್ಟಿಯ ನೆಪವೊಡ್ಡಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರೂ ಅಚ್ಚರಿಯಿಲ್ಲ.

Advertisement

ಕಳೆದ ವಾರ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣದ ವಿಚಾರವಾಗಿ ಚರ್ಚೆ ನಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಟ್ಟದ್ದು ಹಾಗೂ ಶಿರೂರು ಹೆದ್ದಾರಿ ಕುರಿತ ಅಂಶ ಬಿಟ್ಟರೆ ಬೇರಾವ ಪ್ರಮುಖ ವಿಚಾರಗಳೂ ಚರ್ಚೆಗೆ ಬಂದಿಲ್ಲ.

ಸಿನಿ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಸಹಿತ 3 ಮಸೂದೆಗಳು ಮಂಡನೆಯಾಗಿದ್ದು, ಇನ್ನೂ ಏಳೆಂಟು
ಮಸೂದೆಗಳನ್ನು ಸರಕಾರ ಸಿದ್ಧಪಡಿಸಿ ಕೊಂಡಿದೆ. ಅಲ್ಲದೆ ಸೋಮವಾರದಿಂದ ನಿತ್ಯ 2-3 ಮಸೂದೆಗಳನ್ನು ಮಂಡನೆ ಮಾಡಿ ಅನುಮೋದನೆಯನ್ನೂ ಪಡೆದು ಕೊಳ್ಳುವ ಸಾಧ್ಯತೆಗಳಿವೆ.

ವಿಪಕ್ಷಗಳ ಕೈಯಲ್ಲಿ ನಾಲ್ಕೈದು ಅಸ್ತ್ರ
ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನು ದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಸರಕಾರದ ವಿರುದ್ಧ ವಿಪಕ್ಷ ಬಿಜೆಪಿ ಮುಗಿಬೀಳಲು ಸಿದ್ಧತೆ ಮಾಡಿಕೊಂಡಿದೆ. ಜತೆಗೆ ಸಮರ್ಪಕ ವಾಗಿ ಅನುಷ್ಠಾನಗೊಳ್ಳದ ಗ್ಯಾರಂಟಿ ಯೋಜನೆಗಳು, ರೈತರ ಆತ್ಮಹತ್ಯೆ ಪ್ರಕರಣಗಳು, ನೇಹಾ ಹತ್ಯೆ ಸಹಿತ ಕಾನೂನು ಸುವ್ಯವಸ್ಥೆ ವಿಚಾರಗಳನ್ನು ಸೋಮವಾರ ಮುನ್ನೆಲೆಗೆ ತರ
ಬಹುದು. ಅಲ್ಲದೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಅವಧಿಯ 21 ಹಗರಣಗಳನ್ನು ಪ್ರಸ್ತಾವಿಸಿದ್ದು, ಇದರ ವಿರುದ್ಧವೂ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅಣಿಯಾಗುತ್ತಿದೆ.

ಸರಕಾರದ ಪ್ರತ್ಯಸ್ತ್ರ
ವಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರವಾಗಿ ಸರಕಾರವು ಪ್ರಜ್ವಲ್‌ ರೇವಣ್ಣ ಪ್ರಕರಣ ವನ್ನು ಪ್ರಸ್ತಾವಿಸಿ ಜೆಡಿಎಸ್‌ ಜತೆಗೆ ಬಿಜೆಪಿಯನ್ನೂ ಮುಜುಗರಕ್ಕೀಡು ಮಾಡಬಹುದು.

Advertisement

ವಾಲ್ಮೀಕಿ ನಿಗಮದ ಪ್ರಕರಣ ತನಿಖೆ ಆಗುತ್ತಿದ್ದರೂ ರಾಜಕೀಯ ಕಾರಣಕ್ಕೆ ಕೇಂದ್ರದ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸಿವೆ ಎಂಬ ಆರೋಪವನ್ನೇ ತಿರುಗುಬಾಣ ಮಾಡಬಹುದು. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣವನ್ನೂ ಪ್ರಸ್ತಾವಿಸಿ, ಡಿ.ಎಸ್‌. ವೀರಯ್ಯ ಬಂಧನ ಮತ್ತಿತರ ವಿಷಯಗಳನ್ನು ಮುಂದಿಟ್ಟು ಚಾಟಿ ಬೀಸಬಹುದು.

ಖಾಸಗಿಯಲ್ಲಿ ಕನ್ನಡಿಗರಿಗೆ ಮೀಸಲು ಸಿಗದು?
ಖಾಸಗಿ ಕಂಪೆನಿಗಳ ಆಡಳಿತಾತ್ಮಕ ಹುದ್ದೆಗಳ ಪೈಕಿ ಶೇ. 50ರಷ್ಟನ್ನು ಸ್ಥಳೀಯರಿಗೆ ಮೀಸಲಿಡಬೇಕು ಹಾಗೂ ಸಿ ಮತ್ತು ಡಿ ದರ್ಜೆಯ ನೌಕರಿಯಲ್ಲಿ ಶೇ. 75ರಷ್ಟು ಸ್ಥಳೀಯರಿಗೆ ಆದ್ಯತೆ ಕೊಡಬೇಕೆಂಬ ಪ್ರಸ್ತಾವನೆಯುಳ್ಳ ಮಸೂದೆಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಈ ವಿಷಯ ವಿವಾದಕ್ಕೆ ಒಳಗಾದ್ದರಿಂದ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಸಿ ಗೊಂದಲ ನಿವಾರಿಸುವುದಾಗಿ ಸಿಎಂ ಹೇಳಿದ್ದರು. ಆದರೆ ಜು. 22ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವುದು ಅನುಮಾನವಾಗಿದೆ.

ವೈದ್ಯರ ಮೇಲೆ ಹಲ್ಲೆ ಮಾಡಿದರೆ ಕ್ರಮ
ವೈದ್ಯರು, ಶುಶ್ರೂಷಕರ ಮೇಲಿನ ದೌರ್ಜನ್ಯ ತಡೆಗಾಗಿ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಸರಕಾರ ಯೋಜಿಸಿದ್ದು, ಇದೇ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ನಿಚ್ಚಳವಾಗಿದೆ. ಜತೆಗೆ ನೀಟ್‌ ವಿರುದ್ಧ ನಿರ್ಣಯವೊಂದನ್ನು ಮಂಡಿಸಲು ತೀರ್ಮಾನಿಸಿದೆ.

ಮುಡಾ ಹಗರಣ: ಅಹೋರಾತ್ರಿ ಧರಣಿ?
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಕುಟುಂಬದ ವಿರುದ್ಧ ಆರೋಪಗಳಿದ್ದು, ಸಿಎಂ ರಾಜೀನಾಮೆ ಕೊಡಬೇಕೆಂದು ವಿಪಕ್ಷ ಬಿಜೆಪಿ-ಜೆಡಿಎಸ್‌ ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಅಲ್ಲದೆ, ಮಂಗಳವಾರ ಅಥವಾ ಬುಧವಾರ ಈ ವಿಚಾರ ಚರ್ಚೆಗೆ ಎತ್ತಿಕೊಂಡು ಅಹೋರಾತ್ರಿ ಧರಣಿ ನಡೆಸಲು ಚಿಂತನೆ ನಡೆಸಿದೆ. ಹಾಗೊಂದು ವೇಳೆ ಸರಕಾರ ಇಕ್ಕಟ್ಟಿಗೆ ಸಿಲುಕುವ ಸ್ಥಿತಿ ಬಂದರೆ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದರೂ ಅಚ್ಚರಿಯಿಲ್ಲ. ಅತಿವೃಷ್ಟಿ ಆಗಿರು ವುದರಿಂದ ಶಾಸಕರು ಕ್ಷೇತ್ರಗಳಿಗೆ ಹೋಗಬೇಕಿದ್ದು, ಇದನ್ನೇ ಮುಂದಿಟ್ಟುಕೊಂಡು ಕಲಾಪವನ್ನು ಮೊಟಕುಗೊಳಿಸುವ ಸಾಧ್ಯತೆ ದಟ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next