Advertisement

ಮತ್ತೆ ಕೋವಿಡ್ ಸೋಂಕಿನ ತಲೆನೋವು; ದೇಶದಲ್ಲಿ ಎಲ್ಲೆಲ್ಲಿ ಯಾವ ರೀತಿಯ ಕ್ರಮ

01:30 AM Dec 22, 2022 | Team Udayavani |

ಸರಿ ಸುಮಾರು ಒಂದು ವರ್ಷಕ್ಕೂ ಅಧಿಕ ಸಮಯದಿಂದ ಕೊರೊನಾ ಸೋಂಕಿನ ತೀವ್ರತೆ ಜಗತ್ತಿನಾದ್ಯಂತ ಕಡಿಮೆಯಾಗಿತ್ತು. ಕೆಲವು ದಿನಗಳಿಂದ ಈಚೆಗೆ ಅಮೆರಿಕ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಬ್ರೆಜಿಲ್‌ಗ‌ಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿದೆ. ಹೀಗಾಗಿ, ಮತ್ತೆ ಮುನ್ನೆಚ್ಚರಿಕೆ ವಹಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತ ಸಾಗಿದೆ.

Advertisement

ಚೀನಕ್ಕೆ ಧಾಂಗುಡಿ ಇಡಲಿದೆ ಹೊಸ ರೂಪಾಂತರಿಗಳು
ಜಗತ್ತಿಗೇ ಸೋಂಕಿನ ಸಮಸ್ಯೆ ಹಬ್ಬಿಸಿದ ಚೀನದಲ್ಲಿ ಮತ್ತೆ ಕೋಲಾಹಲ ಎಬ್ಬಿಸಿದೆ. ಆ ದೇಶದ ಆರೋಗ್ಯ ತಜ್ಞರ ಪ್ರಕಾರ ಹೊಸ ಮಾದರಿಯ ರೂಪಾಂತರಿಗಳು ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿವೆ ಎಂದು ಪೀಕಿಂಗ್‌ ವಿವಿಯ ಫ‌ಸ್ಟ್‌ ಆಸ್ಪತ್ರೆಯ ವೈರಾಣು ತಜ್ಞ ವಾಂಗ್‌ಗ್ವಾಂಗ್‌ಫಾ ಎಚ್ಚರಿಕೆ ನೀಡಿದ್ದಾರೆ.

ಬಿಎ.5.2 ಮತ್ತು ಬಿಎಫ್.7 ಎಂಬ ಎರಡು ಸೋಂಕಿನ ರೂಪಾಂತರಿಗಳು ಅಲ್ಲಿ ಸದ್ಯ ಸಮಸ್ಯೆಗೆ ಕಾರಣವಾಗಿವೆ. ಈ ಪೈಕಿ ಬಿಎಫ್.7 ಎಂಬ ಕೊರೊನಾ ರೂಪಾಂತರಿ ಡ್ರ್ಯಾಗನ್‌ ರಾಷ್ಟ್ರದಲ್ಲಿ ಮತ್ತೆ ಸೋಂಕಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಬಿಎಫ್.7 ಎಂಬ ರೂಪಾಂತರಿ ಒಮಿಕ್ರಾನ್‌ನ ಉಪತಳಿಯಾಗಿದೆ ಮತ್ತು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಇದೇ ವೇಳೆ, ಚೀನಾಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ನಡೆಸುವ ಬಗ್ಗೆಯೂ ಮತ್ತೆ ತೀರ್ಮಾನ ಕೈಗೊಳ್ಳಲಾಗಿದೆ.

ಅಮೆರಿಕ
ಎರಡು ವಾರಗಳ ಅವಧಿಯಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಪ್ರತಿದಿನ ಹೊಸತಾಗಿ ಸರಾಸರಿ 67, 368 ಕೇಸುಗಳು ದೃಢಪಡುತ್ತಿವೆ. ಪ್ರತಿ ದಿನ 1 ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನ್ಯೂಯಾರ್ಕ್‌ ನಗರ ಮತ್ತು ಲಾಸ್‌ ಏಂಜಲೀಸ್‌ ಅತ್ಯಂತ ಹೆಚ್ಚು ಸಮಸ್ಯೆಗೆ ಒಳಗಾಗಿರುವ ನಗರಗಳು. ಎಲ್ಲಾ ವಯೋಮಾನದ ಶೇ.68 ಮಂದಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಶೇ.34 ಮಂದಿಗೆ ಬೂಸ್ಟರ್‌ ಡೋಸ್‌ ನೀಡಲಾಗಿದ್ದರೆ, 65 ವರ್ಷ ಮತ್ತು ಮೇಲ್ಪಟ್ಟವರ ಪೈಕಿ ಶೇ.93 ಮಂದಿಗೆ ಪೂರ್ಣ ಪ್ರಮಾಣದ ಲಸಿಕೆ ಮತ್ತು ಶೇ.67ರಷ್ಟು ಮಂದಿಗೆ ಬೂಸ್ಟರ್‌ ಡೋಸ್‌ ನೀಡಲಾಗಿದೆ. ದೇಶದ ನೈಋತ್ಯ ಭಾಗದಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಜಾನ್‌ಹಾಪ್‌ಕಿನ್ಸ್‌ ವಿವಿಯ ಹೊಸ ಅಧ್ಯಯನದ ಪ್ರಕಾರ ಇದುವರೆಗೆ 100 ಮಿಲಿಯ ಪ್ರಕರಣಗಳು ದೃಢಪಟ್ಟಿವೆ. ಇದು ವರೆಗೆ 10.88 ಲಕ್ಷ ಮಂದಿ ಅಸುನೀಗಿದ್ದಾರೆ.

ಜಪಾನ್‌
ಸೋಂಕು ಪ್ರಕರಣಗಳ ನಿಯಂತ್ರಣಕ್ಕಾಗಿ ಕೈಗೊಂಡಿದ್ದ ಕಠಿಣ ಪ್ರತಿಬಂಧಕಗಳನ್ನು ಸರ್ಕಾರ ವಾಪಸ್‌ ಪಡೆದುಕೊಂಡಿದೆ. ಹೀಗಾಗಿ, ಕಳೆದ ತಿಂಗಳು ಅಲ್ಲಿಗೆ 10 ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಅದಕ್ಕೆ ಪೂರಕವಾಗಿ ಸೋಂಕಿನ ಪ್ರಕರಣಗಳು ವೃದ್ಧಿಯಾಗಿವೆ. ಬುಧವಾರಕ್ಕೆ ಸಂಬಂಧಿಸಿದಂತೆ 43,586 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆ ದೇಶದಲ್ಲಿ ಕೈಗಾರಿಕಾ ಉತ್ಪಾದನೆಯ ಪ್ರಮಾಣವನ್ನು ಇಳಿಕೆ ಮಾಡುವ ಬಗ್ಗೆ ಅಲ್ಲಿನ ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ ಸೆಮಿಕಂಡಕ್ಟರ್‌ ಕ್ಷೇತ್ರಕ್ಕೆ ಪ್ರತಿಕೂಲವಾಗುವ ಆತಂಕ ಎದುರಾಗಿದೆ.

Advertisement

ದಕ್ಷಿಣ ಕೊರಿಯಾ
ಹೊಸತಾಗಿ 87, 559 ಪ್ರಕರಣಗಳು ದೃಢಪಟ್ಟಿವೆ. ಇದರ ಹೊರತಾಗಿಯೂ ಕೂಡ ರಾಜಧಾನಿ ಸಿಯೋಲ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 2023ರಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇ.1.6ರಷ್ಟು ಕುಸಿತ ಕಾಣಲಿದೆ.

ದೇಶದಲ್ಲಿ ಎಲ್ಲೆಲ್ಲಿ ಯಾವ ರೀತಿಯ ಕ್ರಮ
– ಜಿನೋಮ್‌ ಸೀಕ್ವೆನ್ಸ್‌ ನಡೆಸುವ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ರಿಂದ ಆರೋಗ್ಯ ಖಾತೆಗೆ ಆದೇಶ. ಖುದ್ದು ಸಿಎಂ ಅವರಿಂದಲೇ ಪರಿಸ್ಥಿತಿ ಅವಲೋಕನ.
– ಕೇರಳದಲ್ಲಿ ಸೋಂಕು ಹರಡದಂತೆ ಮು°ನೆಚ್ಚರಿಕೆ ಕೈಗೊಳ್ಳಲು ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಸಭೆ ತೀರ್ಮಾನ. ಮುನ್ನೆಚ್ಚರಿಕೆ ಕ್ರಮ ಪಾಲಿಸುವಂತೆ ಜನರಿಗೆ ಮನವಿ
– ಅರುಣಾಚಲ ಪ್ರದೇಶದಲ್ಲೂ ಜಿನೋಮ್‌ ಸೀಕ್ವೆನ್ಸ್‌ ನಡೆಸುವ ಬಗ್ಗೆ ಸೂಚನೆ.

ಸೋಂಕು ಪರೀಕ್ಷೆಗೆ ಸೂಚನೆ
ಚೀನ ಸೇರಿದಂತೆ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. “ಎಲ್ಲಾ ಪ್ರಯಾಣಿಕರನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದಿಲ್ಲ. ಆಯ್ಕೆಯ ಮೂಲಕ ಪರೀಕ್ಷೆ ನಡೆಸಲಾಗುತ್ತದೆ’ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಯಾತ್ರೆ ನಿಲ್ಲಿಸಲು ನೋಟಿಸ್‌; ಕಾಂಗ್ರೆಸ್‌ಗೆ ಕೋಪ
ಕೊರೊನಾ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ಸ್ಥಗಿತಗೊಳಿಸಿ. ಇಲ್ಲವೇ ಸೋಂಕು ಪ್ರತಿಬಂಧಕ ನಿಯಮಗಳನ್ನು ಪಾಲಿಸಿ ಎಂದು ಕೇಂದ್ರ ಸರ್ಕಾರ ರಾಹುಲ್‌ ಗಾಂಧಿಯವರಿಗೆ ಸೂಚಿಸಿದೆ. ಯಾತ್ರೆಯಲ್ಲಿ ಭಾಗವಹಿಸಿದವರಲ್ಲಿ ಕೆಲವರಿಗೆ ಸೋಂಕು ದೃಢಪಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯಾ ರಾಹುಲ್‌ಗೆ ಬರೆದ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆದವರು ಮಾತ್ರವೇ ಭಾಗವಹಿಸಿಸಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾರ್ವಜನಿಕರ ಆರೋಗ್ಯ ಗಮನದಲ್ಲಿ ಇರಿಸಿ ಸರ್ಕಾರ ಸೂಚನೆ ನೀಡುವುದಾದರೆ ಸ್ವಾಗತ. ಆದರೆ, ಕೇವಲ ಆಯ್ಕೆ ಮಾಡಿ ಸೂಚನೆ ನೀಡುವುದಕ್ಕೆ ವಿರೋಧ ಇದೆ. ಕರ್ನಾಟಕ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಮೆರವಣಿಗೆ ನಡೆಸುತ್ತಿದೆ. ಸಂಸತ್‌ನಲ್ಲಿ ಕಲಾಪಗಳೂ ನಡೆಯುತ್ತಿವೆ. ವಿಮಾನಗಳಲ್ಲಿ ಕೂಡ ಮಾಸ್ಕ್ಗಳು ಕಡ್ಡಾಯವಲ್ಲ. ಅದಕ್ಕೆ ಏಕೆ ಕೇಂದ್ರದ ನಿರ್ದೇಶನ ಇಲ್ಲ’ ಎಂದು ಪ್ರಶ್ನಿಸಿದ್ದಾರೆ.

ಚೀನದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯ. ಆದರೆ, ನಮ್ಮ ದೇಶದಲ್ಲಿ ಹೆಚ್ಚಿನವರಿಗೆ ಲಸಿಕೆ ನೀಡಲಾಗಿರುವುದರಿಂದ ಆತಂಕಪಡಬೇಕಾದ ಅಗತ್ಯ ಅಲ್ಲ.
-ಅದಾರ್‌ ಪೂನಾವಾಲಾ, ಸೀರಂ ಇನ್ಸ್ಟಿಟ್ಯೂಟ್‌ನ ಸಿಇಒ

ಜನಸಂದಣಿ ಇರುವ ಪ್ರದೇಶಕ್ಕೆ ಮಾಸ್ಕ್ ಧರಿಸಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಬೂಸ್ಟರ್‌ ಡೋಸ್‌ ಪಡೆಯಬೇಕು. ಇತರ ಆರೋಗ್ಯ ಸಮಸ್ಯೆ ಇರುವವರು ಎಚ್ಚರಿಕೆ ವಹಿಸಬೇಕು.
-ವಿ.ಕೆ.ಪೌಲ್‌, ನೀತಿ ಆಯೋಗದ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next