ಬಂಗಾರಪೇಟೆ: ರಾಜ್ಯ ಹೈಕೋರ್ಟ್ ಸಂಭಾವಶಿವಮೂರ್ತಿ ಸ್ವಾಮಿಗಳ ಪುತ್ರ ಶಿವಪ್ರಸಾದ್ ಅವರನ್ನೂ ಜೊತೆಯಲ್ಲಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಿದ್ದರೂ ಶ್ರೀಕ್ಷೇತ್ರ ಕೋಟಿಲಿಂಗೇಶ್ವರ ದೇಗುಲದ ಉಸ್ತುವಾರಿ ಕೆ.ವಿ.ಕುಮಾರಿ, ಗಣನೆಗೇ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಶ್ರೀಗಳ ಪುತ್ರ ಶಿವಪ್ರಸಾದ್ ನೇತೃತ್ವದಲ್ಲಿ ದೇಗುಲ ಅರ್ಚಕರು, ಸಿಬ್ಬಂದಿ ಶನಿವಾರ ಪ್ರತಿಭಟನೆ ಮಾಡಿದರು.
ದೇವಾಲಯದಲ್ಲಿ ಹಲವು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಅರ್ಚಕರು ಹಾಗೂ ಸಿಬ್ಬಂದಿಯನ್ನು ಬದಲಾವಣೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ದೇಗುಲದ ಹಣವನ್ನು ವಸೂಲಿ ಮಾಡಿ ಸ್ವಂತ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದಾರೆ. ದೇಗುಲದಲ್ಲಿ ಹಲವಾರು ವಿಧಿ ವಿಧಾನಗಳನ್ನು ಬದಲಾವಣೆ ಮಾಡಲು ಉಸ್ತುವಾರಿ ಕೆ.ವಿ.ಕುಮಾರಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮಾತು ಕೇಳುತ್ತಿಲ್ಲ: ಹಿಂದೆ ದೇಗುಲ ಧರ್ಮದರ್ಶಿಯೂ ಆಗಿದ್ದ ಶ್ರೀಗಳ ಪುತ್ರ ಶಿವಪ್ರಸಾದ್ ಅವರನ್ನು ಜೊತೆಯಲ್ಲಿಟ್ಟುಕೊಂಡು ಜಂಟಿ ಖಾತೆ ಮಾಡಿ ದೇವಾಲಯದಿಂದ ಬರುವ ಆದಾಯ, ಹಣದ ವ್ಯವಹಾರ ನಡೆಸುವಂತೆ ರಾಜ್ಯ ಹೈಕೋರ್ಟ್ ಹೇಳಿದ್ದರೂ ಕುಮಾರಿ ಕೇಳುತ್ತಿಲ್ಲ ಎಂದು ದೂರಿದರು. ನನಗೆ ಮಾತ್ರ ಅಧಿಕಾರ: ಕೆ.ವಿ.ಕುಮಾರಿ ಏಕಪಕ್ಷೀಯವಾಗಿ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ. ಕೆ.ವಿ.ಕುಮಾರಿ ಹಾಗೂ ಶಿವಪ್ರಸಾದ್ ಇಬ್ಬರಿಗೂ ಅಧಿಕಾರ ನೀಡುವಂತೆ ರಾಜ್ಯ ಹೈಕೋರ್ಟ್ ನೀಡಿದ್ದರೂ ಜಿಲ್ಲಾಧಿಕಾರಿಗಳು ಕೆ.ವಿ.ಕುಮಾರಿಗೆ ಮಾತ್ರ ಅಧಿಕಾರ ನೀಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೆ.ಶಿವಪ್ರಸಾದ್, ದಾಮೋದರರೆಡ್ಡಿ, ಓ.ಎಂ. ಗೋಪಾಲ್, ರಾಘವಾಚಾರಿ, ರಮೇಶ್ ಸೇರಿದಂತೆ ದೇಗುಲದ ಅಂಗಡಿಗಳ ಬಾಡಿಗೆದಾರರು ಹಾಜರಿದ್ದರು. ಅಧಿಕಾರ ಹಸ್ತಾಂತರದ ಬೆನ್ನಲ್ಲೇ ಭಿನ್ನಮತ: ಹೈಕೋರ್ಟ್ ತೀರ್ಪುನಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆದೇಶದ ಮೇರೆಗೆ ತಾಲೂಕಿನ ಕಮ್ಮಸಂದ್ರದ ಶ್ರೀಕ್ಷೇತ್ರ ಕೋಟಿಲಿಂಗೇಶ್ವರ ದೇಗುಲದ ನಿರ್ವಹಣೆ ಹೊಣೆಯನ್ನು ಹಿಂದೆ ಆಡಳಿತಾಧಿಕಾರಿಯಾಗಿದ್ದ ಕೆಜಿಎಫ್ ತಹಶೀಲ್ದಾರ್ ಕೆ.ರಮೇಶ್, ಕೆ.ವಿ.ಕುಮಾರಿಗೆ ಶುಕ್ರವಾರ ಅಧಿಕಾರ ಹಸ್ತಾಂತರ ಮಾಡಿದರು.
ಈ ವೇಳೆ ತಹಶೀಲ್ದಾರ್ ಕೆ. ರಮೇಶ್ ನಿರ್ವಹಣೆ ಹಸ್ತಾಂತರ ಮಾಡುವ ಮುನ್ನಾ ಹಲವು ಬಾರಿ ಶಿವಪ್ರಸಾದ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದರೂ ಬಂದಿರಲಿಲ್ಲ. ಕೆಲಕಾಲ ಕಾದು ನಂತರ ಕೆ.ವಿ.ಕುಮಾರಿಗೆ ಆಡಳಿತ ನಿರ್ವಹಣೆ ಹಸ್ತಾಂತರ ಮಾಡಿದರು. ಇದೇವೇಳೆ ಆಡಳಿತ ನಿರ್ವಹಣೆ ಬಗ್ಗೆ ಮಾಹಿತಿ ನೀಡಲು ದೇಗುಲ ಅರ್ಚಕರು, ಸಿಬ್ಬಂದಿ ಕರೆದರೂ ಬರಲಿಲ್ಲ. ಅರ್ಚಕರು ದೇವಾಲಯಗಳಲ್ಲಿ ಪೂಜೆ ಮಾಡದೇ ಶಿವಪ್ರಸಾದ್ ಇದ್ದ ಗೆಸ್ಟ್‌ಹೌಸ್ ಗೆ ಹೋಗಿ ಕುಳಿತ್ತಿದ್ದರು. ದೇಗುಲದಲ್ಲಿ ಪೂಜೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಇವೆಲ್ಲ ಬೆಳವಣಿಗೆಗಳ ಮಧ್ಯೆ ಶನಿವಾರ ದಿಢೀರ್ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡಿದ್ರೆ ದೇಗುಲದಲ್ಲಿ ಮತ್ತೆ ಭಿನ್ನಮತ ಹೆಚ್ಚುವ ಸಾಧ್ಯತೆ ಕಂಡು ಬರುತ್ತಿದೆ.