Advertisement

ಮತ್ತೆ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುತ್ತೆ;ಈ ಬಾರಿಯೂ ನನ್ನದೇ ನಾಯಕತ್ವ

11:10 AM May 14, 2017 | |

ಚಿತ್ರದುರ್ಗ: ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಆದರೆ, ಅವರ ಮಿಷನ್‌-150 ಕನಸು ನುಚ್ಚುನೂರಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

Advertisement

ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶನಿವಾರ
ಆಯೋಜಿಸಿದ್ದ ಬೆಂಗಳೂರು ವಿಭಾಗ ಮಟ್ಟದ 9 ಜಿಲ್ಲೆಗಳ 29 ಸಾವಿರ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರೋದು ನೂರಕ್ಕೆ ನೂರರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಸುಳ್ಳನ್ನು ಸತ್ಯ ಮಾಡುವುದೇ ತರಬೇತಿ ಆಗಿದೆ.ಅದು ಬಿಜೆಪಿಯ ಹಿಡನ್‌ ಅಜೆಂಡಾ ಕೂಡ. ಗುಂಡ್ಲುಪೇಟೆ ಹಾಗೂ
ನಂಜನಗೂಡು ಉಪಚುನಾವಣೆ ವೇಳೆ ಈ ಚುನಾವಣಾ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಯಡಿಯೂರಪ್ಪ ಹೇಳಿದ್ದರು. ಒಂದು ತಿಂಗಳು ಆ ಕ್ಷೇತ್ರಗಳಲ್ಲಿ ಸುತ್ತಾಡಿ ನಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದರು. ಕೊನೆಗೆ ಎರಡೂ ಕ್ಷೇತ್ರದಲ್ಲಿ ನಾವೇ ಗೆದ್ದಿದ್ದೇವೆ. ಅವರೇ ಹೇಳಿದಂತೆ ಆ ಚುನಾವಣೆ ಫಲಿತಾಂಶ ಮುಂದಿನ ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದಾದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದರ್ಥವಲ್ಲವೇ ಎಂದು ಪ್ರಶ್ನಿಸಿದರು.

ನನ್ನದೇ ನಾಯಕತ್ವ: “ತಾಲೂಕು ಮಂಡಳಿ ಸದಸ್ಯನಿಂದ ಮುಖ್ಯಮಂತ್ರಿ ವರೆಗೆ ವಿವಿಧ ಸ್ತರದ ಅಧಿಕಾರ ನಡೆಸಿದ್ದೇನೆ. ಈ ರಾಜ್ಯದ ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿದ್ದೇನೆ.

ಮತ್ತೆ ನನ್ನ ನಾಯಕತ್ವ ದಲ್ಲೇ ಚುನಾವಣೆ ನಡೆಯಲಿದೆ. ಸಿಎಂ ಯಾರಾಗಬೇಕೆಂಬುದನ್ನು ಶಾಸಕಾಂಗ ಸಭೆಯಲ್ಲಿ ಶಾಸಕರು ತೀರ್ಮಾನ ಮಾಡುತ್ತಾರೆ .ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ. ನಾನು ಬಿಜೆಪಿಯವರಂತೆ ನಮ್ಮ ಪಕ್ಷ 100, 140, 150 ಸೀಟು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ನಮ್ಮ ಸರ್ಕಾರದ ಸಾಧನೆ ಏನು ಎಂಬುದು ಜನರಿಗೆ ಗೊತ್ತಿದೆ. ಹಾಗಾಗಿ ನಮಗೆ ಮತ್ತೂಮ್ಮೆ ಜನ ಅವಕಾಶ ನೀಡುವ ವಿಶ್ವಾಸವಿದೆ. ಜನ ನಮ್ಮ ಪಕ್ಷವನ್ನು ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು. ಜತೆಗೆ, ಕೆಪಿಸಿಸಿ ಅಧ್ಯಕ್ಷರು ಯಾರಾಗುತ್ತಾರೆ ಎಂಬುದನ್ನು ಹೈಕಮಾಂಡ್‌ ತೀರ್ಮಾನಿಸಲಿದೆ.ಸಮರ್ಥ ಅಧ್ಯಕ್ಷರನ್ನೇ ಆಯ್ಕೆ ಮಾಡಲಿದೆ ಎಂದರು.

Advertisement

ಮಾಹಿತಿ ಕಣಜ: ರಾಜ್ಯ ಸರ್ಕಾರದ 33 ಇಲಾಖೆಗಳಲ್ಲಿನ ಸೌಲಭ್ಯಗಳು, ರೈತರು, ಯುವಜನರು ಹಾಗೂ ಸಾರ್ವಜನಿಕರಿಗೆ ಅತ್ಯುಪಯುಕ್ತವಾಗಬಲ್ಲ ಮಾಹಿತಿಗಳ ಕಣಜವೇ ಅಲ್ಲಿತ್ತು… ಇದು ರಾಜ್ಯ ಕಾಂಗ್ರೆಸ್‌ ಸರ್ಕಾರ 4 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಕಂಡು ಬಂದ ದೃಶ್ಯ. ಬೆಂಗಳೂರು ವಿಭಾಗಮಟ್ಟದ ಫಲಾನುಭವಿಗಳ ಸಮಾವೇಶದ ಆಯೋಜನೆಗಷ್ಟೇ ಸೀಮಿತವಾಗದೆ ಸರ್ಕಾರ, ಮೇ 13ರಿಂದ 15ರವರೆಗೆ ಮೂರು ದಿನಗಳ ಕಾಲ ವಸ್ತುಪ್ರದರ್ಶನವನ್ನೂ ಏರ್ಪಡಿಸಿದೆ. ಈ ವಸ್ತಪ್ರದರ್ಶನ ಜನಮನ ಸೆಳೆಯುತ್ತಿದೆ.

ಕವಡೆಕಾಸಿನ ಕಿಮ್ಮತ್ತೂ ಇಲ್ಲ: ಇದಕ್ಕೂ ಮೊದಲು ನಗರದ ಹೆಲಿಪ್ಯಾಡ್‌ನಲ್ಲಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾಡಿರುವ ಆರೋಪ ಆಧಾರರಹಿತವಾಗಿದ್ದು, ಬಿಜೆಪಿಯವರ ಚಾರ್ಜ್‌ಶೀಟ್‌ಗೆ ಕವಡೆಕಾಸಿನ ಕಿಮ್ಮತ್ತೂ ಇಲ್ಲ ಚಾರ್ಜ್‌ ಶೀಟ್‌ನ್ನು ನಾವೀಗಾಗಲೇ ಡಿಸ್‌ಮಿಸ್‌ ಮಾಡಿದ್ದೇವೆ ಎಂದರು.

“ಉತ್ತಮ ಮಳೆ-ಬೆಳೆಯಾಗಿದ್ರೆ
ಅದ್ಧೂರಿ ಸಮಾವೇಶ ಮಾಡ್ತಿದ್ದೆವು’
ಚಿತ್ರದುರ್ಗ
: ರಾಜ್ಯದಲ್ಲಿ ಬರ ಇರೋದ್ರಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಲು ಸಮಾವೇಶ ಆಯೋಜಿಸಿದ್ದೇವೆ. ಒಂದು ವೇಳೆ ಉತ್ತಮ ಮಳೆ-ಬೆಳೆಯಾಗಿದ್ದರೆ ನೂರು ಎಕರೆ ಜಾಗದಲ್ಲಿ ದೊಡ್ಡ ವೇದಿಕೆ ನಿರ್ಮಾಣ ಮಾಡಿ ಅದ್ಧೂರಿ ಸಮಾವೇಶವನ್ನೇ ಮಾಡುತ್ತಿದ್ದೆವು ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ಸಾಧನಾ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, “ಟೀಕೆ ಮಾಡುವುದೇ ವಿರೋಧ ಪಕ್ಷಗಳ ಕೆಲಸ. ಅದಕ್ಕೆಲ್ಲ ನಾವು ಸೊಪ್ಪು ಹಾಕುವುದಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಯನ್ನು ಸಹಿಸಲಾಗದ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲೇ ಚುನಾವಣೆ ಎದುರಿಸಿ ಅಧಿಧಿಕಾರಕ್ಕೆ ಬರುತ್ತೇವೆ’ ಎಂದರು.

ಸರ್ಕಾರಕ್ಕೆ ಫುಲ್‌ಮಾರ್ಕ್ಸ್
ಚಿತ್ರದುರ್ಗ:
ಮುಂದಿನ ವಿಧಾನಸಭಾ ಚುನಾವಣೆಯನ್ನು ಸಿದ್ದರಾಮಯ್ಯ ನೇತೃತ್ವದಲ್ಲೇ ಎದುರಿಸುವುದಾಗಿ ಪ್ರಕಟಿಸಿರುವ ಸಚಿವರು, ಸಂಸದರು, ಬಿಜೆಪಿ ಚಾರ್ಜ್‌ಶೀಟ್‌ಗೆ ಮತದಾರರು “ಬಿ’ ರಿಪೋರ್ಟ್‌ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಸಚಿವರಾದ ಡಿ.ಕೆ. ಶಿವಕುಮಾರ್‌, ಎಸ್‌.ಎಸ್‌. ಮಲ್ಲಿಕಾರ್ಜುನ್‌, ಕಾಗೋಡು ತಿಮ್ಮಪ್ಪ, ಉಮಾಶ್ರೀ, ಆಂಜನೇಯ, ಸಂಸದರಾದ ಚಂದ್ರಪ್ಪ, ಮುನಿಯಪ್ಪ ಮತ್ತಿತರರು, ಸಿದ್ದರಾಮಯ್ಯ ನಾಯಕತ್ವದಲ್ಲೇ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಚಾರ್ಜ್‌ಶೀಟ್‌ಗೆ ಮತದಾರರು “ಬಿ’ ರಿಪೋರ್ಟ್‌ ನೀಡಲಿದ್ದಾರೆಂದು ಹೇಳಿದರು.

ಸಹಕಾರ ತತ್ವದಡಿ ಕೆಲಸ ಮಾಡಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಮುಖಂಡರು ಬರೀ ಬಾಯಿಮಾತಿನಲ್ಲಿ ರೈತಪರ ಕಾಳಜಿ ತೋರಿಸುತ್ತಿದ್ದಾರೆಯೇ ವಿನಃ ಪ್ರಧಾನಿ ಮೇಲೆ ಒತ್ತಡ ಹೇರುತ್ತಿಲ್ಲ. ಬರೀ ಬೊಗಳೆ ಬಿಡುವುದು ಬೇಡ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡುವುದಾದರೆ ನಮ್ಮ ಸರ್ಕಾರವೂ ಕೂಡ ಮಾಡುತ್ತದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next