Advertisement

ಮತ್ತೆ ಕಾಂಗ್ರೆಸ್‌ ಸರಕಾರ: ಪುದುಚೇರಿ ಸಿಎಂ ಸ್ವಾಮಿ

01:43 PM May 02, 2018 | Team Udayavani |

ಸುಳ್ಯ: ಪಾರದರ್ಶಕತೆ, ಜನಪರ ನಿಲುವಿನೊಂದಿಗೆ ಐದು ವರ್ಷಗಳ ಕಾಲ ಶುದ್ಧ ಹಸ್ತದ ಆಡಳಿತ ನೀಡಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಪೂರ್ಣ ಬಹುಮತ ಪಡೆದು ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಯಾಚನೆಗೆ ಸುಳ್ಯ ಕ್ಷೇತ್ರಕ್ಕೆ ಆಗಮಿಸಿದ್ದ ಅವರು, ಕಾಂಗ್ರೆಸ್‌ ಚುನಾವಣ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಲ್ಲ ವರ್ಗದ ಹಿತಕ್ಕಾಗಿ ಮಾದರಿ ಯೋಜನೆಗಳನ್ನು ತಂದಿರುವ ಸಿದ್ದರಾಮಯ್ಯ ಸರಕಾರವು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ರೈತ ವಿರೋಧಿ ನೀತಿ ಅನುಸರಿಸಿದರೆ, ಸಿದ್ದರಾಮಯ್ಯ ಸರಕಾರ ರೈತ ಪರ ಯೋಜನೆಗಳನ್ನು ಪ್ರಕಟಿಸಿ, ಅವರ ಹಿತ ಕಾಪಾಡಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಉನ್ನತ ಸ್ಥಾನದಲ್ಲಿದೆ. ಕೇಂದ್ರ ಸರಕಾರ ಉದ್ಯೋಗ ಕಸಿದುಕೊಂಡರೆ, ರಾಜ್ಯ ಸರಕಾರ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ ಎಂದು ಹೇಳಿದರು.

ಮೋದಿಗೆ ಹಕ್ಕಿಲ್ಲ
ನರೇಂದ್ರ ಮೋದಿ ಅವರಿಗೆ ಭ್ರಷ್ಟಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಹಿತ ಸಾಲು-ಸಾಲು ಮಂತ್ರಿಗಳು ಜೈಲು ಕಂಬಿ ಎಣಿಸಿದ್ದರು. ಅಂತಹವರನ್ನೇ ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಚಾರದ ವಿರುದ್ಧ ಮಾತನಾಡುವ ಮೋದಿ ಅವರನ್ನು ಜನರು ನಂಬಲು ಸಾಧ್ಯವಿಲ್ಲ. ಯಡಿಯೂರಪ್ಪ, ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಹಲವು ಭ್ರಷ್ಠಾಚಾರದ ಹಲವು ಕೇಸುಗಳು ಬಾಕಿ ಇದೆ. ಬ್ಯಾಂಕ್‌ ಲೂಟಿ ಮಾಡಿ ವಿದೇಶಕ್ಕೆ ಓಡಿ ಹೋಗಲು ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಮೋದಿಯ ಜಪ
ಯಡಿಯೂರಪ್ಪ ಅವರ ಹೆಸರು ಹೇಳಿ ಚುನಾವಣೆ ಗೆಲ್ಲುವುದು ಅಸಾಧ್ಯ ಎಂದು ತಿಳಿದು, ಬಿಜೆಪಿಯವರು ಮೋದಿ ಮತ್ತು ಅಮಿತ್‌ ಶಾ ಹೆಸರು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ಅದು ಫಲ ನೀಡುವುದಿಲ್ಲ. ಕರ್ನಾಟಕದ ಮೂಲಕ ನರೇಂದ್ರ ಮೋದಿ ಅವರ ಆಡಳಿತದ ಅವಸಾನಕ್ಕೂ ಕ್ಷಣಗಣನೆ ಆರಂಭಗೊಂಡಿದೆ ಎಂದು ನಾರಾಯಣ ಸ್ವಾಮಿ ಹೇಳಿದರು.

ಕಾವೇರಿ ನದಿ ನೀರಿನ ವಿಚಾರ ಸುಪ್ರೀಂ ಕೋರ್ಟಿನಲ್ಲಿದೆ. ಚುನಾವಣೆಯಲ್ಲಿ ಈ ವಿವಾದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಅವರು, ತಮಿಳು ಪುನರ್ವಸತಿದಾರರಿಗೆ ಶಾಶ್ವತ ವಸತಿ ಕಲ್ಪಿಸಲು ಕಾಂಗ್ರೆಸ್‌ ಸರಕಾರ ಬದ್ಧವಾಗಿದೆ ಎಂದರು.

Advertisement

ಕೆಪಿಸಿಸಿ ಕಾರ್ಯದರ್ಶಿ ಎನ್‌.ಸಿ. ಕುಮಾರ್‌, ಭರತ್‌ ಮುಂಡೋಡಿ, ಸವಿತಾ ರಮೇಶ್‌, ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ, ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ತಮಿಳು ಮುಖಂಡರಾದ ಚಂದ್ರಲಿಂಗಂ, ಶಿವಕುಮಾರ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ಕೋಲ್ಚಾರ್‌ ಮೊದಲಾದವರಿದ್ದರು.

ತಮಿಳು ಕಾಲನಿಗೆ ಭೇಟಿ
ಪುದುಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಅವರು ಕಾಂಗ್ರೆಸ್‌ ಚುನಾವಣಾ ಕಚೇರಿಯಲ್ಲಿ ತಮಿಳು ಪುನರ್ವಸತಿದಾರರ ಜತೆ ಸಭೆ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು. ಐವರ್ನಾಡು ತಮಿಳು ಕಾಲನಿಗೆ ತೆರಳಿ, ಅಭ್ಯರ್ಥಿ ಡಾ| ರಘು ಪರ ಮತಯಾಚನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next