Advertisement

ಮತ್ತೆ ಬರದ ಕಾರ್ಮೋಡ; ಆತಂಕ

05:01 PM Jun 22, 2018 | |

ದೇವದುರ್ಗ: ದೇವದುರ್ಗ ತಾಲೂಕಿನಲ್ಲಿ ಈ ಬಾರಿಯೂ ಮುಂಗಾರು ಮಳೆ ಕೈಕೊಡುವ ಲಕ್ಷಣಗಳು ಗೋಚರಿಸುತ್ತಿವೆ. ಮುಂಗಾರು ಮಳೆ ಆರಂಭಗೊಂಡಿದ್ದರೂ ವರುಣ ಕೃಪೆ ತೋರದ್ದರಿಂದ  ರೈತರು ಆತಂಕದಲ್ಲಿದ್ದಾರೆ.

Advertisement

ಮುಂಗಾರು ಮಳೆಗೂ ಮುನ್ನ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಅಲ್ಪ ಮಳೆಗೆ ರೈತರು ಬಿತ್ತನೆ ಚಟುವಟಿಕೆ ಕೈಗೊಳ್ಳಲು ಜಮೀನನ್ನು ಹದಗೊಳಿಸಿದ್ದಾರೆ. ಭೂಮಿ ಹಸಿಯಾಗುವಂತೆ ಒಂದು ಮಳೆ ಸುರಿದರೂ
ರೈತರು ಬಿತ್ತನೆಗೆ ಮುಂದಾಗಲಿದ್ದಾರೆ. ಆದರೆ ಈ ಭಾಗದಲ್ಲಿ ವರುಣ ಕೃಪೆ ತೋರದ್ದರಿಂದ ರೈತರು ಆಗಸದತ್ತ ಮುಖ ಮಾಡಿದ್ದಾರೆ.

ಏಪ್ರೀಲ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ಸುಮಾರು 700 ಮಿ.ಮೀ.ಗಿಂತ ಅಧಿಕ ಮಳೆ ಸುರಿಯಬೇಕಿತ್ತು. ಆದರೆ 492.2 ಎಂ.ಎಂ. ಮಳೆ ಮಾತ್ರ ಆಗಿದೆ. ಜೂನ್‌ನಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆ ಸುರಿದಿದೆ. ಹೀಗಾಗಿ ಬಿತ್ತನೆ ಕೃಷಿ ಚಟುವಟಿಕೆ ಆರಂಭಿಸಲು ರೈತರು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸತತ ಬರದಿಂದ ತತ್ತರಿಸಿದ್ದ, ರೈತ ವರ್ಗ ಇದೀಗ ಮುಂಗಾರು ಮಳೆ ಬಾರದೇ ಇರುವುದರಿಂದ ಮತ್ತೇ ಬರದ ಆತಂಕದಲ್ಲಿದ್ದಾರೆ.

ಬಿತ್ತನೆ ಗುರಿ: ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 21 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 13 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, 14 ಸಾವಿರ ಹೆಕ್ಟೇರ್‌ನಲ್ಲಿ ಸಜ್ಜೆ, 18 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ, 10 ಸಾವಿರ ಹೆಕ್ಟೇರ್‌ ನಲ್ಲಿ ಹೆಸರು ಸೇರಿ ಇತರೆ ಬೆಳೆಗಳ ಬಿತ್ತನೆ ಗುರಿ ಇದೆ. ಕೃಷಿ ಇಲಾಖೆ ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. 

ಮುಂಗಾರು ಆರಂಭದಲ್ಲೇ ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಅಗತ್ಯ ಕೃಷಿ ಸಾಮಗ್ರಿಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಸಿದೆ. ತಾಲೂಕಿನನಾಲ್ಕು ಹೋಬಳಿಗಳಾದ ಕೇಂದ್ರಗಳಾದ 
ದೇವದುರ್ಗ, ಅರಕೇರಾ, ಗಬ್ಬೂರು, ಜಾಲಹಳ್ಳಿ ರೈತ ಸಂಪರ್ಕ ಕೇಂದ್ರಗಳಿಗೆ ತೊಗರಿ 150 ಕ್ವಿಂಟಲ್‌, ಭತ್ತ 700 ಕ್ವಿಂಟಲ್‌, ಹೆಸರು 25 ಕ್ವಿಂಟಲ್‌, ಸೂರ್ಯಕಾಂತಿ 75 ಕ್ವಿಂಟಲ್‌ ಬೀಜಗಳನ್ನು ರೈತ ಪೂರೈಸಿದೆ.ರೈತರಿಗೆ ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೈತ ಸಂಪರ್ಕ ಕೇಂದ್ರ ಅಧಿಕಾರಿ ಚೌವ್ಹಾಣ ತಿಳಿಸಿದರು.

Advertisement

ರೈತ ಸಂಪರ್ಕ ಕೇಂದ್ರ ಬಣಬಣ: ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿದ್ದರೆ ಇಷ್ಟೊತ್ತಿಗಾಗಲೇ ರೈತ
ಸಂಪರ್ಕ ಕೇಂದ್ರಗಳಲ್ಲಿ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಮುಗಿಬೀಳುತ್ತಿದ್ದರು. ಆದರೆ ಮಳೆ ಕೈಕೊಟ್ಟಿದ್ದರಿಂದ ಪಟ್ಟಣ ಸೇರಿ ಸುತ್ತಲಿನ ನಾಲ್ಕು ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳತ್ತ ರೈತರು ಸುಳಿಯದ್ದರಿಂದ ಕೇಂದ್ರಗಳು ಬಣಗುಡುತ್ತಿವೆ.

ಆಗ್ರಹ: ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಇಲಾಖೆ ಬಿತ್ತನೆ ಬೀಜ ವಿತರಿಸಬೇಕು. ಖಾಸಗಿ ಕಂಪನಿಗಳ ಎಜೆಂಟ್‌ರಂತೆ ವರ್ತಿಸಬಾರದು. ಮಧ್ಯವರ್ತಿಗಳ ಹಾವಳಿಗೆ ಬ್ರೇಕ್‌ ಹಾಕಬೇಕು. ಸರಕಾರ ಪೂರೈಸುವ ಬಿತ್ತನೆ ಬೀಜ, ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎಂದು ಕೆಆರ್‌ಎಸ್‌ ಸಂಘಟನೆ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಮುಂಡರಗಿ ಆಗ್ರಹಿಸಿದರು. 

ಮುಂಗಾರು ಹಂಗಾಮಿನಲ್ಲಿ ರೈತರ ಬೇಡಿಕೆಗನುಗುಣವಾಗಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಲು ಕೃಷಿ ಇಲಾಖೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದ್ದರಿಂದ ರೈತರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಸುಧಾ, ಪ್ರಭಾರಿ ಕೃಷಿ ಅಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next