ಅಫಜಲಪುರ: ಪಟ್ಟಣದ ಅಂಬೇಡ್ಕರ್ ವೃತ್ತ, ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜು, ತಹಶೀಲ್ದಾರ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳಿರುವ ಕಡೆ ಮುಖ್ಯ ರಸ್ತೆಗೆ ಹೊಂದಿಕೊಂಡು ಪ್ರಭಾವಿ ವ್ಯಕ್ತಿಯೊಬ್ಬರು ತೆರೆದಿರುವ ವೈನ್ ಶಾಪ್ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಕುಮಾರ ಬಡದಾಳ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರತಿಭಟನೆ ನಡೆಸಿ ತಹಸೀಲ್ ಕಚೇರಿಗೆ ತೆರಳಿ ತಹಶೀಲ್ದಾರ ಶಶಿಕಲಾ ಪಾದಗಟ್ಟಿ ಅವರಿಗೆ ಮನವಿ ಸಲ್ಲಿಸಿದರು.ಅಧ್ಯಕ್ಷ ರಾಜಕುಮಾರ ಬಡದಾಳ ಮಾತನಾಡಿ, ಕ್ಷೇತ್ರದ ಶಾಸಕರು ಇಂತವರ ರಕ್ಷಣೆಗೆ ನಿಂತಿದ್ದಾರೆ. ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇಲ್ಲ. ಅಲ್ಲದೆ ತಮಗೆ ಅನೂಕುಲ ಆಗುವ ರೀತಿಯಲ್ಲಿ ಅಧಿಕಾರ ಮಾಡುತ್ತಾರೆ. ಪಟ್ಟಣದ ಹೊರವಲಯದಲ್ಲಿ ಕಲಬುರಗಿ ರಸ್ತೆಗೆ ಹೊಂದಿಕೊಂಡು ಶಾಸಕರ ಸಂಬಂಧಿಕರ ಎ ನಿವೇಶನಗಳಿದ್ದು ಅವುಗಳಿಗೆ ಬೇಡಿಕೆ ಬರಲಿ ಎನ್ನುವ ಉದ್ದೇಶದಿಂದ ಈಗಿರುವ ಮಿನಿ ವಿಧಾನ ಸೌಧ ಕಟ್ಟಡವನ್ನು ಪಟ್ಟಣದ ಕಲಬುರಗಿ ರಸ್ತೆಗೆ ಸ್ಥಳಾಂತರಿಸುವ ಹುನ್ನಾರ ನಡೆಸಿದ್ದಾರೆ ಎಂದು ಆಪಾದಿಸಿದರು. ಈಗಿರುವ ಮಿನಿ ವಿಧಾನ ಸೌಧ ಕಟ್ಟಡ ಜನರಿಗೆ ಅನೂಕೂಲಕರವಾಗಿದೆ. ಅಲ್ಲದೆ ಈಗಿರುವ ಕಚೇರಿಯ ಹಿಂದೆ ಇರುವ 2 ಎಕರೆ ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಸಂಬಂಧಪಟ್ಟ ಇಲಾಖೆ ವೈನ್‌ಶಾಪ್ ತೆರವುಗೊಳಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಕೇಶವ ಕಾಬಾ, ಮನೋಹರ ಪೋದ್ದಾರ, ಖಲೀಲ ನಾಗಠಾಣ, ಹಣಮಂತ್ರಾಯ ಬಿರಾದಾರ, ಸಂಜು
ಕೋಳಗೇರಿ, ಬೈಲಪ್ಪ ಪಟ್ಟೇದಾರ, ರಾಜಶ್ರೀ ಸೋನಾರ, ಗುಂಡು ಬಂದರವಾಡ, ರಾಜು ಬಜಂತ್ರಿ ಹಾಗೂ ಇತರರು ಇದ್ದರು.