ಅಫಜಲಪುರ: ತಾಲೂಕಿನ ಆನೂರ ಗ್ರಾ.ಪಂ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಗ್ರಾಮದ ಹಿರಿಯ ಮುಖಂಡ ನಿಂಗಣ್ಣ ಕಲಶೆಟ್ಟಿ ಗ್ರಾ.ಪಂ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.
ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಎದುರು ಅಭಿಮಾನಿಗಳು ವಿಜಯೋತ್ಸವ ಆಚರಿಸುವ ಸಿದ್ಧತೆಯಲ್ಲಿರುವಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಆಸ್ಪತ್ರೆಯಲ್ಲಿ ಮೃತಪಟ್ಟ ಸುದ್ದಿಬಂದಿತ್ತು.
ಇದರಿಂದ ಸಂಭ್ರಮದಲ್ಲಿರಬೇಕಾದ ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರು ಶೋಕ ಸಾಗರದಲ್ಲಿ ಮುಳುಗುಂತಾಯಿತು. ನಿಂಗಣ್ಣ ಅವರ ತಾಯಿ ಮಲ್ಲಮ್ಮ ಗೊಲ್ಲಾಳಪ್ಪ ಕಲಶೆಟ್ಟಿ (78) ಕಳೆದ ಡಿ. 30ರಂದು ನಡೆದ ಗ್ರಾ.ಪಂ ಚುನಾವಣೆಯಲ್ಲಿ ಮತದಾನ ಚಲಾಯಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಗುಜರಾತ್ ಮಾದರಿಯಲ್ಲಿ ವಿದ್ಯುತ್ ಉತ್ಪಾದಿಸುವಂತೆ ಸಿಎಂ ಗೆ ಮನವಿ ಮಾಡಿದ ಅನಿರುದ್ಧ
ಅಂತ್ಯಕ್ರಿಯೆ: ಮಲ್ಲಮ್ಮ ಅವರಿಗೆ ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಮೊಮ್ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಡಿ. 31ರಂದು ಮಧ್ಯಾಹ್ನ 3ಗಂಟೆಗೆ ಸ್ವಂತ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಸಂತಾಪ: ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ, ಬಿಜೆಪಿ ಅಧ್ಯಕ್ಷ ಶೈಲೇಶ ಗುಣಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಬಗಲಿ, ಸೂರ್ಯಕಾಂತ ನಾಕೇದಾರ, ಡಾ| ಭೀರಣ್ಣ ಕಲ್ಲೂರ, ಶರಣು ಪದಕಿ, ಸಚೀನ್ ರಾಠೊಡ್, ಚಿತ್ತಾಪುರ ಸರಕಾರಿ ನೌಕರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ತಾಲೂಕು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ಸಿಂಗೆ ಮುಂತಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.