Advertisement

ದುಂದುವೆಚ್ಚ ಕಡಿವಾಣಕ್ಕೆ ಸಾಮೂಹಿಕ ವಿವಾಹ ಮದ್ದು

03:41 PM Feb 09, 2020 | Team Udayavani |

ಅಫಜಲಪುರ: ದುಂದುವೆಚ್ಚ ಕಡಿವಾಣಕ್ಕೆ ಸಾಮೂಹಿಕ ವಿವಾಹ ಮದ್ದು ಎಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.

Advertisement

ತಾಲೂಕಿನ ಚಿನ್ಮಯಗಿರಿಯ ಮಹಾಂತೇಶ್ವರ ಜಾತ್ರೆ ಪ್ರಯುಕ್ತ ಮಠದ ವತಿಯಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜಕಾರಣಿಗಳು ಮಾಡುವ ಸಾಮೂಹಿಕ ವಿವಾಹಗಳಿಗಿಂತ ಇಂತಹ ಧರ್ಮಕ್ಷೇತ್ರಗಳಲ್ಲಿ ನಡೆಯುವ ವಿವಾಹಗಳು ಮೇಲು. ಎಲ್ಲ ಹರಗುರುಚರ ಮೂರ್ತಿಗಳು ಆಶೀರ್ವದಿಸಿ ಹರಸುತ್ತಾರೆ. ಇಂತಹ ಪಾವನ ಕಾರ್ಯಕ್ರಮದಲ್ಲಿ ನಮ್ಮ ಕುಟುಂಬದ ವತಿಯಿಂದ ತಾಳಿ, ಕಾಲುಂಗುರ, ಬಟ್ಟೆಯ ಅಲ್ಪ ಸೇವೆ ಮಾಡಿದ್ದೇವೆ ಎಂದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಬಡವರಿಗೆ ಮನೆ ಕಟ್ಟುವುದು, ಮದುವೆ ಮಾಡುವುದು ಎರಡು ಸವಾಲಿನ ಕೆಲಸವೇ. ಅನೇಕರು ಮನೆ ಕಟ್ಟಲು, ಮದುವೆ ಮಾಡಲು ಸಾಲ ಮಾಡಿಕೊಂಡು ಕೈ ಸುಟ್ಟುಕೊಳ್ಳುತ್ತಾರೆ. ಅಂತವರ ಭಾರ ಇಳಿಸುವ ಕೆಲಸವನ್ನು ವೀರಮಹಾಂತ ಶಿವಾಚಾರ್ಯರು ಮಾಡಿದ್ದಾರೆ ಎಂದು ಹೇಳಿದರು.

ಬಡದಾಳದ ಡಾ| ಅಭಿನವ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ ಸೊಸೆ ಮಗಳಾಗಿ, ಅತ್ತೆ ತಾಯಿಯಾದಾಗ ಮತ್ತು ಗಂಡು ಚಟ ಬಿಟ್ಟು ಸರಳತೆ ರೂಢಿಸಿಕೊಂಡಾಗ ಯಾವ ಸಂಸಾರಗಳು ಬೀದಿಗೆ ಬರುವುದಿಲ್ಲ ಎಂದರು.

ಹಿರಿಯ ಸಿದ್ದರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ ಆಡಂಬರದ ಜೀವನಕ್ಕೆ ಮಾರು ಹೋಗದೆ, ಕಾಯಕ ತತ್ವ ಮೆಚ್ಚಿಕೊಂಡು ಸ್ವಾವಲಂಬಿಗಳಾಗಿ ಬದುಕು ನಡೆಸುವಂತೆ ವಧುವರರಿಗೆ ಸೂಚಿಸಿದರು.

Advertisement

ಮಠದ ಪೀಠಾಧೀಶರಾದ ವೀರಮಹಾಂತ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಪ್ರತಿವರ್ಷ ಮಠದ ಜಾತ್ರೆಯ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಬಡ ಜನರ ಕಲ್ಯಾಣ ಮಾಡಲಾಗುವುದು ಎಂದರು.

ಸಾಮೂಹಿಕ ವಿವಾಹದಲ್ಲಿ ಒಟ್ಟು 15 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟವು. ಶೀರಸ್ಯಾಡ, ಗುಳೇದಗುಡ್ಡ, ಗೌರ, ಅಳ್ಳಗಿ, ಸಾಗನೂರ, ಮಾಶಾಳ, ಚಿಂಚೋಳಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖಂಡ ಮಲ್ಲಿನಾಥ ಪಾಟೀಲ ಚಿಣಮಗೇರಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾದೇವ ಗುತ್ತೇದಾರ, ವನಿತಾ ಮಾಲೀಕಯ್ಯ ಗುತ್ತೇದಾರ, ಜಮುನಾ ಅಶೋಕ ಗುತ್ತೇದಾರ, ಸಿದ್ದು ಶಿರಸಗಿ, ಶರಣಪ್ಪ ಕಣ್ಮೇಶ್ವರ, ಡಾ| ಎಂ.ಎಸ್‌. ಜೋಗದ, ಶಿವಶರಣಪ್ಪ ಹಿರಾಪುರ, ಶಿವಪುತ್ರಪ್ಪ ಕರೂರ, ಬಾಬುರಾವ್‌ ಜಮಾದಾರ ಸೇರಿದಂತೆ ಸಾವಿರಾರು ಭಕ್ತರು, ವಧು-ವರರ ಸಂಬಂಧಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next