ಅಫಜಲಪುರ: ಕಳೆದ 33 ವರ್ಷಗಳ ಹಿಂದೆ ಜಿಲ್ಲೆಗೆ ಕನ್ನಡ ನುಡಿ ಜಾತ್ರೆ ನಡೆಸುವ ಅವಕಾಶ ಸಿಕ್ಕಿತ್ತು. ಅದಾದ ಬಳಿಕ 2020ನೇ ವರ್ಷಕ್ಕೆ ಮತ್ತೂಮ್ಮೆ ನುಡಿ ಜಾತ್ರೆ ನಡೆಸುವ ಅವಕಾಶ ಸಿಕ್ಕಿದ್ದು 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ ವಿಶ್ವವಿದ್ಯಾಲಯ ಆವರಣ ಸಜ್ಜುಗೊಂಡಿದ್ದು ತಾಲೂಕಿನ ಜನತೆ ನುಡಿ ಜಾತ್ರೆಗೆ ಸಂಭ್ರಮದಿಂದ ಸಜ್ಜಾಗಿದ್ದಾರೆ.
ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ಶತಮಾನಗಳಿಂದ ಅನೇಕ ಮಹನಿಯರು ಶ್ರಮಿಸಿದ್ದಾರೆ. ತ್ಯಾಗ, ಬಲಿದಾನ ಮಾಡಿದ್ದಾರೆ. ಅವರ ಸಾಧನೆ, ಶ್ರಮ, ತ್ಯಾಗ ಎಲ್ಲವನ್ನು ನೆನಪಿಸುವುದರ ಜೊತೆಗೆ ಭವಿಷ್ಯದಲ್ಲಿ ಕನ್ನಡ ಭಾಷೆ ಬೆಳವಣಿಗೆ, ಕನ್ನಡದ ಅಸ್ಮಿàತೆ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮ್ಮೇಳನ, ನುಡಿ ಜಾತ್ರೆಗಳನ್ನು ಆಯೋಜಿಸುತ್ತಿದೆ.
ಸದ್ಯ ಕಲಬುರಗಿಯಲ್ಲಿ ಫೆ. 5ರಿಂದ 7ರ ವರೆಗೆ ನಡೆಯುವ 85ನೇ ನುಡಿ ಜಾತ್ರೆ ಇತಿಹಾಸ ನಿರ್ಮಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪಣ ತೊಟ್ಟಿದೆ. ಅಲ್ಲದೇ ಎಲ್ಲ ರಾಜಕೀಯ ಗಣ್ಯರು, ಸಂಘ-ಸಂಸ್ಥೆಗಳ ಮುಖಂಡರು, ಕನ್ನಡಪರ ಹೋರಾಟಗಾರರು, ಭಾಷಾಭಿಮಾನಿಗಳು ಸಮ್ಮೇಳನದ ಯಶಸ್ವಿಗೆ ಕಂಕಣಬದ್ಧರಾಗಿದ್ದಾರೆ.
ಹೆಚ್ಚು ಜನ ಸಮ್ಮೇಳನದತ್ತ ಮುಖ: ಜನ ಸಮ್ಮೇಳನಕ್ಕೆ ಸ್ವಯಂಪ್ರೇರಿತರಾಗಿ ಭಾಗಿಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಗಡಿನಾಡ ಕನ್ನಡಿಗರಲ್ಲಿ ಮನೆ ಮಾಡಿದೆ ಹರ್ಷ: ಕಲಬುರಗಿ ಜಿಲ್ಲೆ ಮಹಾರಾಷ್ಟ್ರದ ಗಡಿ ಹಂಚಿಕೊಂಡಿದ್ದು, ಮರಾಠಿ ನೆಲವಾದ ಅಕ್ಕಲಕೋಟ, ಸೊಲ್ಲಾಪುರ, ಸಾಂಗಲಿ, ಮೀರಜ್, ಜತ್, ಕೊಲ್ಲಾಪುರ ಭಾಗಗಳು ಸೇರಿದಂತೆ ಅನೇಕ ಗಡಿಭಾಗದ ಜನ ನುಡಿ ಜಾತ್ರೆಗೆ ಬಂದು ಕನ್ನಡಮಯ ವಾತಾವರಣ ಸೃಷ್ಟಿಸಲು ಸಿದ್ಧರಾಗಿದ್ದಾರೆ.
ನಾನು ಅಕ್ಷರ ಕಲಿತಿಲ್ಲ. ಆದರೆ ಅನ್ನದ ಭಾಷೆ, ಅಮ್ಮನ ಭಾಷೆಯಾಗಿರುವ ಕನ್ನಡದ ಭಾಷಾಭಿಮಾನ ಎಲ್ಲರಿಗಿಂತ ತುಸು ಹೆಚ್ಚಾಗಿದೆ ಎಂದು ಎದೆ ತಟ್ಟಿ ಹೇಳಬಲ್ಲೆ. ಮೂರು ದಶಕದ ಬಳಿಕ ಕಲಬುರಗಿ ಜಿಲ್ಲೆಗೆ ನುಡಿ ಜಾತ್ರೆ ನಡೆಸುವ ಅವಕಾಶ ಸಿಕ್ಕಿದ್ದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಸಮ್ಮೇಳನದ ಯಶಸ್ವಿಗೆ ಟಂಟಂ ಚಾಲಕನಾದರೂ ಕೈಲಾದಷ್ಟು ಪ್ರಚಾರ ಸೇವೆ ಮಾಡುತ್ತಿದ್ದೇನೆ.
ಶರಣಬಸಪ್ಪ ಎಂ. ಸಿಂಗೆ,
ಟಂಟಂ ಚಾಲಕ
ಸಮ್ಮೇಳನದ ರಸೀದಿ ಸಿಗಲಿಲ್ಲ. ಆದರೂ ನಾನು ಸಮ್ಮೇಳನದಲ್ಲಿ ಖುಷಿಯಿಂದ ಪಾಲ್ಗೊಳ್ಳುತ್ತಿದ್ದೇನೆ. ಅಲ್ಲದೇ ಸಮ್ಮೇಳನಕ್ಕೆ ಬರುವ ಹೊರ ರಾಜ್ಯದ ಕನ್ನಡಭಿಮಾನಿಗಳಿಗೆ ಸಮ್ಮೇಳನದಲ್ಲಿ ಯಾವುದೇ ತೊಂದರೆಯಾಗದಂತೆ ಅವರ ಸೇವೆ ಮಾಡುವ ಮೂಲಕ ಯಶಸ್ವಿಗೆ ಶ್ರಮಿಸುತ್ತೇನೆ.
ಚನ್ನಬಸವ ದೊಡ್ಮನಿ,
ಪದವಿ ವಿದ್ಯಾರ್ಥಿ
ಮಲ್ಲಿಕಾರ್ಜುನ ಹಿರೇಮಠ