Advertisement

ಪದ್ಮ ದಳ್ಳುರಿಯ ರುದ್ರ ನರ್ತನ

09:35 AM Jan 25, 2018 | |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಆಣತಿಯಂತೆ ರಾಷ್ಟ್ರಾದ್ಯಂತ ಶುಕ್ರವಾರ (ಜ. 25) ಬಿಡುಗಡೆಯಾಗಲಿರುವ “ಪದ್ಮಾವತ್‌’ ಚಿತ್ರದ ವಿರುದ್ಧ ಸಿಡಿದೆದ್ದಿರುವ ಕರ್ಣಿ ಸೇನೆಯು ಹರ್ಯಾಣ, ಗುಜರಾತ್‌, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ತೀವ್ರ ದಾಂಧಲೆ ನಡೆಸಿದೆ. ಸುಪ್ರೀಂ ಕೋರ್ಟ್‌ ಆದೇಶಕ್ಕೂ ಮೊದಲು, ಇದೇ ರಾಜ್ಯಗಳಲ್ಲಿ ಈ ಚಿತ್ರ ನಿಷೇಧಕ್ಕೊಳಗಾಗಿತ್ತು. ಈ ನಾಲ್ಕೂ ರಾಜ್ಯಗಳಲ್ಲಿ ಬುಧವಾರ ಚಿತ್ರ ಬಿಡುಗಡೆ ವಿರುದ್ಧ ನಡೆದ ಪ್ರತಿಭಟನೆಗಳು ತಾರಕಕ್ಕೇರಿ, ಹಿಂಸಾಸ್ವರೂಪ ಪಡೆದಿವೆ. ಹಲವಾರು ಕಡೆ, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿವೆ. ಹೆದ್ದಾರಿಗಳ ಬಂದ್‌, ವಾಹನಗಳಿಗೆ ಬೆಂಕಿ ಹಚ್ಚಿದ, ಕಲ್ಲು ತೂರಾಟ ನಡೆಸಿದ ಪ್ರಕರಣಗಳು ನಡೆದಿವೆ. ಈ ನಾಲ್ಕು ರಾಜ್ಯಗಳಲ್ಲದೆ, ಮುಂಬಯಿ ಮತ್ತಿತರ ಪ್ರದೇಶಗಳಲ್ಲೂ ಹಿಂಸಾಚಾರ ಭುಗಿಲೆದ್ದಿದ್ದು ಚಿತ್ರ ನಿರ್ಮಾಪಕರನ್ನು, ವಿತರಕರನ್ನು, ಚಿತ್ರಮಂದಿರಗಳ ಮಾಲೀಕರಿಗೆ ಆತಂಕ ತಂದೊಡ್ಡಿವೆ. 

Advertisement

ದೀಪಿಕಾ ಮೂಗು ಕತ್ತರಿಸಿದರೆ ಬಹುಮಾನ!
ವಿವಾದಿತ ಸಿನೆಮಾದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಅವರ ಮೂಗು ಕತ್ತರಿಸಿದರೆ ನಗದು ಬಹುಮಾನ ನೀಡುವುದಾಗಿ ಕಾನ್ಪುರದ ಕ್ಷತ್ರಿಯ ಮಹಾಸಭಾ ಘೋಷಣೆ ಮಾಡಿದೆ. ಈ ಬಗ್ಗೆ ಕೋಟಿಗಟ್ಟಲೆ ರುಪಾಯಿ ಸಂಗ್ರಹ ಮಾಡಿಕೊಂಡಿ ದ್ದೇವೆ. ಯಾರಾದರೂ ಅವರ ಮೂಗು ಕತ್ತರಿಸಿದರೆ ಅದನ್ನು ನೀಡಲಿದ್ದೇವೆ ಎಂದು ಮಹಾಸಭಾದ ಅಧ್ಯಕ್ಷ ಗಜೇಂದ್ರ ಸಿಂಗ್‌ ರಜಾವಾತ್‌ ಹೇಳಿದ್ದಾರೆ.

ಶಾಲಾ ಬಸ್‌ ಮೇಲೆ ಕಲ್ಲು: ಈ ನಡುವೆ ಪ್ರತಿಭಟನಕಾರರು ಗುರುಗಾಂವ್‌ನಲ್ಲಿ ಶಾಲೆಯ ಬಸ್‌ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಬಸ್ಸಿನ ಗಾಜುಗಳನ್ನು ಪುಡಿಗುಟ್ಟಿ ದ್ದಾರೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಲಿಲ್ಲ.

ಎಲ್ಲೆಲ್ಲಿ ಏನೇನಾಯ್ತು? 
ರಾಜಸ್ಥಾನ: ರಾಜಸ್ಥಾನದಲ್ಲಿ ತಾರಕಕ್ಕೇರಿದ ಪ್ರತಿಭಟನೆಯಿಂದಾಗಿ ಭೀತಿ ಗೊಳ ಗಾಗಿರುವ ಅಲ್ಲಿನ ಚಿತ್ರ ವಿತರಕರು, “ಪದ್ಮಾವತ್‌’ ಚಿತ್ರವನ್ನು ವಿತರ ಣೆಗಾಗಿ ಕೊಳ್ಳದಿರಲು ನಿರ್ಧರಿಸಿದ್ದಾರೆ. ಪ್ರತಿಭಟನಕಾರರ ದಾಂಧಲೆ ಯಿಂ ದಾಗಿ ದಿಲ್ಲಿ-ಜೈಪುರ ಹೆದ್ದಾರಿ, ದಿಲ್ಲಿ-ಅಜ್ಮಿàರ್‌ ಹೆದ್ದಾರಿಗಳು ಸಂಪೂರ್ಣ ಬಂದ್‌ ಆಗಿದ್ದವು. ಸಿಕಾರ್‌ನಲ್ಲಿ ಬಸ್ಸೊಂದಕ್ಕೆ ಕಲ್ಲು ತೂರಾಟ ನಡೆಸಲಾಯಿತು. ರಾಣಿ ಪದ್ಮಾವತ್‌ ವಾಸವಿದ್ದ ಚಿತ್ತೂರು ಕೋಟೆಗೆ ಕರ್ಣಿ ಸೇನೆಯ ಕಾರ್ಯಕರ್ತರು ಪ್ರವೇಶಿಸಲು ವಿಫ‌ಲ ಯತ್ನ ನಡೆಸಿದ್ದರಿಂದಾಗಿ ಕೋಟೆಯ ದ್ವಾರಗಳನ್ನು ಮುಚ್ಚಿ, ಪ್ರವಾಸಿಗರ ಪ್ರವೇಶವನ್ನೂ ನಿರ್ಬಂಧಿಸಲಾಯಿತು. 

ಹರಿಯಾಣ: ಉಗ್ರ ಪ್ರತಿಭಟನೆಯ ಪರಿಣಾಮ ವಾಝೀರ್‌ಪುರ್‌-ಪಟೌಡಿ ರಸ್ತೆ ಬಂದ್‌ ಆಗಿತ್ತಲ್ಲದೆ, ಈ ರಸ್ತೆಯಲ್ಲಿ ಬಸ್ಸೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದರು. ಪ್ರತಿಭಟನೆಯ ಬಿಸಿ ಹತ್ತಿಕ್ಕಲು ಕ್ರಮ ಕೈಗೊಂಡಿರುವ ಇಲ್ಲಿನ ಆಡಳಿತ, “ಪದ್ಮಾವತ್‌’ ಪ್ರದರ್ಶನಗೊಳ್ಳುವ ಚಿತ್ರಮಂದಿರಗಳ ಸುತ್ತ 200 ಮೀ.ವರೆಗೆ ಯಾವುದೇ ಪ್ರತಿಭಟನೆಗಳಿಗೆ ರವಿವಾರದವರೆಗೆ ನಿರ್ಬಂಧ ವಿಧಿಸಿದೆ. ಗುರ್‌ಗಾಂವ್‌ನ ಎಲ್ಲಾ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಸಂಜೆ 7ಕ್ಕೆ ಮುಚ್ಚುವಂತೆ ಸೂಚಿಸಲಾಗಿದೆ. ರಾಜ್ಯದ ಚಿತ್ರ ಮಂದಿರಗಳ ಮಾಲಕರು ತಾವು “ಪದ್ಮಾವತ್‌’ ಚಿತ್ರದ ಪ್ರದರ್ಶನ ಮಾಡುವುದಿಲ್ಲವೆಂದು ಆಶ್ವಾಸನೆ ನೀಡಿದ್ದಾರೆ. 

Advertisement

ಗುಜರಾತ್‌: ಅಹ್ಮದಾಬಾದ್‌ನಲ್ಲಿ ಮಂಗಳವಾರ ರಾತ್ರಿಯಿಂದಲೇ ಹಿಂಸಾಚಾರ ಶುರುವಾಗಿದೆ. ಮಂಗಳವಾರ ರಾತ್ರಿಯೇ ಕೆಲ ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿರುವ ಕರ್ಣಿ ಸೇನೆಯು, 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿತ್ತು. ಕಾರುಗಳ ಗಾಜನ್ನು ಪುಡಿಪುಡಿ ಮಾಡಲಾಯಿತು. ಬುಧವಾರವೂ ಈ ದಾಂಧಲೆ ಮುಂದುವರಿದು, ಪೊಲೀಸರ ಲಾಠಿ ಚಾರ್ಜ್‌ಗೆ ಕಾರಣವಾಯಿತು. ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ, 50 ಜನರನ್ನು ಬಂಧಿಸಲಾಗಿದೆ. 

ಉತ್ತರ ಪ್ರದೇಶ: ಲಕ್ನೋ, ಮುಜಪರ್‌ ನಗರ, ಕಾನ್ಪುರದ‌ಲ್ಲಿ ಉಗ್ರ ಪ್ರತಿಭಟನೆಗಳು ನಡೆದಿವೆ. ಕಾನ್ಪುರದ ಮಲ್ಟಿಫ್ಲೆಕ್ಸ್‌ ಒಂದರ ಮೇಲೆ ದಾಳಿ ನಡೆಸಿದ ಕರ್ಣಿ ಸೇನೆ ಕಾರ್ಯಕರ್ತರು, ಅಲ್ಲಿ ಬಿಡುಗಡೆಯಾಗಬೇಕಿದ್ದ ಪದ್ಮಾವತ್‌ ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿ, ಅಲ್ಲಿನ ಪೀಠೊಪಕರಣಗಳನ್ನು ಧ್ವಂಸಗೊಳಿಸಿದರು. ಇದನ್ನು ತಡೆಯಲು ಬಂದ ಅಲ್ಲಿನ ಸಿಬಂದಿ ಮೇಲೂ ಹಲ್ಲೆ ಮಾಡಿದರು. ಇಟ್ಟಾವದಲ್ಲಿನ  ಚಿತ್ರಮಂದಿರಗಳ ಮೇಲೂ ದಾಳಿಯಾಗಿ, ವಾಹನಗಳಿಗೆ ಬೆಂಕಿ ಹಚ್ಚಿ ಉಗ್ರ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಯಿತು. ಲಕ್ನೋದಲ್ಲಿನ ಮಲ್ಟಿಫ್ಲೆಕ್ಸ್‌ ಮುಂದೆ ಪ್ರತಿಭಟನೆ ನಡೆಸಿದ ಕೆಲ ಪ್ರತಿಭಟನಕಾರರು, ತಾವು ಕರ್ಣಿ ಸೇನೆಯವರಲ್ಲ ಎಂದರಾದರೂ “ಪದ್ಮಾವತ್‌’ ಪ್ರದರ್ಶನವಾಗುವುದು ಬೇಡವೆಂದು ಆಗ್ರಹಿಸಿದರು. 

ಮುಂಬಯಿಯಲ್ಲೂ ಬಿಸಿ: ವಾಣಿಜ್ಯ ನಗರಿ ಮುಂಬಯಿನಲ್ಲೂ ಗಲಭೆ ನಡೆಸಿದ ಕರ್ಣಿ ಸೇನೆಯ ಕಾರ್ಯಕರ್ತರು, ಚಿತ್ರ ಬಿಡುಗಡೆ ಯಾಗಬೇಕಿರುವ ಚಿತ್ರಮಂದಿರಗಳಿಗೆ ನುಗ್ಗಿ ದಾಂಧಲೆ ನಡೆಸಿದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ಣಿ ಸೇನೆಯ 30 ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. 

ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿರಲು ಕಾರ್ಣಿ ಸೇನೆ ಪಟ್ಟು
ಹಲವೆಡೆ ದಾಳಿ, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

Advertisement

Udayavani is now on Telegram. Click here to join our channel and stay updated with the latest news.

Next