ನವದೆಹಲಿ: ಕೇಂದ್ರ ಸರ್ಕಾರ ವಂದೇ ಭಾರತ್ ಟ್ರೈನುಗಳನ್ನು ಓಡಿಸುವ ಮೂಲಕ ಭಾರತೀಯ ರೈಲ್ವೆಯಲ್ಲಿ ಭಾರೀ ಸುಧಾರಣೆ ಮಾಡಿದೆ. ಇದೀಗ ಇನ್ನೊಂದು ಸಂತೋಷದ ಸುದ್ದಿಯನ್ನು ಪ್ರಯಾಣಿಕರಿಗೆ ನೀಡಿದೆ. ಅದು ವಂದೇ ಮೆಟ್ರೋ!
100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿರುವ ಪ್ರಮುಖ ನಗರಗಳನ್ನು ಈ ವಂದೇ ಮೆಟ್ರೋ ಮೂಲಕ ಬೆಸೆಯಲಾಗುತ್ತದೆ. ಕಡಿಮೆ ಬೆಲೆಯಲ್ಲಿ, ಕಡಿಮೆ ಸಮಯದಲ್ಲಿ ಪ್ರಯಾಣ ಮುಗಿಯುವಂತೆ ಮಾಡುವುದು ಕೇಂದ್ರದ ಯೋಜನೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಏನಿದು ವಂದೇ ಮೆಟ್ರೋ?
ವಂದೇ ಭಾರತ್‌ನ ಇನ್ನೊಂದು ಮುಖವೇ ವಂದೇ ಮೆಟ್ರೊ. ಮೆಟ್ರೊ ಮಾದರಿಯ ಈ ಟ್ರೈನುಗಳನ್ನು ದಿನವೊಂದಕ್ಕೆ ಐದಾರು ಬಾರಿ 100 ಕಿ.ಮೀ. ಅಂತರದಲ್ಲಿರುವ ಪ್ರಮುಖ ನಗರಗಳ ನಡುವೆ ಓಡಿಸಲಾಗುತ್ತದೆ. ವಂದೇ ಭಾರತ್ ಟ್ರೈನುಗಳನ್ನು ಜಾಸ್ತಿ ಅಂತರ ಹೊಂದಿರುವ ನಗರಗಳ ನಡುವೆ ಓಡಿಸಲಾಗುತ್ತಿದೆ. ಇಲ್ಲಿ ಎರಡು ನಗರಗಳ ನಡುವಿನ ಕನಿಷ್ಠ ಅಂತರ 500 ಕಿ.ಮೀ. ಉತ್ತರಪ್ರದೇಶದ ಕಾನ್ಪುರ ಮತ್ತು ಲಕ್ನೋದ ನಡುವೆ ಮೊದಲ ವಂದೇ ಮೆಟ್ರೊ ಸಂಚರಿಸುವ ಸಾಧ್ಯತೆಯಿದೆ. ಈ ಟ್ರೈನುಗಳು ಡಿಸೆಂಬರ್ ಅಂತ್ಯದ ಹೊತ್ತಿಗೆ ಸಿದ್ಧವಾಗಬಹುದು. ಪ್ರತಿಯೊಂದೂ 8 ಕೋಚ್‌ಗಳನ್ನು ಹೊಂದಿರುವುದು ಖಚಿತ.
ಜಾರಿ ಹೇಗೆ?
ಈಗಾಗಲೇ ಮಾಮೂಲಿ ಟ್ರೈನುಗಳು ಸಂಚರಿಸುತ್ತಿರುವ ಎರಡು ನಗರಗಳ ನಡುವೆಯೇ ವಂದೇ ಮೆಟ್ರೊ ಕೂಡ ಸಂಚರಿಸುವ ಸಾಧ್ಯತೆಯಿದೆ. ಇದಕ್ಕೆಂದೇ ನೂತನ ಮಾರ್ಗಗಳನ್ನು ಮಾಡುವ ಸುಳಿವೇನೂ ಸಿಕ್ಕಿಲ್ಲ. ಇದರಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಮುಖ್ಯವಾಗಿ ವಿದ್ಯಾರ್ಥಿಗಳಿಗ ಸಂಚಾರ ಸುಲಭವಾಗುತ್ತದೆ.