Advertisement

2 ದಶಕದ ಬಳಿಕ ಕರ್ನಾಟಕದ ವಿದ್ಯಾರ್ಥಿ ಐಎಂಒಗೆ ಆಯ್ಕೆ

01:04 PM May 23, 2017 | Team Udayavani |

ಮಂಗಳೂರು: ಬ್ರೆಝಿಲ್‌ನ ರಿಯೊ ಡಿ ಜನೈರೋದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮ್ಯಾತಮೆಟಿಕ್ಸ್‌ ಒಲಿಂಪಿಯಾಡ್‌ (ಐಎಂಒ)-2017ಗೆ 21 ವರ್ಷಗಳ ಬಳಿಕ ಮೊದಲ ಬಾರಿಗೆ ರಾಜ್ಯದಿಂದ ಮಂಗಳೂರಿನ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಲರ್ನಿಂಗ್‌(ಸಿಎಫ್‌ಎಎಲ್‌) ನಲ್ಲಿ ತರಬೇತಿ ಪಡೆದ ಆದಿತ್ಯ ಪ್ರಕಾಶ್‌ ಆಯ್ಕೆಯಾಗಿದ್ದಾರೆ. ದೇಶದಿಂದ ಒಟ್ಟು 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಆ ಪಟ್ಟಿಯಲ್ಲಿ ದ.ಕ. ಜಿಲ್ಲೆಯ ವಿದ್ಯಾರ್ಥಿಯೂ ಇದ್ದಾರೆ.

Advertisement

100 ದೇಶ – 400 ಸ್ಪರ್ಧಿಗಳು
ಈ ಕುರಿತು ನಗರದ ಸಿಎಫ್‌ಎಎಲ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಂಸ್ಥೆಯ ಪ್ರೋಗ್ರಾಮ್‌ ಕೊ-ಆರ್ಡಿನೇಟರ್‌ ಸೆವ್ರಿನ್‌ ರೊಸಾರಿಯೊ ಮಾತನಾಡಿ, ಗಣಿತಕ್ಕೆ ಸಂಬಂಧಪಟ್ಟಂತೆ ಜಾಗತಿಕವಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಸುಮಾರು 100 ದೇಶಗಳಿಂದ 400 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಜುಲೈ 17ರಿಂದ 23ರ ವರೆಗೆ ಈ ಸ್ಪರ್ಧೆ ನಡೆಯಲಿದೆ ಎಂದರು.

ಸ್ಪರ್ಧೆಯ ಆಯ್ಕೆಯ ಕುರಿತಂತೆ ಪ್ರಥಮ ಹಂತವಾಗಿ ಸುಮಾರು 50,000 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಆಯ್ಕೆಯಾದ ಸುಮಾರು 900 ವಿದ್ಯಾರ್ಥಿಗಳನ್ನು 2ನೇ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. 3ನೇ ಹಂತದಲ್ಲಿ 35ರಿಂದ 50 ವಿದ್ಯಾರ್ಥಿಗಳನ್ನು ಹೋಮಿ ಭಾಭಾ ಸೆಂಟರ್‌ ಫಾರ್‌ ಸೈನ್ಸ್‌ ಎಜುಕೇಶನ್‌ ಆಯ್ಕೆ ಮಾಡಿದ್ದು, ಅದರಲ್ಲಿ 6 ಮಂದಿಯನ್ನು ಐಎಂಒಗೆ ಆಯ್ಕೆ ಮಾಡಲಾಗಿದೆ ಎಂದರು.

ಚಿನ್ನ ಗೆಲ್ಲುವ ವಿಶ್ವಾಸ
ಸಿಎಫ್‌ಎಎಲ್‌ನ ಗಣಿತ ಪ್ರಾಧ್ಯಾಪಕ ಡಾ| ಶ್ರೀಕಾಂತ್‌ ಪೈ ಮಾತನಾಡಿ, ಐಎಂಒಗೆ ಆಯ್ಕೆಯಾಗಿರುವ ಆದಿತ್ಯ ಅವರು ಸದಾ ಭಿನ್ನವಾಗಿ ಯೋಚಿಸುವ ವಿದ್ಯಾರ್ಥಿ. ಅವರು ಗಣಿತದ ಯಾವುದೇ ಸಮಸ್ಯೆಯನ್ನು ತತ್‌ಕ್ಷಣದಲ್ಲಿ ಪರಿಹರಿಸುತ್ತಾರೆ. ಈ ಬಾರಿ ಆದಿತ್ಯ ಪ್ರಕಾಶ್‌ ಚಿನ್ನ ಗೆಲ್ಲುವ ಪೂರ್ಣ ವಿಶ್ವಾಸವಿದೆ. 21 ವರ್ಷಗಳ ಹಿಂದೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಅಜಯ್‌ ರಾಮದಾಸ್‌ ಅವರು ಚಿನ್ನದ ಪದಕ ಗೆದ್ದಿದ್ದು, ಪ್ರಸ್ತುತ ಅವರು ವಿಶ್ವದ ಪ್ರತಿಷ್ಠಿತ ವಿವಿಯೊಂದರಲ್ಲಿ ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ರತಿಷ್ಠಿತ ಗಣಿತ ತಜ್ಞರೆಲ್ಲರೂ ಕೂಡ ಐಎಂಒಗೆ ಆಯ್ಕೆಯಾದವರು ಎಂಬುದು ವಿಶೇಷವಾಗಿದೆ.

ಚೆನ್ನೈಯಲ್ಲಿ  ವ್ಯಾಸಂಗ
ಚೀನ ದೇಶವು ಈ ಸ್ಪರ್ಧೆಯಲ್ಲಿ ಪ್ರತಿ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದರಲ್ಲಿ ಭಾರತಕ್ಕೆ 2012ರ ಬಳಿಕ ಯಾವುದೇ ಚಿನ್ನದ ಪದಕ ಬಂದಿಲ್ಲ. ಸ್ಪರ್ಧೆಗೆ ಆಯ್ಕೆಯಾಗುವ 3ನೇ ಹಂತದ ಐಎಂಒ ಟ್ರೈನಿಂಗ್‌ ಕ್ಯಾಂಪ್‌ನಲ್ಲಿ ಭಾಗವಹಿಸುವ 30 ವಿದ್ಯಾರ್ಥಿಗಳಿಗೆ ಚೆನ್ನೈ ಮ್ಯಾತಮೆಟಿಕಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾರ್ಥಿ ವೇತನದೊಂದಿಗೆ ಉಚಿತ ಶಿಕ್ಷಣ ಲಭ್ಯವಾಗುತ್ತದೆ. ಆದಿತ್ಯ ಪ್ರಕಾಶ್‌ ಅವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ದ್ವಿತೀಯ ಪಿಯುಸಿ ಶಿಕ್ಷಣ ಮುಗಿಸಿ ಬಳಿಕ ಚೆನ್ನೈಯಲ್ಲಿ ವ್ಯಾಸಂಗಕ್ಕೆ ಅವಕಾಶ ಪಡೆಯಲಿದ್ದಾರೆ.

Advertisement

ಆದಿತ್ಯ ಪ್ರಕಾಶ್‌ ತನ್ನದೇ ಆಸಕ್ತಿಯಿಂದ ಸಿಎಫ್‌ಎಎಲ್‌ ಕೋಚಿಂಗ್‌ ಸೆಂಟರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಜಪಾನ್‌ನಲ್ಲಿ ನಡೆಯುತ್ತಿರುವ ಫಕುರಾ ತರಬೇತಿಯಲ್ಲಿ ಭಾಗವಹಿಸಿದ್ದು, ಐಎಂಒಗೆ ಆಯ್ಕೆಯಾಗಿರುವ ಕ್ರೆಡಿಟ್‌ ಸಿಎಫ್‌ಎಎಲ್‌ ಸಲ್ಲಬೇಕು ಎಂದು ಆದಿತ್ಯ ಪ್ರಕಾಶ್‌ ತಂದೆ, ಕಾರ್ಪೊರೇಶನ್‌ ಬ್ಯಾಂಕಿನ ಅಧಿಕಾರಿ ಓಂಪ್ರಕಾಶ್‌ ಬನ್ವಾìಲ್‌ ಸಂತಸ ವ್ಯಕ್ತಪಡಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸಿಎಫ್‌ಎಎಲ್‌ನ ಪ್ರೋಗ್ರಾಮ್‌ ಕೊ-ಆರ್ಡಿನೇಟರ್‌ ವಿಜಯ್‌ ಮೊರಾಸ್‌, ಪ್ರಾಧ್ಯಾಪಕ ಪ್ರೊ| ಪಿ.ಎನ್‌. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next