ಹುಬ್ಬಳ್ಳಿ: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಮೂರು ಹೋಳಾಗಲಿದೆ. ಸಿದ್ದರಾಮಯ್ಯ ನೇತೃತ್ವದ ತಂಡ, ಖರ್ಗೆ ಹಾಗೂ ಪರಮೇಶ್ವರ ನೇತೃತ್ವದ ತಂಡ ಹಾಗೂ ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ ನೇತೃತ್ವದ ತಂಡ ಎಂದು ವಿಭಜನೆಗೊಳ್ಳುವುದು ಖಚಿತ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಸ್.ಎಂ. ಕೃಷ್ಣ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿದ್ದ ಡಿ.ಕೆ. ಶಿವಕುಮಾರ ಅಲ್ಲದೆ ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ ತಾವು ಸಿಎಂ ಹುದ್ದೆ ಆಕಾಂಕ್ಷಿಗಳೆಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿ ಹುದ್ದೆಗೇರಬೇಕೆಂಬ ಅಭಿಲಾಷೆಯನ್ನು ತಮ್ಮ ಶಿಷ್ಯರ ಮೂಲಕ ಹೊರ ಹಾಕುತ್ತಿದ್ದಾರೆ. ಇನ್ನೊಂದೆಡೆ ದಲಿತ ಸಿಎಂ ಆಗಬೇಕೆನ್ನುತ್ತಿರುವ ಪರಮೇಶ್ವರ ಹಾಗೂ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ಕುರ್ಚಿ ಕನಸು ಕಾಣುತ್ತಿದ್ದಾರೆ. ಅವಕಾಶ ಸಿಕ್ಕರೆ ತಾನೂ ಸಿಎಂ ಆಗಬೇಕೆಂದು ಎಚ್.ಡಿ. ರೇವಣ್ಣ ಬಯಕೆ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೂ 4 ವರ್ಷ ಕಾಲಾವಕಾಶವಿದ್ದರೂ ಮುಖಂಡರು ಈಗಲೇ ಸಿಎಂ ಹುದ್ದೆ ಕನಸು ಕಾಣುತ್ತಿರುವುದು ಯಾಕೋ ಗೊತ್ತಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಪರಸ್ಪರ ಬೆನ್ನಿಗೆ ಚೂರಿ ಹಾಕಿದ್ದಾರೆ. ಅವಧಿ ಪೂರ್ಣಗೊಳಿಸುವ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ಅನುಮಾನ ಕಾಡುತ್ತಿದೆ. ಆದ್ದರಿಂದ ಕೆಲವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬೇರೆ ಪಕ್ಷಗಳ ಕಡೆಗೆ ನೋಡುತ್ತಿದ್ದಾರೆ. ನಾವು ಆಪರೇಶನ್ ಕಮಲ ಮಾಡುವುದಿಲ್ಲ. ಶಾಸಕರು ತಾವಾಗಿಯೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು.
ಎಚ್. ವಿಶ್ವನಾಥ ಅವರು ಸಿದ್ದರಾಮಯ್ಯ ಕುರಿತು ನೀಡಿದ ಹೇಳಿಕೆ ಅರಗಿಸಿಕೊಳ್ಳಲು ಸಿದ್ದರಾಮಯ್ಯ ಬೆಂಬಲಿಗರಿಗೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಭೂ ಮಾಫಿಯಾಕ್ಕೆ ಬೆಂಬಲ ನೀಡುವ ಸಿದ್ದರಾಮಯ್ಯ ತಮ್ಮನ್ನು ದೇವರಾಜ ಅರಸು ಅವರೊಂದಿಗೆ ಹೋಲಿಸಿಕೊಳ್ಳುತ್ತಿರುವುದು ಸರಿಯಲ್ಲ. ಎಚ್. ವಿಶ್ವನಾಥ ಹೇಳಿಕೆಗೆ ನನ್ನ ಸಹಮತವಿದೆ ಎಂದರು.
Advertisement
ಕಾಂಗ್ರೆಸ್ ಮುಖಂಡರ ಹೇಳಿಕೆಗಳು ಆ ಪಕ್ಷ ಹೋಳಾಗುವುದರ ಮುನ್ಸೂಚನೆಯಾಗಿವೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸಲು ಅವಕಾಶ ನೀಡುತ್ತಿಲ್ಲ ಎಂದರು.
Related Articles
Advertisement
ಸಂಸದ ಪ್ರಹ್ಲಾದ ಜೋಶಿ ಹಾಗೂ ಎಸ್.ಐ. ಚಿಕ್ಕನಗೌಡರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಜೆಪಿ-ಬಿಜೆಪಿ ಭೇದ ಭಾವವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ದಲಿತರನ್ನು ಮುಖ್ಯಮಂತ್ರಿ ಮಾಡುವ ಮನಸ್ಸಿದ್ದರೆ ತಾವು ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳದೇ ಖರ್ಗೆ ಅವರಿಗೆ ಬಿಟ್ಟುಕೊಡಬೇಕಿತ್ತು. ಕಾಂಗ್ರೆಸ್-ಜೆಡಿಎಸ್‌ನವರು ದಲಿತ ಸಿಎಂ ಡ್ರಾಮಾ ನಡೆಸಿದ್ದಾರೆ.
•ಗೋವಿಂದ ಕಾರಜೋಳ, ಮಾಜಿ ಸಚಿವ