ಚೆನ್ನೈ: ಕೊನೆಗೂ ತಮಿಳುನಾಡಿನಲ್ಲಿ ಪಥಸಂಚಲನ ನಡೆಸಲು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮದ್ರಾಸ್ ಉಚ್ಚ ನ್ಯಾಯಾಲಯದ ಅನುಮತಿ ದೊರೆತಿದೆ.
ತಮಿಳುನಾಡಿನ 51 ಸ್ಥಳಗಳಲ್ಲಿ ಆರೆಸ್ಸೆಸ್ ನಡೆಸಲು ಉದ್ದೇಶಿಸಿರುವ ಪಥಸಂಚಲನ ಮತ್ತು ಸಾರ್ವಜನಿಕ ಸಭೆಯನ್ನು ಅಕ್ಟೋಬರ್ 2ರ ಬದಲಾಗಿ ನವೆಂಬರ್ 6ರಂದು ನಡೆಸುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಜತೆಗೆ, ಈ ಕಾರ್ಯಕ್ರಮ ಏರ್ಪಡಿಸಲು ಅನುಮತಿ ನೀಡಬೇಕು ಹಾಗೂ ಅ.31ರೊಳಗಾಗಿ ಈ ಕುರಿತು ನಮಗೆ ಮಾಹಿತಿ ನೀಡಬೇಕು ಎಂದು ತ.ನಾಡು ಸರಕಾರ ಮತ್ತು ಪೊಲೀಸರಿಗೆ ಸೂಚಿಸಿದೆ.
ಒಂದು ವೇಳೆ, ಸರಕಾರ ಅನುಮತಿ ನೀಡದೇ ಇದ್ದರೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
“ಅಕ್ಟೋಬರ್ 2ರಂದು ಗಾಂಧಿ ಜಯಂತಿ ಇರುವ ಕಾರಣ ನೀವು ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನೀಡುತ್ತಿಲ್ಲ ಅಲ್ಲವೇ? ಹಾಗಿದ್ದರೆ, ಅ.2ರ ಬದಲಾಗಿ ನ.6ರಂದು ಕಾರ್ಯಕ್ರಮ ನಡೆಯಲಿ’ ಎಂದು ಕೋರ್ಟ್ ಹೇಳಿತು. ಜತೆಗೆ ರ್ಯಾಲಿ ಮತ್ತು ಸಾರ್ವಜನಿಕ ಸಭೆ ನಡೆಸಲು ಸೆ.22ರಂದು ನಾವು ಹಾಕಿದ್ದ ಷರತ್ತುಗಳು ನ.6ರ ರ್ಯಾಲಿಗೂ ಅನ್ವಯವಾಗುತ್ತದೆ ಎಂದು ಆರೆಸ್ಸೆಸ್‌ಗೆ ಸೂಚಿಸಿದೆ.
ಅ.2ರ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.