ಕೋಲ್ಕತಾ: ಬಂಗಾಳ ಕೊಲ್ಲಿಯಲ್ಲಿ ಸುಮಾರು ಐದು ದಿನಗಳ ಕಾಲ ಆಹಾರ, ನೀರು ಹಾಗೂ ಜೀವರಕ್ಷಕ ಜಾಕೆಟ್ ಇಲ್ಲದೇ ಬರೇ ಬಿದಿರು ಕೋಲನ್ನು ಅಪ್ಪಿಹಿಡಿದು ತೇಲಾಡುತ್ತಿದ್ದ ವ್ಯಕ್ತಿಯೊಬ್ಬರು ಬಾಂಗ್ಲಾ ಹಡಗಿನ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ.
ಜುಲೈ 6ರಂದು ಬಂಗಾಳ ಕೊಲ್ಲಿಯಲ್ಲಿ ರವೀಂದ್ರನಾಥ್ ದಾಸ್ ಎಂಬವರು ಮೀನು ಹಿಡಿಯುತ್ತಿದ್ದಾಗ ಬಿರುಗಾಳಿ ಮತ್ತು ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮುಳುಗಿ ಹೋಗಿತ್ತು.
ಐದು ದಿನಗಳ ಕಾಲ ಬಿದಿರು ಕೋಲನ್ನೇ ಹಿಡಿದು ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದಾಸ್ ಅವರನ್ನು ಬಾಂಗ್ಲಾದ ಎಂವಿ ಜಾವದ್ ಹಡಗಿನ ಸಿಬ್ಬಂದಿಗಳು ಗಮನಿಸುವ ಮೂಲಕ ರಕ್ಷಿಸಿದ್ದರು ಎಂದು ವರದಿ ತಿಳಿಸಿದೆ.
ದಾಸ್ ಅವರನ್ನು ಕೋಲ್ಕತಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ರವೀಂದ್ರನಾಥ್ ಪಶ್ಚಿಮಬಂಗಾಳದ 24 ಪರಾಗಣ್ ಜಿಲ್ಲೆಯ ಕಾಕ್ಡ್ ವಿಪ್ ನ ನಿವಾಸಿಯಾಗಿದ್ದಾರೆ.
ಜುಲೈ 6ರಂದು ನಯಾನ್ ಎಂಬ ಹಡಗಿನಲ್ಲಿ 14 ಮಂದಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬಿರುಗಾಳಿ, ಅಲೆಗಳ ಹೊಡೆತಕ್ಕೆ ಸಿಲುಕಿ ಹಡಗು ಮುಳುಗಿ ಹೋಗಿತ್ತು. ಇದರಲ್ಲಿ 13 ಮಂದಿ ಸಾವನ್ನಪ್ಪಿದ್ದು, ರವೀಂದ್ರನಾಥ್ ಮಾತ್ರ ಬದುಕಿ ಉಳಿದಿದ್ದಾರೆ ಎಂದು ವರದಿ ವಿವರಿಸಿದೆ.
ನಾನು ಬಿದಿರಿನ ಕೋಲನ್ನು ಹಿಡಿದು ನೀರಿನಲ್ಲಿ ತೇಲುತ್ತಿರುವುದು ಮಾತ್ರ ನೆನಪಿದೆ. ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಾಂಗ್ಲಾದೇಶ ದಾಸ್ ಅವರನ್ನು ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ.