ಮೀರತ್: ನಿಜವಾಗಿ ನೇಮಕ ಆಗದಿದ್ದರೂ ಉತ್ತರ ಪ್ರದೇಶದ ಯುವಕನೊಬ್ಬ 4 ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ, ಸಂಬಳ ಕೂಡ ಪಡೆದಿರುವ ಘಟನೆ ವರದಿಯಾಗಿದೆ.
ಗಾಜಿಯಾಬಾದ್ ಮೂಲದ ಮನೋಜ್ ಕುಮಾರ್ ಎಂಬಾತ 108 ಇನ್‌ಫ್ಯಾಂಟ್ರಿ ಟೆರಿಟೋರಿಯಲ್ ಆರ್ಮಿಯಲ್ಲಿ ನಾಲ್ಕು ತಿಂಗಳು ಕೆಲಸ ಮಾಡಿದ್ದು, ಮಾಸಿಕ 12,500 ರೂ. ವೇತನವನ್ನೂ ಪಡೆದಿದ್ದಾನೆ.
ಭಾರತೀಯ ಸೇನೆಯ ನಿವೃತ್ತ ಯೋಧ ರಾಹುಲ್ ಸಿಂಗ್ ಎಂಬಾತ 16 ಲಕ್ಷ ರೂ. ಲಂಚ ಪಡೆದು ಮನೋಜ್ ಕುಮಾರ್‌ಗೆ ಜುಲೈನಲ್ಲಿ ಸೇನೆಯ ನಕಲಿ ನೇಮಕ ಪತ್ರ ನೀಡಿದ್ದ. ಅನಂತರ ಮುಂದೆ ನಕಲಿ ಐಡಿ ಕಾರ್ಡ್ ಕೂಡ ಒದಗಿಸಿದ್ದ. ಜತೆಗೆ ರಾಹುಲ್ ಸೇನಾಧಿಕಾರಿಯಂತೆ ಪೋಸ್ ಕೊಡುತ್ತಿದ್ದ. ಸೇನಾ ಸಮವಸ್ತ್ರ ಧರಿಸಿಕೊಂಡು ಸೇನಾಶಿಬಿರಕ್ಕೂ ಕರೆಸಿಕೊಂಡಿದ್ದ. ಈ ಮೂಲಕ ಮನೋಜ್ ಕುಮಾರ್‌ಗೆ ಅನುಮಾನ ಬರದಂತೆ ವರ್ತಿಸಿದ್ದ.
ಇತ್ತೀಚೆಗೆ, ಇತರ ಯೋಧರು ನೇಮಕ ಪತ್ರದ ಕುರಿತು ಅನುಮಾನ ವ್ಯಕ್ತಪಡಿಸಿದ ಮೇಲೆಯೇ, ಮನೋಜ್ ಕುಮಾರ್‌ಗೆ ತಾನು ಯಾಮಾರಿದ್ದು ಗೊತ್ತಾಗಿದೆ. ಕೂಡಲೇ ಅವರು ಮೀರತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Related Articles
ನೇಮಕ ಹಗರಣ ಹಿನ್ನೆಲೆಯಲ್ಲಿ ರಾಹುಲ್ ಸಿಂಗ್ ಮತ್ತು ಆತನ ಸಹಚರ ಬಿಟ್ಟು ಸಿಂಗ್‌ನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಸಹಚರ ರಾಜಾ ಸಿಂಗ್ ತಲೆಮರೆಸಿಕೊಂಡಿದ್ದಾನೆ. ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.