Advertisement

ಸಂಕ್ರಾಂತಿ ಬಳಿಕ ಎಚ್‌ಡಿಡಿ-ಎಚ್‌ಡಿಕೆ ತಿಂಗಳಲ್ಲಿ ಒಂದು ವಾರ ಮೈಸೂರಿಗೆ

11:25 AM Dec 26, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಸ್ಪರ್ಧೆಯೊಡ್ಡಲು ಜೆಡಿಎಸ್‌ ನಿರ್ಧರಿಸಿದೆ.

Advertisement

ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ಚಾಮುಂಡೇಶ್ವರಿ ಹಾಗೂ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆಗಿಳಿಯಲಿರುವ ವರುಣಾ ವಿಧಾನಸಭೆ ಕ್ಷೇತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ಮೈಸೂರು ಜಿಲ್ಲೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ.

ಇದಕ್ಕಾಗಿ ಸಂಕ್ರಾಂತಿ ನಂತರ ಸತತ ಮೂರು ತಿಂಗಳ ಕಾಲ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಂಗಳಲ್ಲಿ ಒಂದು ವಾರ ಮೈಸೂರಿನಲ್ಲೇ ಮೊಕ್ಕಾಂ ಹೂಡಲಿದ್ದಾರೆ.

ಚಾಮುಂಡೇಶ್ವರಿ-ವರುಣಾ ಸೇರಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜತೆ ಫ್ರೆಂಡ್ಲಿ ಫೈಟ್‌ ಸಾಧ್ಯತೆಯಿದ್ದು, ಈ ಕುರಿತು ಬಿಜೆಪಿಯ ಶ್ರೀನಿವಾಸಪ್ರಸಾದ್‌ ಜತೆ ಈಗಾಗಲೇ ಜೆಡಿಎಸ್‌ ಮಾತುಕತೆ ನಡೆಸಿದೆ. ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರದೂ ಮೌಖೀಕ ಸಮ್ಮತಿ ದೊರೆತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಈ ಹಿಂದೆ ಸಿದ್ದರಾಮಯ್ಯ ಅವರು ಜೆಡಿಎಸ್‌ ತ್ಯಜಿಸಿ ಎಬಿಪಿಜೆಡಿ ರಚಿಸಿಕೊಂಡು ನಂತರ ಕಾಂಗ್ರೆಸ್‌ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಅವರಿಗೆ ತೀರಾ ಪ್ರಯಾಸದ ಜಯ ಲಭಿಸಿತ್ತು. ಆಗ ಕಾಂಗ್ರೆಸ್‌ನಲ್ಲಿದ್ದ ಶ್ರೀನಿವಾಸಪ್ರಸಾದ್‌, ದಿ.ಮಹದೇವ್‌, ಎಚ್‌.ವಿಶ್ವನಾಥ್‌, ವಿ.ಸೋಮಣ್ಣ , ನಿವೃತ್ತ ಐಪಿಎಸ್‌ ಅಧಿಕಾರಿ ರೇವಣಸಿದ್ಧಯ್ಯ ಅವರು ಸಿದ್ದರಾಮಯ್ಯ ಗೆಲುವಿಗೆ ಸಾಥ್‌ ನೀಡಿದ್ದರು.

Advertisement

ಆದರೆ, ಇದೀಗ ಶ್ರೀನಿವಾಸಪ್ರಸಾದ್‌, ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ ತ್ಯಜಿಸಿದ್ದಾರೆ. ಇನ್ನು ಸೋಮಣ್ಣ ಹಾಗೂ ರೇವಣಸಿದ್ಧಯ್ಯ ಅವರೂ ಕಾಂಗ್ರೆಸ್‌ನಲ್ಲಿಲ್ಲ. ಆದ್ದರಿಂದ ಸಿದ್ದರಾಮಯ್ಯನವರು ಹೊಸ ಕಾರ್ಯತಂತ್ರ ರೂಪಿಸಬೇಕಾಗಿದೆ. 

ಮೈಸೂರು ವ್ಯಾಪ್ತಿಗೆ ಸೇರಿದ ಚಾಮುಂಡೇಶ್ವರಿ, ವರುಣಾ, ಕೆ.ಆರ್‌.ನಗರ, ಹುಣಸೂರು, ಪಿರಿಯಾಪಟ್ಟಣ, ಟಿ.ನರಸೀಪುರ, ಎಚ್‌.ಡಿ.ಕೋಟೆ, ನಂಜನಗೂಡು, ಚಾಮರಾಜ, ನರಸಿಂಹರಾಜ, ಕೃಷ್ಣರಾಜ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ನೀಡುವ ಸಲುವಾಗಿಯೇ ಮುಂದಿನ ವಾರ ಮೂರು ದಿನ ಕ್ಷೇತ್ರವಾರು ನಿರಂತರ ಸಭೆಯನ್ನು ಜೆಡಿಎಸ್‌ ಆಯೋಜಿಸಿದೆ.

ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜಿ.ಟಿ.ದೇವೇಗೌಡ, ಕೆ.ಆರ್‌.ನಗರಕ್ಕೆ ಸಾ.ರಾ.ಮಹೇಶ್‌, ಹುಣಸೂರು ಕ್ಷೇತ್ರಕ್ಕೆ ಎಚ್‌.ವಿಶ್ವನಾಥ್‌, ಪಿರಿಯಾಪಟ್ಟಣಕ್ಕೆ ಮಹದೇವ್‌, ಚಾಮರಾಜಕ್ಕೆ ಪ್ರೊ.ರಂಗಪ್ಪ, ನರಸಿಂಹರಾಜಕ್ಕೆ ಸಂದೇಶ್‌ಸ್ವಾಮಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು ಉಳಿದ ಕ್ಷೇತ್ರಗಳಿಗೆ

ಜನವರಿ ಮಾಸಾಂತ್ಯದ ವೇಳೆಗೆ ಅಭ್ಯರ್ಥಿಗಳ ಆಯ್ಕೆ ಮಾಡಿ ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ. ಪ್ರಮುಖವಾಗಿ ಆ ಭಾಗದಲ್ಲಿ ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯದ ಮತಗಳ ಕ್ರೊಢೀಕರಣಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವುದು ನಮ್ಮ ಗುರಿ. ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರಗಳಂತೂ ಜೆಡಿಎಸ್‌ಗೆ ಪ್ರತಿಷ್ಠೆಯಾಗಿದೆ. ಎರಡೂ ಕಡೆ ಗೆಲ್ಲಲು ನಮ್ಮೆಲ್ಲಾ ಶಕ್ತಿ ಧಾರೆ ಎರೆದು ಏನೆಲ್ಲಾ ತಂತ್ರಗಾರಿಕೆ ರೂಪಿಸಬೇಕೋ ಅದನ್ನೆಲ್ಲಾ ಮಾಡುತ್ತೇವೆ. ಮುಂದಿನ ಚುನಾವಣೆ ರಾಜಕೀಯವಾಗಿ ನಮಗೆ ಸವಾಲಿನ ಪ್ರಶ್ನೆ.
-ಎಚ್‌.ಡಿ.ಕುಮಾರಸ್ವಾಮಿ,  ಜೆಡಿಎಸ್‌ ರಾಜ್ಯಾಧ್ಯಕ್ಷ

ಬಿಜೆಪಿಗೆ ರಾಮನಗರ, ಹಾಸನ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿ 6 ಜಿಲ್ಲೆಗಳಲ್ಲಿ ಅಭ್ಯರ್ಥಿಗಳೇ ಇಲ್ಲವಾಗಿದೆ. ಅವರು ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕ ಭಾಗಗಳಲ್ಲಿನ ಜಿಲ್ಲೆಗಳನ್ನು ನಂಬಿಕೊಂಡಿದ್ದಾರೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು ಎಂಬ ಕಾರಣಕ್ಕೆ ಜೆಡಿಎಸ್‌ ಜತೆ ಒಳ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಿದ್ದಾರೆ. 
-ಸಿದ್ದರಾಮಯ್ಯ ಸಿಎಂ 

* ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next