Advertisement

ಸಂಕ್ರಾಂತಿ ಬಳಿಕ ನಿಗಮ, ಮಂಡಳಿ ನೇಮಕ ಭಾಗ್ಯ- ಆಯ್ಕೆಯಾದವರಿಗೆ 2 ವರ್ಷ ಮಾತ್ರ ಅಧಿಕಾರ

02:03 AM Jan 11, 2024 | Team Udayavani |

ಬೆಂಗಳೂರು: ಬಹುನಿರೀಕ್ಷಿತ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಸಂಕ್ರಾಂತಿ ಬಳಿಕ ಪಟ್ಟಿ ಪ್ರಕಟವಾಗುವುದು ಖಚಿತ. ಆದರೆ ಇದರ ಅಧಿಕಾರಾವಧಿ ಎರಡು ವರ್ಷ ಮಾತ್ರ ಎಂದು ನಿರ್ಧರಿಸಲಾಗಿದೆ.

Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 2 ತಿಂಗಳಾದಾಗಲೇ ನಿಗಮ, ಮಂಡಳಿ ಆಕಾಂಕ್ಷಿಗಳ ಒತ್ತಾಯ ಜೋರಾಗಿತ್ತು. ಚಳಿಗಾಲದ ಅಧಿವೇಶನಕ್ಕೂ ಮುನ್ನ, ಅಧಿವೇಶನದ ಅನಂತರ, ಹೊಸವರ್ಷಕ್ಕೆ ಹೀಗೆ ಪಟ್ಟಿ ಪ್ರಕಟಗೊಳ್ಳುವ ವಿಚಾರದಲ್ಲಿ ಹಲವು ದಿನಾಂಕಗಳನ್ನು ಪಕ್ಷದ ನಾಯಕರು ತೋರಿಸಿ ದ್ದರು. ಈ ಮಧ್ಯೆ ಎರಡು ಬಾರಿ ದಿಲ್ಲಿಯಲ್ಲಿ ಸಭೆಗಳೂ ನಡೆದಿದ್ದರೂ ಪಟ್ಟಿಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಈಗ ಪಟ್ಟಿ ಬಿಡುಗಡೆ ಬಗ್ಗೆ ಕಾಂಗ್ರೆಸ್‌ ನಾಯಕರು ಅಧಿಕೃತವಾಗಿ ಘೋಷಿಸಿದ್ದು, ಸಂಕ್ರಾಂತಿ ಬಳಿಕ ಘೋಷಣೆ ಆಗಲಿದೆ ಎಂದು ತಿಳಿಸಿದ್ದಾರೆ.

ಅಧ್ಯಕ್ಷರ ಆಯ್ಕೆ ಪಟ್ಟಿ ಸಿದ್ಧಪಡಿಸಲಿಕ್ಕಾಗಿ ಎರಡು ದಿನ ಮೊದಲೇ ಆಗಮಿಸಿದ್ದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಅಳೆದು-ತೂಗಿ ಸಿಎಂ-ಡಿಸಿಎಂ ಜತೆ ಚರ್ಚಿಸಿ ಪಟ್ಟಿ ಸಿದ್ಧಪಡಿಸಿದ್ದಾರೆ. ಇದಕ್ಕೆ ಅಧಿಕೃತ ಮುದ್ರೆ ಮಾತ್ರ ಬಾಕಿ ಇದೆ. ಎಂದು ಪದಾಧಿಕಾರಿಗಳ ಸಭೆಯಲ್ಲಿ ಘೋಷಿಸಿದ್ದಾರೆ.

ಇದರ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಿಗಮ-ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದ ಮೊದಲ ಪಟ್ಟಿಯನ್ನು ಜ.14ರ ಬಳಿಕ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಮ್ಮುಖದಲ್ಲಿ ಬುಧವಾರ ನಡೆದ ಸಭೆಯ ಬಳಿಕ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಭೆಯ ಮಾಹಿತಿ ನೀಡಿದರು.

Advertisement

ಮಾಜಿ ಸಂಸದರಿಗೆ ರಾಜ್ಯ ಸಮಿತಿ ಅಧ್ಯಕ್ಷ ಸ್ಥಾನ?
ರಾಜ್ಯಮಟ್ಟದಲ್ಲಿ ರಚಿಸಲಾಗುವ ಸಮಿತಿಗೆ ಓರ್ವ ಅಧ್ಯಕ್ಷರು ಇರಲಿದ್ದಾರೆ. ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಡಲಾಗುತ್ತದೆ. ಪಕ್ಷದ ಹಿರಿಯರು, ಮಾಜಿ ಸಂಸದ ಅಥವಾ ಮಾಜಿ ಶಾಸಕರಿಗೆ ಈ ಹುದ್ದೆ ನೀಡುವ ಚಿಂತನೆ ನಡೆದಿದೆ. ಈ ಸಮಿತಿಗೆ ಐವರು ಉಪಾಧ್ಯಕ್ಷರಿರಲಿದ್ದು, ಐವರಿಗೂ ರಾಜ್ಯ ಸಚಿವ ಸ್ಥಾನ ನೀಡಲಾಗುತ್ತದೆ. ಜತೆಗೆ 31 ಸದಸ್ಯರೂ ಇರಲಿದ್ದಾರೆ. ಎಲ್ಲ 31 ಜಿಲ್ಲೆಗಳಿಗೂ ಪ್ರತ್ಯೇಕ ಸಮಿತಿಗಳು ರಚನೆಯಾಗಲಿವೆ.

ಜಿಲ್ಲಾ ಮಟ್ಟದ ಸಮಿತಿಯಲ್ಲಿ ಓರ್ವ ಅಧ್ಯಕ್ಷ, ಉಪಾಧ್ಯಕ್ಷ ಮತ್ತು 21 ಸದಸ್ಯರಿರಲಿದ್ದಾರೆ. 224 ವಿಧಾನಸಭಾ ಕ್ಷೇತ್ರದ ಮಟ್ಟದ ಸಮಿತಿಗೆ ತಲಾ ಓರ್ವ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 11 ಸದಸ್ಯರು ಇರಲಿದ್ದಾರೆ. ಜಿಲ್ಲಾಧ್ಯಕ್ಷರಿಗೆ ಮಾಸಿಕ 50 ಸಾವಿರ ರೂ. ಮತ್ತು ವಿಧಾನಸಭಾ ಕ್ಷೇತ್ರಾಧ್ಯಕ್ಷರಿಗೆ 20ರಿಂದ 25 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿದೆ. ಉಳಿದಂತೆ ಸದಸ್ಯರಿಗೆ ಸಂಚಾರಭತ್ತೆ, ಸಭಾಭತ್ತೆ ಮುಂತಾದ ವಿವಿಧ ರೂಪದ ಭತ್ತೆಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಸರಕಾರ 16 ಕೋಟಿ ರೂ. ಖರ್ಚು ಮಾಡಲಿದೆ.

ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿರುವ ಇಲಾಖೆಗಳ ಸಚಿವರು, ಈ ಸಮಿತಿಗಳನ್ನು ರಚಿಸಲಿದ್ದು, ಸಮಿತಿ ರಚನೆ ಸಂದರ್ಭದಲ್ಲಿ ಪಕ್ಷದ ಶಾಸಕರು ಹಾಗೂ ಸಂಸದರ ಸಲಹೆ ಪಡೆದುಕೊಳ್ಳಬೇಕು. ಈ ಸಮಿತಿಗಳ ಅವಧಿಯೂ 2 ವರ್ಷಗಳವರೆಗೆ ಇರಲಿದೆ. ಅನಂತರ ಸಮಿತಿಯನ್ನು ಪುನಾರಚನೆ ಮಾಡಲಾಗುವುದು. ಗ್ಯಾರಂಟಿ ಜಾರಿಯ ಉಸ್ತುವಾರಿಯೊಂದಿಗೆ ಗ್ಯಾರಂಟಿಯನ್ನು ಪ್ರಚುರಪಡಿಸಲೂ ಈ ಸಮಿತಿ ಶ್ರಮಿಸಲಿದೆ. ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮುಖಂಡರಾದ ವಿ.ಎಸ್‌.ಉಗ್ರಪ್ಪ, ದಿನೇಶ್‌ ಗೂಳಿಗೌಡ, ಸಲೀಂ ಅಹ್ಮದ್‌, ನಾರಾಯಣ ಸ್ವಾಮಿ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next